ಶಿವಮೊಗ್ಗ : ಸಿಎಂ, ಡಿಸಿಎಂ ಬದಲಾವಣೆ ವಿಚಾರ ಬಗ್ಗೆ ನಾನು ಯಾವುದೇ ರೀತಿಯಲ್ಲೂ ರಿಯಾಕ್ಟ್ ಮಾಡುವುದಿಲ್ಲ ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ನಾವು ಹೈಕಮಾಂಡ್ ನಿಯಮಗಳನ್ನು ಪಾಲಿಸುತ್ತೇವೆ. ಸಿಎಂ ಬದಲಾವಣೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಅನಧಿಕೃತ ಶಾಲೆಗಳು ಇರುವುದು ಗಮನಕ್ಕೆ ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ. ಸೇಪ್ಟಿ ವಿಚಾರದಲ್ಲಿ ಪ್ರತಿವರ್ಷ ರಿನಿವಲ್ ಮಾಡಿಕೊಳ್ಳಬೇಕು. ವಿದ್ಯುತ್, ನೀರನ್ನು ಶಾಲೆಗಳಿಗೆ ಉಚಿತ ನೀಡಿದ್ದೇವೆ. ಇದಕ್ಕಾಗಿ 28 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
ನಿನ್ನೆ ಜನ ಸ್ಪಂದನಾ ಕಾರ್ಯಕ್ರಮ ಚೆನ್ನಾಗಿ ನಡೆದಿದೆ. ಶಿವಮೊಗ್ಗ ಸಿಟಿ ಸಮಸ್ಯೆ ಜಾಸ್ತಿ ಇತ್ತು. ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಎಮ್ಮೆಹಟ್ಟಿ ಗ್ರಾಮದ 13 ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುರಿತು ಬಹಳ ನೋವಾಗಿದೆ. ಕೆಡಿಪಿ ಸಭೆ ಮುಗಿದ ಮೇಲೆ ಗ್ರಾಮಕ್ಕೆ ಹೋಗಿ ಬರುತ್ತೇನೆ. ನಮ್ಮ ಕಡೆಯಿಂದ ಆಗುವ ಸಹಕಾರ ಮಾಡುತ್ತೇವೆ. ಪರಿಹಾರ ಜಾಸ್ತಿ ಮಾಡುವ ಕುರಿತು ಮಾತಾಡುತ್ತೇವೆ. ಕುಟುಂಬದ ಪರವಾಗಿ ಸರ್ಕಾರ ಇರುತ್ತದೆ. ಈ ತರಹದ ಘಟನೆಗಳು ಆಗಬಾರದು ಎಂದು ಹೇಳಿದರು.
ಬೆಲೆ ಏರಿಕೆ ಬಗ್ಗೆ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಸಿದ ಸಚಿವರು, ಬಿಜೆಪಿಯವರಿಗೆ ಪ್ರತಿಭಟನೆ ಮಾಡುವ ಹಕ್ಕು ಅವರಿಗಿದೆಯಾ? ಅವರ ಸರ್ಕಾರದಲ್ಲಿ ಎಷ್ಟೆಲ್ಲ ಬೆಲೆ ಹೆಚ್ಚಳವಾಗಿದೆ. ಒಮ್ಮೆ ಗಮನಿಸಲಿ ಎಂದು ತಿರುಗೇಟು ನೀಡಿದರು.
ಡಿಸಿಸಿ ಬ್ಯಾಂಕ್ ಚುನಾವಣೆ ಒಗ್ಗಟಿನಿಂದ ಮಾಡಿದ್ದಾರೆ. 11 ಸ್ಥಾನ ಗೆದ್ದಿದ್ದಾರೆ ಸಹಕಾರಿ ಬ್ಯಾಂಕ್ ಜನರಿಗೆ ಸಹಕಾರ ಮಾಡಲಿ. ಡಿಸಿಸಿ ಬ್ಯಾಂಕ್ ನೇಮಕಾತಿ ಹಗರಣ ನಡೆದಿದ್ದರೆ ಸರ್ಕಾರ ತನಿಖೆ ಮಾಡುತ್ತದೆ ಎಂದು ಹೇಳಿದರು.