ಶಿವಮೊಗ್ಗ,ಜೂ.08:
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನನ್ನ ಸೋಲಿಗೆ ನಾನೇ ನೇರ ಕಾರಣ. ನನ್ನಲ್ಲಿ ಏನೋ ಕೊರತೆ ಆಗಿರಬೇಕು. ಮತದಾರರು ನನಗೆ ಮತ ನೀಡಿಲ್ಲ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ಆಯನೂರು ಮಂಜುನಾಥ್ ಇಂದಿಲ್ಲಿ ಹೇಳಿದರು.
ಅವರಿಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಬುದ್ಧಿವಂತರ ಅದರಲ್ಲೂ ಸರ್ಕಾರಿ ನೌಕರರನ್ನೇ ಹೆಚ್ಚಾಗಿ ಹೊಂದಿರುವ ಈ ಕ್ಷೇತ್ರದ ಮತದಾರರು ಹಣ ಹೆಂಡದ ಆಮಿಷಕ್ಕೆ ಬಲಿಯಾಗಿದ್ದು ದುರಂತದ ಸಂಗತಿ ಎಂದರು.
ಇಡೀ ಸುದ್ದಿಗೋಷ್ಠಿಯುದ್ದಕ್ಕೂ ಎಲ್ಲಿಯೂ ಬೇಸರವನ್ನು ಕಿಂಚಿತ್ತೂ ತೋರಿಸದೆ, ವೇತನ ತಾರತಮ್ಯ ಪಿಂಚಣಿ ನೌಕರ ವಿರೋಧಿ ಮನೋಸ್ಥಿತಿ ಬಂದಾಗ ಸರ್ಕಾರದ ವಿರುದ್ಧ ಅತ್ಯಂತ ಗಟ್ಟಿಯಾಗಿ ಪ್ರಶ್ನಿಸಿ ಬಡಿದಾಡಿದ್ದ ನನಗೆ ಮತ ನೀಡದಿರುವುದನ್ನು ಯೋಚಿಸಿದರೆ ನನ್ನಲ್ಲಿ ಏನೋ ಕೊರತೆ ಕಾಣಿಸಿದೆ ಎಣಿಸುತ್ತದೆ ಎಂದರು.
ಚುನಾವಣೆಯಲ್ಲಿ ನನ್ನ ಪರವಾಗಿ ಧ್ವನಿ ಎತ್ತಿದ ಎಲ್ಲಾ ಪಕ್ಷದ ಪ್ರಮುಖರಿಗೆ ಕಾರ್ಯಕರ್ತರಿಗೆ ವಿಶೇಷವಾಗಿ ನನಗೆ ಮತ ನೀಡಿದ ಎಲ್ಲ ಮತದಾರರಿಗೆ ಹಾಗೂ ಮತ ನೀಡದೆ ನನ್ನ ಕೊರತೆಯನ್ನು ಹುಡುಕಿದ ಮತದಾರರಿಗೂ ಸಹ ಆತ್ಮೀಯವಾದ ಅಭಿನಂದನೆಗಳು ಎಂದು ಮಾತಿನ ವರಸೆಯಲ್ಲಿ ತಿರುಗುಬಾಣ ನೀಡಿದ ಆಯನೂರು ಮಂಜುನಾಥ್ ಎನ್‌ಪಿಎಸ್ ಬಗ್ಗೆ ಮಾತನಾಡದವರಿಗೆ ಅತಿ ಹೆಚ್ಚು ಮತ ನೀಡಿದ್ದಾರೆ. ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗೆ ನನ್ನ ಅಭಿನಂದನೆಗಳು ಎಂದರು.
ನನ್ನ ಉಸಿರಿರುವವರೆಗೂ ದೇಹದ ಶಕ್ತಿ ಹಾಗೂ ಹೋರಾಟದ ಮನೋಸ್ಥಿತಿಯಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಹೋರಾಟ ಮಾಡುತ್ತೇನೆ ಯಾವುದೇ ಮುಲಾಜುಗಳಿಲ್ಲ. ಕೇವಲ ನಾಲ್ಕೈದು ಸಾವಿರ ರೂಪಾಯಿ ನಲ್ಲಿ ಒಪಿಎಸ್ ಬೇಡ ಎಂದು ನಿರ್ಧರಿಸಿದ್ದೀರಾ?, ಅದನ್ನು ಪಡೆದ ನೀವುಗಳು ಧನ್ಯರು. ನಿಮ್ಮ ಕ್ಷಣಿಕ ಮಾನಸಿಕ ದೌರ್ಬಲ್ಯಗಳಿಂದ ಇಂತಹದೊಂದು ಸೋಲು ಕಾಣಬೇಕಾಯಿತೇನೋ ಎಂದು ನಾ ಹೇಳಲಾರೆ. ನನ್ನಲ್ಲೇ ಏನೋ ಸಮಸ್ಯೆ ಇದೆ ಎನಿಸುತ್ತದೆ. ಇದರ ಸಂಪೂರ್ಣ ಹೊಣೆಗಾರಿಕೆ ನನ್ನದೇ ಆಗಿದೆ ಎಂದರು.
