ಸಾಗರ(ಶಿವಮೊಗ್ಗ),ಜುಲೈ.೦೪:ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಸಾಗರ ತಾಲ್ಲೂಕಿನ ಸಾಗರ,ಆನಂದಪುರ,ಹೆಗ್ಗೋಡು,ತಾಳಗುಪ್ಪ ಶಾಖೆಗಳಿಂದ ೩೮೦ ಕೋಟಿ ವಹಿವಾಟು ನಡೆಯುತ್ತಿದೆ ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ನ ನೂತನ ನಿರ್ದೇಶಕರಾದ ಗೋಪಾಲಕೃಷ್ಣ ಬೇಳೂರು ಹೇಳಿದರು.
ಅವರು ಮೊದಲ ಭಾರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಪ್ರಥಮಬಾರಿಗೆ ಸಾಗರ ಡಿಸಿಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಶಾಸಕರಾಗಿ ಸಹಕಾರಿ ಕ್ಷೇತ್ರಕ್ಕೆ ಯಾಕೆ ಬಂದರು ಎಂಬ ಕುತೂಹಲ ಸಹಜವಾಗಿರುತ್ತದೆ.ಆದರೇ ಉತ್ತರ ಕರ್ನಾಟಕದಲ್ಲಿ ಬಹುತೇಕ ಶಾಸಕರು,ಮಂತ್ರಿಗಳು ಸಹಕಾರಿ ಕ್ಷೇತ್ರದ ಧುರೀಣರಾಗಿದ್ದಾರೆ.ರೈತರ ನಿರಂತರ ಸಂಪರ್ಕ ಸಹಕಾರಿ ವಲಯದಿಂದ ಸಾಧ್ಯ.ಆದ್ದರಿಂದ ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಸಹಕಾರಿ ಕ್ಷೇತ್ರದ ಲೋಪಗಳ ಮತ್ತು ಕೊರತೆಗಳ ನಿವಾರಣೆಗೆ ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆಯಿಂದ ಅನುಭವ ಪಡೆಯುತ್ತಿದ್ದೇನೆ ಎಂದರು.
ಸಾಗರದ ಡಿಸಿಸಿ ಬ್ಯಾಂಕ್‌ನ ಕಟ್ಟಡ ನಿರ್ಮಾಣದ ಬೇಡಿಕೆಯಿದ್ದು,ನಗರಸಭೆಯಿಂದ ಸೂಕ್ತ ನಿವೇಶನ ಕೊಡಿಸುತ್ತೇನೆ.ಸ್ವಂತ ನಿವೇಶನ ಪಡೆದು ಉತ್ತಮ ಸುಸಜ್ಜಿತ ಆಧುನಿಕ ಮಾದರಿ ಕಟ್ಟಡ ನಿರ್ಮಾಣ ಮಾಡುವ ಕನಸನ್ನು ನನಸು ಮಾಡೋಣ ಎಂಬ ಭರವಸೆ ನೀಡಿದರು.
ಸಾಗರ ತಾಲ್ಲೂಕಿನ ಡಿಸಿಸಿ ಬ್ಯಾಂಕಿನ ೪ ಶಾಖೆಗಳಿಂದ ೨೦೪.೫೮ ಕೋಟಿ ಠೇವಣಿ ಸಂಗ್ರಹವಾಗಿದೆ.ರೈತರಿಗೆ ೧೧೯.೪೮ ಕೋಟಿ ಕೃಷಿ ಸಾಲ ನೀಡಿದೆ.ಸ್ವ-ಸಹಾಯ ಸಂಘಗಳಿಗೆ ೧೫.೧೫ ಕೋಟಿ ಸಾಲ ನೀಡಲಾಗಿದೆ. ಕೃಷಿಯೇತರ ವಾಹನ ಸಾಲ ಹಾಗೂ ಇನ್ನಿತರೆ ೩೯.೯೬ ಕೋಟಿ ರೂಗಳ ಸಾಲ ನೀಡಿರುವ ಮೂಲಕ ಒಟ್ಟು ೧೭೪.೫೯ ಕೋಟಿ ರೂಗಳ ಸಾಲಸ ಗುರಿ ತಲುಪಲಾಗಿದೆ ,ಇದರ ಜೊತೆಯಲ್ಲಿ ಶೇಕಡ ೯೯ ರಷ್ಟು ಸಾಲ ವಸೂಲಾತಿಯಲ್ಲಿ ಪ್ರಗತಿ ಸಾದಿಸಿರುವುದು ಆರೋಗ್ಯಕರ ಸಂಗತಿ ಎಂದರು.
