ಸಾಗರ : ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೂ. ೨೪ರಂದು ಶಿವಮೊಗ್ಗದಲ್ಲಿ ರಾಷ್ಟ್ರೀಯ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ (ಡಾ.ಎಚ್.ಗಣಪತಿಯಪ್ಪ ಬಣ) ಅಧ್ಯಕ್ಷ ಡಾ. ರಾಮಚಂದ್ರಪ್ಪ ಮನೆಘಟ್ಟ ತಿಳಿಸಿದರು.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೆಹಲಿ ರೈತ ಹೋರಾಟವನ್ನು ದಕ್ಷಿಣ ಭಾರತದಲ್ಲಿ ಪ್ರಬಲಗೊಳಿಸಲು ಶಿವಮೊಗ್ಗದಲ್ಲಿ ಬೆಳಿಗ್ಗೆ ೧೧ರಿಂದ ರಾಷ್ಟ್ರೀಯ ಹಾಗೂ ರಾಜ್ಯ ರೈತ ಮುಖಂಡರ ಸಮಾವೇಶ ನಡೆಯಲಿದೆ ಎಂದು ಹೇಳಿದರು.
ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲಬೆಲೆ ಕಾನೂನು ಜಾರಿಗೆ ತರಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಬೆಳೆವಿಮೆ ನೀತಿ ಬದಲಾಯಿಸಿ ಪ್ರತಿ ರೈತನ ಹೊಲದ ಬೆಳೆವಿಮೆ ಜಾರಿ ಮಾಡಬೇಕು. ಬರಗಾಲ, ಅತಿವೃಷ್ಟಿ, ಅನಾವೃಷ್ಟಿ, ಮಳೆಹಾನಿ, ಪ್ರವಾಹ ಹಾನಿ, ಪ್ರಕೃತಿ ವಿಕೋಪದ ಹಾನಿ, ಬೆಳೆನಷ್ಟ ಪರಿಹಾರದ ಎನ್.ಡಿ.ಎಫ್. ಪರಿಹಾರ ಮಾನದಂಡ ತಿದ್ದುಪಡಿ ಮಾಡುವಂತೆ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.
ಕೇಂದ್ರ ಸರ್ಕಾರ ರಾಜ್ಯದ ರೈತರ ಉತ್ಪನ್ನಗತಳ ಎಂ.ಎಸ್.ಪಿ. ಖರೀದಿ ಅನುದಾನ ಪ್ರಮಾಣವನ್ನು ಏರಿಕೆ ಮಾಡಬೇಕು. ಪಂಜಾಬ್, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಕೃಷಿ ಉತ್ಪನ್ನಗಳನ್ನು ರೈತರಿಂದ ಶೇ. ೪೫ರಷ್ಟು ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ. ಆದರೆ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಕೇವಲ ಮೂರರಷ್ಟು ಖರೀದಿ
ಖರೀದಿ ಕೇಂದ್ರಗಳ ಮೂಲಕ ಅನುದಾನ ನೀಡುತ್ತಿದ್ದಾರೆ. ಕೇಂದ್ರದ ತಾರತಮ್ಯನೀತಿಯಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಓಟಿಎಸ್ ಸಾಲಮೇಳ ನಡೆಸಿ ಹೊಸ ಸಾಲ ವಿತರಿಸಬೇಕು ಎಂದು ಸರ್ಕಾರ ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಆದೇಶ ನೀಡಿದೆ. ಎಸ್.ಎಲ್.ಬಿ.ಸಿ. ಸಹ ಮೆಗಾ ಅದಾಲತ್ ನಡೆಸಲು ಸೂಚಿಸಿದೆ. ತಕ್ಷಣ ಬ್ಯಾಂಕ್ ಮೆಗಾ ಅದಾಲತ್ ನಡೆಸದೆ ಹೋದಲ್ಲಿ ರೈತ ಸಂಘ ಬ್ಯಾಂಕ್ ಎದುರು ಪ್ರತಿಭಟನೆ ನಡೆಸುತ್ತದೆ. ಕಳಪೆ ರಸಗೊಬ್ಬರ ಕೀಟನಾಶಕ ಬಿತ್ತನೆಬೀಜ ಮಾರಾಟ ಮಾಡುವ ಮಾರಾಟಗಾರರ ವಿರುದ್ದ ಜಾಮೀನುರಹಿತ ಬಂಧನ ಮಾಡುವ ಕಠಿಣ ಕಾನೂನು ಜಾರಿಗೆ ತರಬೇಕು. ಆಗ ರೈತರಿಗೆ ಮೋಸವಾಗುವುದು ತಪ್ಪುತ್ತದೆ.
ರೈತ ಹಿತಕ್ಕಾಗಿ ಅನೇಕ ಬೇಡಿಕೆಗಳನ್ನು ಸಮಾವೇಶದಲ್ಲಿ ಸರ್ಕಾರದ ಎದುರು ಮಂಡಿಸಲಾಗುತ್ತದೆ. ತಾಲ್ಲೂಕಿನ ರೈತ ಬಾಂಧವರು ಸಮಾವೇಶದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ರೈತ ಸಂಘದ ಕಾರ್ಯದರ್ಶಿ ಭದ್ರೇಶ್ ಬಾಳಗೋಡು ಮಾತನಾಡಿ ರೈತರ ವಿವಿಧ ಬೇಡಿಕೆಗಳನ್ನು ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಈಡೇರಿಸಿ ಕೊಳ್ಳಲು ಈ ಸಮಾವೇಶ ಅತ್ಯಂತ ಮುಖ್ಯವಾದ ನಿರ್ಣಯ ಕೈಗೊಳ್ಳಲಿದೆ. ರೈತರು ಸಂಘಟನಾತ್ಮಕವಾಗಿ ಇದ್ದಾಗ ಮಾತ್ರ ಸರ್ಕಾರದ ಮೇಲೆ ಒತ್ತಡ ತಂದು ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಬೇರೆಬೇರೆ ರಾಜ್ಯದ ೩೦ಕ್ಕೂ ಹೆಚ್ಚು ರೈತ ಮುಖಂಡರು ಸಮಾವೇಶದಲ್ಲಿ ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ ಎಂದು ಹೇಳಿದರು. ಗೋಷ್ಟಿಯಲ್ಲಿ ಮೇಘರಾಜ ಪಡವಗೋಡು ಹಾಜರಿದ್ದರು.