ಈಗಲೂ ನೌಕರರ ಕಾರ್ಮಿಕರ ಹಿತದ ಪ್ರಶ್ನೆ ಬಂದಾಗ ನನ್ನ ಮನೆ ಹಾಗೂ ಮನದ ಬಾಗಿಲು ತೆರೆದಿರುತ್ತದೆ ಸೋಲಿನ ಹೊಣೆಯನ್ನು ನನ್ನ ಹೆಗಲ ಮೇಲೆ ನಾನೇ ಹಾಕಿಕೊಳ್ಳುವೆ ಆದರೆ ಬುದ್ಧಿವಂತರೆನಿಸಿಕೊಂಡವರು ಉದ್ಯೋಗದಲ್ಲಿರುವವರು ಸಹ ಕೇವಲ ಕಿಂಚಿತ್ತು ಕಾಸಿಗೆ ಹೆಂಡಕ್ಕೆ ಬಲಿಯಾಗಿದ್ದು ದುರಂತವೇ ಹೌದು. ನಿಜಕ್ಕೂ ಇದು ನನ್ನ ಬಗ್ಗೆ ನನಗೆ ನೂರಾರು ಪ್ರಶ್ನೆಗಳನ್ನು ಹುಟ್ಟಿಸಿದೆ ಎಂದರು.
ನೈರುತ್ಯ ಪದವೀಧರರ ಚುನಾವಣೆ ಈ ಬಾರಿ ಒಂದು ಹೊಸ ದಾಖಲೆಯನ್ನು ನಿರ್ಮಿಸಿದೆ. ನನ್ನ ಪ್ರತಿಸ್ಪರ್ಧಿಯಾಗಿದ್ದವರು ಮಾಡಿದ ದಾಖಲೆ ಅತ್ಯಂತ ಗಂಭೀರ ಹಾಗೂ ಗಮನೀಯವಾದದು. ಹಣದ ಹೆಂಡದ ಜಾತಿ ಹಾಗೂ ಒಳ ಜಾತಿಯ ಸಾಮಾಜಿಕ ಪಿಡುಗಿನ ಅನಿಷ್ಟಗಳು ಈ ಚುನಾವಣೆಯಲ್ಲಿ ದಾಖಲಾಗಿವೆ. ಇದರ ಪರಿಣಾಮ ವಿದ್ಯಾವಂತರ ಕ್ಷೇತ್ರ ಅತ್ಯಂತ ಕಲುಷಿತವಾಗಿದೆ ಎಂದು ಆಯನೂರು ತಿಳಿಸಿದರು.
ನಾನು ಸಾವಿರ 1994 ರಿಂದ 10 ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಿದ್ದೇನೆ. ಸೋಲು ಹಾಗೂ ಗೆಲುವನ್ನು ಕಂಡಿದ್ದೇನೆ ಆದರೆ ಇಂತಹ ಚುನಾವಣೆಯನ್ನು ನಾನು ನೋಡಿಯೇ ಇಲ್ಲ ಯಾರದೋ ಮರ್ಜಿಗೆ ವ್ಯಾಮೋಹಕ್ಕೆ ಬಲಿಯಾಗುವಂತಹ ಪ್ರಜ್ಞಾವಂತ ಮತದಾರರು ಈ ನಮ್ಮ ಕ್ಷೇತ್ರದಲ್ಲಿರುವುದು ನಿಜಕ್ಕೂ ದುರಂತದ ವಿಷಯ ಎಂದರು.
