Site icon TUNGATARANGA

ನಾಯಿಗಳ ಹಾವಳಿ ತಪ್ಪಿಸಲು ಒತ್ತಾಯಿಸಿ ವಿನೋಬನಗರ ಸ್ನೇಹಜೀವಿ ಬಳಗದಿಂದ ಮನವಿ

ಶಿವಮೊಗ್ಗ,ಜು.4: ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಹಿಂಡಿಂಡಾಗಿ ಓಡಾಡುತ್ತ ಒಂಟಿಯಾಗಿ ಓಡಾಡುವವರ ಮೇಲೆ ದಾಳಿ ಮಾಡುತ್ತಿವೆ. ಕೂಡಲೆ ಮಹಾನಗರ ಪಾಲಿಕೆಯು ಈ ಬಗ್ಗೆ ಕ್ರಮ ಕೈಗೊಂಡು ನಾಯಿಗಳ ಹಾವಳಿಯನ್ನು ತಪ್ಪಿಸಬೇಕೆಂದು ಒತ್ತಾಯಿಸಿ ವಿನೋಬನಗರ ಸ್ನೇಹ ಜೀವಿ ಗೆಳೆಯರ ಬಳಗದಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಲಾಯಿತು.

ನಗರದ ಎಲ್ಲಾ ಬಡಾವಣೆಗಳಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಲ್ಲಿ ಭಯ, ಆತಂಕ ಮೂಡಿದೆ. ಬೆಳಗಿನ ಜಾವ ವಾಕಿಂಗ್ ಗೆ ಹೂಗುವವರಿಗೆ, ಮನೆ ಪಾಠಕ್ಕೆ ಹೋಗುವ ಮಕ್ಕಳಿಗೆ ಹಾಗೂ ಮುಂಜಾನೆ ಕೆಲಸಕ್ಕೆ ಹೂಗುವ ಕಾರ್ಮಿಕರಿಗೆ ನಾಯಿಗಳ ಆತಂಕ ಎದುರಾಗಿದೆ. ಇವುಗಳ ನಿಮೂಲನೆಗೆ ಸಂಬಂಧಿಸಿದಂತೆ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ನಿನ್ನೆಯಷ್ಟೆ ವಿದ್ಯಾನಗರ ಬಳಿ ಬಿಹೆಚ್ ರಸ್ತೆಯಲ್ಲಿ ಸುಮಾರು 15ನಾಯಿಗಳು ಹಿಂಡಾಗಿ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ. ಅಲ್ಲೇ ನಡೆದು ಹೋಗುತ್ತಿದ್ದ ಪಾದಚಾರಿಗಳು ಆತಂಕದಿಂದಲೇ ಸಾಗುತ್ತಿದ್ದರು. ಮಳೆಗಾಲದಲ್ಲಿ ನಾಯಿಗಳ ಉಪಟಳ ಹೆಚ್ಚು, ಇತ್ತೀಚೆಗೆ ಹಲವೆಡೆ ಮಕ್ಕಳ ಮೇಲೆ ನಾಯಿಗಳ ಹಿಂಡು ದಾಳಿ ಮಾಡಿ ಜೀವ ತೆಗೆದಿರುವ ಸುದ್ದಿಗಳು ಹರಿದಾಡಿದ್ದು, ಎಲ್ಲರಿಗೂ ತಿಳಿದ ವಿಷಯ ಎಂದು ತಿಳಿಸಿದ್ದಾರೆ.

ಹಿಂದೆ ಪ್ರತೀ ವರ್ಷ ನಾಯಿಗಳನ್ನು ಹಿಡಿಯಲಾಗುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಮಹಾ ನಗರ ಪಾಲಿಕೆಯಿಂದ ಆ ಕೆಲಸ ಆಗುತ್ತಿಲ್ಲ, ನಾಯಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಸಂತಾನಹರಣ ಮಾಡುವ ಟೆಂಡರ್ ನೀಡಲಾಗಿತ್ತು. ನಂತರ ಈ ಕಾರ್ಯ ಕೂಡ ಯಶಸ್ವಿಯಾಗಿ ನಡೆಯಲಿಲ್ಲ ಎಂದು ದೂರಿದ್ದಾರೆ.

ಮಹಾನಗರ ಪಾಲಿಕೆಯು ನಿರ್ಲಕ್ಷವಹಿಸದೆ, ನಾಯಿಗಳ ಹಾವಳಿಯನ್ನು ತಪ್ಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಬಳಗವು ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಬಳಗದ ಗೌರವಾಧ್ಯಕ್ಷ ಶರಶ್ಚಂದ್ರ, ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಸಂತೋಷ್ , ಅರುಣ್, ಕೃಷ್ಣ, ಪ್ರಭಾಕರ್, ಆನಂದ, ಪ್ರಕಾಶ್, ಸುರೇಂದ್ರಕುಮಾರ್ ಸೇರಿದಂತೆ ಬಳಗದ ಇನ್ನಿತರರಿದ್ದರು.

Exit mobile version