Site icon TUNGATARANGA

ಮಾಜಿ ಸಿಎಂ ಬಿ.ಎಸ್‌.ವೈ.ವಿರುದ್ದ ಪೋಕ್ಸೋ ಪ್ರಕರಣ ಕಾಂಗ್ರೇಸ್ ವಿರುದ್ದ ಬಿಜೆಪಿ ಅಕ್ರೋಶ

ಶಿವಮೊಗ್ಗ,ಜೂ.14: ರಾಜ್ಯ ಸರ್ಕಾರ ಹಗೆತನದ ಮತ್ತು ಹೇಡಿತನದ ರಾಜಕಾರಣ ಆರಂಭಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಂದು ಜಿಲ್ಲಾ ಬಿಜೆಪಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಅಸಹ್ಯಕರ ರಾಜಕಾರಣವನ್ನು ಆರಂಭಿಸಿದೆ, ಪೋಕ್ಸೋ ಪ್ರಕರಣ ದಾಖಲಾಗಿರುವ ಮಾಜಿ

ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಚುನಾವಣೆ ಸಂದಭರ್ದಲ್ಲಿ ಬಂಧಿಸಿದರೆ ಮತಗಳು ಬರುವುದಿಲ್ಲ ಎಂಬ ಮುಂದಾಲೋಚನೆಯಲ್ಲಿ ಸುಮ್ಮನಿದ್ದು, ಈಗ ಬಂಧಿಸಲು ವಾರೆಂಟ್ ತರಲಾಗಿದೆ ಎಂದು ದೂರಿದರು.

ಮಾ.4 ರಂದು ಯಡಿಯೂರಪ್ಪನವರ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಅಂದೇ ಗೃಹ ಸಚಿವರಾದ ಡಾ. ಪರಮೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ದೂರುದಾರರೆ ಮಾನಸಿಕ ಅಸ್ವಸ್ಥೆಯಾಗಿದ್ದಳು, ಈಕೆ  ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಸುಮಾರು 50 ಜನರ ಮೇಲೆ ಈಗಾಗಲೇ ಮಹಿಳೆ ಕೇಸು ದಾಖಲಿಸಿದ್ದಾರೆ ಎಂದು ಹೇಳಿದ್ದರು, ಆದರೆ ಈಗ ಆ ಬಗ್ಗೆ ಮಾತನಾಡುತ್ತಿಲ್ಲ ಎಂದರು.

ಸಂತ್ರಸ್ಥೆಯ ಪರವಾಗಿ ದೂರು ನೀಡಿದ್ದ ಮಹಿಳೆ ಈಗಾಗಲೇ ತೀರಿಕೊಂಡಿದ್ದಾರೆ. ಆದರೂ ಯಡಿಯೂರಪ್ಪನವರನ್ನು ಮಣಿಸುವ ಸಲುವಾಗಿ ಸಂಬಂಧಗಳನ್ನು ಮುಂದಿಟ್ಟು ಬಂಧಿಸುವ ಯತ್ನ ನಡೆಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಡಬಲ್ ಡಿಜಿಟ್ ತಲುಪಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರಕ್ಕೆ ನಡೆದ ಭ್ರಷ್ಟಾಚಾರದಿಂದ ಸಚಿವರ ತಲೆದಂಡವಾಗಿದೆ. ಪೇಸಿಎಂ ಅಭಿಯಾನ ನಡೆಸಿದ್ದರಿಂದ ಬಿಜೆಪಿ ನೀಡಿದ ದೂರಿಗೆ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನ್ಯಾಯಾಲಯಕ್ಕೆ ಹೋಗಿ ಬಂದಿದ್ದಾರೆ. ಈ ಸೇಡು ತೀರಿಸಿಕೊಳ್ಳಲು ಸರ್ಕಾರ ಈಗ ಮುಂದಾಗಿದೆ ಎಂದರು.

ಮೂರು ತಿಂಗಳ ಹಿಂದೆ ದಾಖಲಾಗಿದ್ದ ಈ ಪ್ರಕರಣದ ಬಗ್ಗೆ ಅಂದೇ ತನಿಖೆ ನಡೆಸಬಹುದಿತ್ತು, ಅದನ್ನು ಬಿಟ್ಟು ವೈಯುಕ್ತಿಕ ದ್ವೇಷಕ್ಕಾಗಿ ಈಗ ಯಡಿಯೂರಪ್ಪನವರನ್ನು ಬಂಧಿಸಲು ಸರ್ಕಾರ ಮುಂದಾಗಿರುವುದು ಹೇಡಿತನ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ದತ್ತಾತ್ರಿ, ಹರಿಕೃಷ್ಣ, ಸಿ.ಎಚ್. ಮಾಲತೇಶ್, ಶಿವರಾಜ್, ವಿನ್ಸೆಂಟ್ ರೋಡ್ರಿಗಸ್, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಇದ್ದರು.

Exit mobile version