ಈ ಮೊದಲು ೨ ಭಾರಿ ಶಾಸಕರಾಗಿದ್ದಾಗಲೂ ಸಹಕಾರಿ ಕ್ಷೇತ್ರದ ಆಡಳಿತದಲ್ಲಿ ಭಾಗಿಯಾಗಿರಲಿಲ್ಲ.ಕೇವಲ ಸಹಕಾರಿ ಕ್ಷೇತ್ರಗಳ ಪ್ರಮುಖ ಕಾರ್ಯಕ್ರಮಗಳಿಗೆ ಹಾಗೂ ಕಟ್ಟಡಗಳ ಉದ್ಘಾಟನೆಗಳಿಗೆ ಹೋಗುತ್ತಿದ್ದೆ.ಆದರೇ ಪ್ರಸ್ತುತ ಸಾಗರ ತಾಲ್ಲೂಕಿನ ಕೆಳದಿ ವ್ಯಾಪ್ತಿಯ ಮಾಲ್ವೇ ವ್ಯವಸಾಯ ಸೇವಾ ಸಹಕಾರಿ ಸೊಸೈಟಿಯ ನಿರ್ದೇಶಕನಾಗುವ ಮೂಲಕ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಸಹಕಾರಿಗಳ ಅಪೇಕ್ಷೆಯ ಮೇರೆಗೆ ಸ್ಪರ್ದಿಸಿದಾಗ ಸಹಕಾರಿ ಕ್ಷೇತ್ರದ ಪೈಪೋಟಿ,ಸಹಕಾರಿಯ ಪ್ರಾಮುಖ್ಯತೆ ಸೇರಿದಂತೆ ಅನೇಕ ಮಾಹಿತಿಗಳು ಅನುಭವಕ್ಕೆ ಬಂದಿತು ಎಂದರು.
ರೈತರ ಹಿತಕ್ಕಾಗಿ ಆರ್ಥಿಕ ಸದೃಡತೆಗೆ ಪೂರಕವಾಗಿ ಸಹಕಾರಿ ಕ್ಷೇತ್ರವನ್ನು ಉಳಿಸಿ ಬೆಳೆಸಲು ಎಲ್ಲಾ ಸಹಕಾರಿಗಳು ಹಾಗೂ ಸಹಕಾರಿ ಸಂಸ್ಥೆಗಳ ಅಧಿಕಾರಿಗಳು,ಸಿಬ್ಬಂಧಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸುವ ಮೂಲಕ ಸಹಕಾರಿಯ ಕ್ರಾಂತಿ ಮೂಲಕ ರೈತರ ಬದುಕಿಗೆ ಭರವಸೆಯಾಗೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಗರ ತಾಲ್ಲೂಕಿನ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರಾದ ಉಮೇಶ್.ಟಿ,ಮತ್ತು ಬಸವರಾಜ್.ಸಿ.ಎಸ್,ಶ್ರೀಮತಿ ಅರ್ಚನಾ,ಮಾಲತೇಶ್ ಎಸ್, ಹಾಗೂ ಕ್ಷೇತ್ರಾಧಿಕಾರಿಗಳಾದ ಲೋಕೇಶ್ ಎಸ್,ಸ್ವಾಮಿ ಎಂ.ಆರ್, ಇವರುಗಳು ಸಿಬ್ಬಂಧಿಗಳು ಗೋಪಾಲಕೃಷ್ಣಬೇಳೂರು ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೊಳಿಯಪ್ಪ ಮನೆಘಟ್ಟ,ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ ಕಲ್ಸೆ,ನಗರ ಕಾಂಗ್ರೆಸ್ ಅಧ್ಯಕ್ಷ ಸುರೇಶ್‌ಬಾಬು,ನಗರಸಭೆ ಸದಸ್ಯ ರವಿಲಿಂಗಿನಮಕ್ಕಿ,ಸಹಕಾರಿ ಭೀಮನೇರಿ ಆನಂದ ಮೊದಲಾದವರು ಉಪಸ್ಥಿತರಿದ್ದರು.