Site icon TUNGATARANGA

ಎನ್.ಎಸ್.ಎಸ್. ಗಾಂಧೀಜಿಯವರ ಕನಸಿನ ಭಾರತದ ಪರಿಕಲ್ಪನೆ ರೂಪಿಸಿದ ಯೋಜನೆಯಾಗಿದೆ: ಕುವಿವಿ ಕುಲ ಸಚಿವ ಪ್ರೊ. ಗೋಪಿನಾಥ್ ಎಸ್.ಎಂ.

ಶಿವಮೊಗ್ಗ,ಜೂ.೨೫: ಎನ್.ಎಸ್.ಎಸ್.(ರಾಷ್ಟ್ರೀಯ ಸೇವಾ ಯೋಜನೆ) ಗಾಂಧೀಜಿಯವರ ಕನಸಿನ ಭಾರತದ ಪರಿಕಲ್ಪನೆ ರೂಪಿಸಿದ ಯೋಜನೆಯಾಗಿದೆ ಎಂದು ಕುವೆಂಪು ವಿವಿಯ ಕುಲಸಚಿವ(ಮೌಲ್ಯಮಾಪನ) ಪ್ರೊ. ಗೋಪಿನಾಥ್ ಎಸ್.ಎಂ. ಹೇಳಿದರು.


ಅವರು ಸಹ್ಯಾದ್ರಿ ವಿಜ್ಞಾನ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಜೂ. ೨೪ರಿಂದ ೩೦ರವರೆಗೆ ಆಯೋಜಿಸಿರುವ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು.


ಎನ್‌ಎಸ್‌ಎಸ್ ಎನ್ನುವುದು ಜನ ಜಾಗೃತಿ ಮತ್ತು ಹೊಸ ಬದಲಾವಣೆಗೆ ಪೂರಕವಾಗಿದೆ. ಇದು ಗಾಂಧೀಜಿಯವರ ಕನಸಾಗಿದೆ. ಅವರು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದರು. ಸ್ವಚ್ಛತೆ ಇದ್ದರೆ ದೇವರು ಇದ್ದ ಹಾಗೆ ಎನ್ನುವುದನ್ನು ಎನ್‌ಎಸ್‌ಎಸ್ ಕಲಿಸುತ್ತದೆ. ಜೊತೆಗೆ ಸಾಮರಸ್ಯ, ಸಮಾನತೆ, ಪರಿಸರ ಪ್ರೇಮ, ದೇಶ ಪ್ರೇಮ, ಸ್ವಾವಲಂಬನೆ, ನಾಯಕತ್ವ ಗುಣ ಬೆಳೆಸುತ್ತದೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಹಾ.ಮಾ. ನಾಗಾರ್ಜುನ ಇತ್ತೀಚಿನ ದಿನಗಳಲ್ಲಿ ಎನ್‌ಎಸ್‌ಎಸ್ ಎಂಬುದು ಕಾಲೇಜುಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ. ಪ್ರಸಿದ್ಧಿಯ ಜೊತೆಗೆ ಯುವಕರನ್ನು ಆಕರ್ಷಿಸುತ್ತಿದೆ. ಸೇವಾ ಮನೋಭಾವನೆ ವೃದ್ಧಿಸುತ್ತದೆ ಎಂದರು.
ಈ ಶಿಬಿರದಲ್ಲಿ ಕುವೆಂಪು ವಿವಿ ವ್ಯಾಪ್ತಿಯ ಸುಮಾರು ೭೦ಕ್ಕೂ ಹೆಚ್ಚು ಕಾಲೇಜುಗಳಿಂದ ೧೦೮ ಎನ್‌ಎಸ್‌ಎಸ್ ಸ್ವಯಂ ಸೇವಾಧಿಕಾರಿಗಳು ಭಾಗವಹಿಸುತ್ತಾರೆ. ನಮ್ಮ ಕಾಲೇಜಿನಲ್ಲಿ ಪರಿಸರಕ್ಕೆ ಆದ್ಯತೆ ನೀಡಲಾಗುತ್ತಿದೆ. ಸದ್ಭಾವನ ನಗರ ಎಂಬ ಹೆಸರಿನಲ್ಲಿ ಗಿಡ ಮರಗಳನ್ನು ಬೆಳೆಸಲಾಗುತ್ತಿದೆ. ಸುಮಾರು ಎರಡು ಎಕರೆ ಜಾಗದಲ್ಲಿ ಒಂದೂವರೆ ಸಾವಿರ ಗಿಡಗಳನ್ನು ಈಗಾಗಲೇ ನೆಟ್ಟಿದ್ದೇವೆ. ಎನ್‌ಎಸ್‌ಎಸ್ ಇದಕ್ಕೆ ಸಹಕಾರ ನೀಡುತ್ತದೆ ಎಂದರು.


