Site icon TUNGATARANGA

ಸೊರಬ: ರೋಮಾಂಚನದ ಹೋರಿ ಬೆದರಿಸುವ ಹಬ್ಬ

ಚಿಕ್ಕಚೌಟಿಯಲ್ಲಿ ಸಂಭ್ರಮಿಸಿದ ಹೋರಿ ಅಭಿಮಾನಿಗಳು | ಹಬ್ಬ ವೀಕ್ಷಿಸಲು ಭಾರಿ ಜನಸ್ತೋಮ



ಸೊರಬ: ತಾಲೂಕಿನ ಚಿಕ್ಕಚೌಟಿ ಗ್ರಾಮದಲ್ಲಿ ಗ್ಯಾಂಗ್ ಸ್ಟಾರ್ ಬಳಗದಿಂದ ಏರ್ಪಡಿಸಿದ್ದ ಜನಪದ ಕ್ರೀಡೆ ಸಾಂಪ್ರಾದಯಿಕ ಹೋರಿ ಬೆದರಿಸುವ ಹಬ್ಬ ನೋಡುಗರನ್ನು ರೋಮಾಂಚನಗೊಳಿಸಿತು. ಸಾವಿರಾರು ರೈತರು, ಸಾಹಸ ಪ್ರಿಯರು ಹಬ್ಬವನ್ನು ಕಂಡು ಸಂಭ್ರಮಿಸಿದರು.
ಗ್ರಾಮದಲ್ಲಿ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಹೋರಿ ಬೆದರಿಸುವ ಹಬ್ಬ ನಡೆಯಿತು. ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳು, ನೆರೆಯ ತಾಲೂಕು, ಹಾವೇರಿ, ಗದಗ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಾರಿ ಜನಸ್ತೋಮ ಆಗಮಿಸಿತ್ತು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಅತ್ತ ಓಡಿ ಹೋಗುತ್ತಿದ್ದಂತೆಯೆ ಇತ್ತ ನೆರೆದ ಪ್ರೇಕ್ಷಕರಿಂದ ಭಾರಿ ಕೇಕೇ, ಶಿಳ್ಳೆ ಜೋರಾಗಿ ಕೇಳಿ ಬರುತ್ತಿದ್ದವು. ಹಾವೇರಿ ಜಿಲ್ಲೆಯ ಮಾಸೂರು ಗ್ರಾಮದ ದೇವರಾಜ ಅವರ ನಿರೂಪಣೆ ಹಬ್ಬಕ್ಕೆ ಮೆರಗು ತಂದಿ
ಹೋರಿಗಳ ಮಾಲೀಕರು ಹೋರಿಗಳಿಗೆ ಬಗೆ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನುಗಳು ಹಾಗೂ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ಚಿಕ್ಕಚೌಟಿ ಗ್ಯಾಂಗ್‌ಸ್ಟಾರ್, ಚಿನ್ನಾಟದ ಚೆಲುವ, ಆನವಟ್ಟಿ ಪವರ್‌ಸ್ಟಾರ್, ಜಕ್ಕನಹಳ್ಳಿ ಚಲಗಾರ, ಕೆಡಿಎಂ ಕಿಂಗ್, ಹುಲುಗಿನಕೊಪ್ಪದ ಡಾನ್, ಕರ್ನಾಟಕದ ನಂದಿ, ಹುಲುಗಿನಕೊಪ್ಪದ ನಾಯಕ, ಹಾವೇರಿ ಅನ್ನದಾತ, ತಡಸನಹಳ್ಳಿ ಡಾನ್ ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು.
ಸಮಿತಿಯವರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡಿದ್ದರು. ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಸಮಿತಿಯವರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.


ರೈತರ ಜನಪದ ಕ್ರೀಡೆಯಾದ ಹೋರಿ ಹಬ್ಬಕ್ಕೆ ಸರ್ಕಾರದಿಂದ ಪ್ರೋತ್ಸಾಹ ದೊರೆಯಬೇಕು. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಹಾಗೂ ಕರಾವಳಿಯಲ್ಲಿ ಕಂಬಳಕ್ಕೆ ಮಾನ್ಯತೆ ನೀಡಿದಂತೆ, ಮಲೆನಾಡಿನ ಜನಪದ ಕ್ರೀಡೆಗೂ ಮಾನ್ಯತೆ ದೊರೆಯಬೇಕು. ಈ ನಿಟ್ಟಿನಲ್ಲಿ ಹೋರಿ ಮಾಲೀಕರು ಹಾಗೂ ಹೋರಿ ಅಭಿಮಾನಿಗಳು ಹಬ್ಬ ಉಳಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು.
ನಾಗೇಶ್, ಚಿಕ್ಕಚೌಟಿ ಗ್ಯಾಂಗ್‌ಸ್ಟಾರ್ ಹೋರಿ ಮಾಲೀಕ

.

Exit mobile version