Site icon TUNGATARANGA

ವಾಲ್ಮೀಕಿ ನಿಗಮದ ಹಗರಣ ಮತ್ತು ಅಧಿಕಾರಿ ಆತ್ಮಹತ್ಯೆ ಪ್ರಕರಣ:ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಪ್ರತಿಭಟನೆ, ಪ್ರತಿಭಟನಾಕಾರರನ್ನು ಬಂಧಿಸಿದ ಪೋಲಿಸರು

ಶಿವಮೊಗ್ಗ,ಜೂ.೨೮: ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣ ಮತ್ತು ಅಧಿಕಾರಿ ಆತ್ಮಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಇಂದು ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.


ಪ್ರತಿಭಟನ ಸಭೆಯಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ ಶೋಷಿತ ಪೀಡಿತ ಜನರಿಗಾಗಿ ಮೀಸಲಿಟ್ಟ ಹಣವನ್ನು ಸರ್ಕಾರ ಚುನಾವಣೆಗೆ ಬಳಸಿಕೊಂಡಿದೆ. ಇದು ನಾಚಿಕೇಗೇಡಿನ ವಿಷಯವಾಗಿದ್ದು, ವಾಲ್ಮೀಕಿ ನಿಗಮದ ಹಣವನ್ನು ನುಂಗಿ ನೀರು ಕುಡಿದ ಸರ್ಕಾರ ವಾಲ್ಮೀಕಿ ಮಹರ್ಷಿಗಳಿಗೆ ಅವಮಾನಿಸಿದೆ. ನಿಗಮದ ಅಧಿಕಾರಿ ಚಂದ್ರಶೇಖರ್ ಸರ್ಕಾರ ಭ್ರಷ್ಟಚಾರವನ್ನು ಬಯಲಿಗೆಳೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೃಹಸಚಿವರಾಧಿಯಾಗಿ ಸರ್ಕಾರದ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಮನೆಗೆ ಭೇಟಿ ನೀಡಿದರಷ್ಟೇ ಕುಟುಂಬಕ್ಕೆ ಒಂದು ನಯಾಪೈಸೆ ಪರಿಹಾರ ನೀಡಿಲ್ಲ. ಸರ್ಕಾರ ನೀಡಿದ ಭರವಸೆ ಹುಸಿಯಾಗಿದೆ. ಪ್ರಕರಣದ ಮುಚ್ಚುವ ಯತ್ನ ನಡೆದಿದೆ.

ಇದಕ್ಕೆ ನ್ಯಾಯ ಕೆಳಲು ಬಂದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನ್ಯಾಯಯುತ ಹೋರಾಟಕ್ಕೆ ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಬಂಧನದ ಬೆದರಿಕೆ ವೊಡ್ಡುತ್ತಿದ್ದಾರೆ. ನಾವು ಡಿಸಿ ಕಚೇರಿ ಒಡೆಯಲು ಬಂದಿಲ್ಲ. ಯಾವ ಕಟ್ಟಡ ಒಡೆಯಬೇಕಿತ್ತು ಅದನ್ನು ಈಗಾಗಲೇ ಒಡೆದಿದ್ದೇವೆ. ಸರ್ಕಾರದ ಗೊಡ್ಡು ಬೆದರಿಕೆಗೆ ನಾವು ಬಗ್ಗಲ್ಲ. ಚಂದ್ರಶೇಖರ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆ. ಈ ಭ್ರಷ್ಟ ಸರ್ಕಾರ ತೊಲಗುವವರೆಗೆ ಬಿಡಲ್ಲ ಎಂದರು.


ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಇದು ಅತ್ಯಂತ ನೋವಿನ ಸಂದರ್ಭ ವರ್ಷ ಕಳೆದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಈ ಸರ್ಕಾರದ ನಡವಳಿಕೆ ಇದೇ ರೀತಿ ಮುಂದುವರೆದರೆ ಕಾನೂನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ. ದೇಶಕ್ಕೆ ತುರ್ತು ಪರಿಸ್ಥಿತಿ ತಂದು ಮಾನವ ಹಕ್ಕನ್ನು ನಾಶ ಮಾಡಿದ ಶ್ರೀಮತಿ ಇಂದಿರಾಗಾಂಧಿ ಕುಟುಂಬಕ್ಕೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಶೋಷಿತ ಪೀಡಿತ ಸಮಾಜದ ದುಡ್ಡನ್ನು ತಿಂದವರು ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿಯುವ ಯಾವುದೇ ನೈತಿಕತೆಯಿಲ್ಲ ಎಂದರು.


ಬಳಿಕೆ ಡಿಸಿ ಕಚೇರಿಗೆ ನುಗ್ಗಿ ಮನವಿ ಕೊಡಲು ಯತ್ನಿಸಿದ ಬಿಜೆಪಿ ಮುಖಂಡರಿಗೆ ಪೊಲೀಸರು ಅಡ್ಡಿಪಡಿಸಿ ಜನಸ್ಪಂದನ ಕಾರ್ಯಕ್ರಮ ಇರುವುದರಿಂದ ಯಾವುದೇ ಅಧಿಕಾರಿಗಳು ಇಲ್ಲಿಲ್ಲ ಎಂದಾಗ ಎಲ್ಲರೂ ಕುವೆಂಪು ರಂಗಮಂದಿರದ ಕಡೆಗೆ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆದಿಯಾಗಿ ಮಹಾವೀರ ವೃತ್ತದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಕೆಲವರು ಕುವೆಂಪು ರಂಗಮಂದಿರದ ಕಡೆಗೆ ಓಡಿದರು, ಅಲ್ಲಿ ಕೂಡ ಅವರನ್ನು ವಶಕ್ಕೆ ಪಡೆಯಲಾಯಿತು.


ಪತ್ರಿಭಟನೆಯಲ್ಲಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್, ಪ್ರಮುಖರಾದ ಮೋಹನ್‌ರೆಡ್ಡಿ, ಶಿವರಾಜ್, ಜಗದೀಶ್, ಮಂಜುನಾಥ್ ನವುಲೆ, ಜಯರಾಮ್, ಗಾಯಿತ್ರಿ ಮಲ್ಲಪ್ಪ, ರಶ್ಮಿ ಶ್ರೀನಿವಾಸ್, ಶಿವಾನಂದ, ಮಹೇಶ್ ಮೂರ್ತಿ, ರಾಮು, ವೆಂಕಟೇಶ್ ನಾಯ್ಡು, ಹೆಚ್. ಟಿ. ಬಳಿಗಾರ್, ವಿಶ್ವನಾಥ್, ರಾಜೇಶ್ ಕಾಮತ್, ದಿವಾಕರ್ ಶೆಟ್ಟಿ ಮತ್ತಿತರರು ಇದ್ದರು.

Exit mobile version