ಎನ್‌ಎಸ್‌ಎಸ್ ನ ಕುವೆಂಪು ವಿವಿ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಮಾತನಾಡಿ, ಎನ್‌ಎಸ್‌ಎಸ್ ಮನಸ್ಸಿಗೆ ಪುನಶ್ಚೇತನ ನೀಡುತ್ತದೆ. ಕಣ್ಣುಗಳಲ್ಲಿ ಭವಿಷ್ಯದ ಕನಸುಗಳನ್ನು ಅರಳಿಸುತ್ತದೆ. ಕ್ಲಾಸ್ ರೂಮಿನ ನಾಲ್ಕು ಗೋಡೆಗಳಿಂದ ಹೊರ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ. ಸಮಾಜದ ರೋಗಗಳಿಗೆ ಮದ್ದಾಗುತ್ತದೆ. ಅಕ್ಕರೆ ಕಲಿಸುತ್ತದೆ ಎಂದರು.


ವಾಣಿಜ್ಯ ಕಾಲೇಜ್ ಪ್ರಾಂಶುಪಾಲ ಡಾ. ಅವಿನಾಶ್ ಟಿ. ಮಾತನಾಡಿ, ನಿಸ್ವಾರ್ಥ ಸೇವೆಯ ಮತ್ತೊಂದು ರೂಪವೇ ಎನ್‌ಎಸ್‌ಎಸ್ ಬದುಕಿ ಮತ್ತು ಬದುಕಲು ಬಿಡಿ ಎಂಬ ತತ್ವವನ್ನು ಇದು ಸಾರುತ್ತದೆ. ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಭೂತ ಕಾಲದ ಪರಂಪರೆಗಳನ್ನು ವರ್ತಮಾನದಲ್ಲಿ ನಿಂತು ಭವಿಷ್ಯದ ಹಾದಿಗೆ ನೆನಪುಗಳನ್ನು ಉಳಿಸುತ್ತದೆ. ಪರಿಸರ ಪ್ರಜ್ಞೆಯ ಜೊತೆಗೆ ನಾಯಕತ್ವ ಗುಣ ಕಲಿಸುತ್ತದೆ ಎಂದರು.
ವಿದ್ಯಾನಗರ ಕೆನರಾ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕಿ ಶರ್ಮಿಳಾ ರಾಮಕುಮಾರ್ ಅವರು ಎನ್‌ಎಸ್‌ಎಸ್ ಘಟಕಕ್ಕೆ ಸುಮಾರು ೩೩ ಸಾವಿರ ರೂ. ಬೆಲೆ ಸೌಂಡ್ ಸಿಸ್ಟಂ ಅನ್ನು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ರಾಜೇಶ್ವರಿ ಎನ್. ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಸರ್ವೋದಯ ಮಂಡಳದ ಅಧ್ಯಕ್ಷ ಡಾ. ಪ್ರಶಾಂತ್ ವಿ. ಸ್ವಯಂಸೇವಕರ ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಅರುಣ್ ಕುಮಾರ್ ಎನ್.ಸಿ., ಪ್ರಕಾಶ್ ಮರ್ಗನಳ್ಳಿ, ಡಾ. ಮುದುಕಪ್ಪ, ಡಾ. ಪರಶುರಾಮ, ಜಗನ್ನಾಥ್, ವಿದ್ಯಾರ್ಥಿ ಕ್ಷೇಮಾಧಿಕಾರಿ ನಾಗರಾಜ್, ಪರಿಸರ ನಾಗರಾಜ್ ಮೊದಲಾದವರಿದ್ದರು. ಮಂಜುನಾಥ್ ಸ್ವಾಗತಿಸಿದರು.

Exit mobile version