ಎನ್‌ಪಿಎಸ್ ಆಧಾರದಲ್ಲಿ ಉದ್ಯೋಗದಲ್ಲಿರುವವರು ಮುಂದೆ ಅನಾಥ ಹೆಣಗಳಾಗಬಾರದು ಎಂದು ಸದನದಲ್ಲಿ ಬಡಿದಾಡಿದ್ದೆ. ಬಾಯಿಯೇ ಇಲ್ಲದ ಪೊಲೀಸರ ಪರ ಧ್ವನಿಯಾಗಿ ಮಾತನಾಡಿದ್ದೇನೆ. ನೌಕರರ ವಿಷಯದಲ್ಲಿ ನಾನು ಸ್ಪರ್ಶಿಸದ ವಿಷಯವೇ ಇಲ್ಲ ಆದರೆ ಕಳೆದ ಮೂರು ನಾಲ್ಕು ದಿನಗಳಿಂದ ಈ ಮತದಾರವರ್ಗ ಬದಲಾಗಿದ್ದು ನನ್ನಲ್ಲಿ ಬಹಳ ದೊಡ್ಡ ಪ್ರಶ್ನೆಯನ್ನು ಹುಟ್ಟು ಹಾಕಿದೆ. ನಾನು ಯಾರಿಗಾಗಿ ಯಾವುದನ್ನು ಸರಿ ಮಾಡಲು ಹೊರಟಿದ್ದೇನೆ. ನೌಕರರು ನನ್ನ ಪರವಾಗಿ ಮಾತನಾಡಿದ್ದಾರೆ. ಆದರೆ ಮತವಾಗಿ ಬದಲಾವಣೆಯಾಗಿಲ್ಲ. ಬಹುಷ್ಯ ನನಗಿಂತ ಅರ್ಹತೆ ಉಳ್ಳಂತಹ ಪ್ರತಿನಿಧಿಯನ್ನು ಆಯ್ಕೆ ಮಾಡಿರಬೇಕು. ನೌಕರರ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದ ನನಗೆ ಸೋಲಾಗಿದೆ. ಅದರ ಬಗ್ಗೆ ಮಾತನಾಡದವರಿಗೆ ಗೆಲುವಾಗಿದೆ ಎಂದರು.
ನಾನು ಇಲ್ಲಿಯವರೆಗೆ 30 ವರ್ಷಗಳ ಕಾಲ ಚುನಾವಣಾ ಜಗತ್ತಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಯಾವುದೇ ಭ್ರಷ್ಟಾಚಾರವನ್ನು ಮೈಮೇಲೆ ಹಾಕಿಕೊಳ್ಳದೆ ಸಮರ್ಥವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಈ ಆಯ್ಕೆಯನ್ನು ನಾನು ಪ್ರಶ್ನಿಸದೆ ಗೌರವಿಸುತ್ತೇನೆ. ಕೆಲವೊಮ್ಮೆ ಅಭ್ಯರ್ಥಿ ಸೋಲುತ್ತಾನೆ. ಅದರಲ್ಲಿ ಮತದಾರನ ಸೋಲು ಇರಬಹುದು. ನಾನು ನನ್ನ ಸೋಲನ್ನು ನನ್ನ ಮೈ ಮೇಲೆ ಹಾಕಿಕೊಂಡು ನಾನೇ ಹೊಣೆಗಾರನಾಗಿ ಇರುತ್ತೇನೆ ಎಂದರು.
ವಿದ್ಯಾವಂತರ ಬುದ್ಧಿವಂತರ ಸರ್ಕಾರಿ ನೌಕರರ ಈ ಚುನಾವಣೆ ಒಂದು ಮಾಮೂಲಿ ಸಾಮಾನ್ಯ ಚುನಾವಣೆ ಮಟ್ಟಕ್ಕೆ ಇಳಿದದ್ದು ನಾಚಿಕೆಗೇಡಿನ ವಿಚಾರ. ಮತಗಟ್ಟೆಗಳ ಬಳಿ ನಿಂತು ಹಣ ಹಂಚಿದ್ದು ಎಷ್ಟೊಂದು ಸರಿ? ಈ ವ್ಯವಸ್ಥೆ ಇಷ್ಟೊಂದು ಇಳಿಯಬಾರದಿತ್ತು. ನನ್ನ ನಿಲುವುಗಳಲ್ಲಿ ನಾನು ಯಾವಾಗಲೂ ಸೋತಿಲ್ಲ. ಈ ಚುನಾವಣೆ ಸೋಲಿನಿಂದ ಯಾವ ಬೇಸರವೂ ಇಲ್ಲ. ಸಮರ್ಥರ ಮೊಟ್ಟ ಮೊದಲ ಆಯ್ಕೆ ಹಣದ ಹೆಂಡದ ಆಯ್ಕೆಯಾಗಿದೆ ಎಂದು ಮಂಜುನಾಥ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಚುನಾವಣೆ ವಿದ್ಯಾವಂತರ ನೈತಿಕತೆಯನ್ನೇ ಪ್ರಶ್ನೆ ಮಾಡಿದೆ. ಒಂದು ದಿನದ ಚಪಲಕ್ಕಾಗಿ ಇಡೀ ಮತ ಬಲಿಯಾಗಿರುವುದು, ಅದರಲ್ಲೂ ಶಿಕ್ಷಕರು, ಸರ್ಕಾರಿ ನೌಕರರು ಇಂತಹ ಕೆಲಸ ಮಾಡಿದ್ದಾರೆ ಎಂದರೆ ಇದು ಅರ್ಥವಾಗದ ಮಾದರಿ ಎನಿಸುತ್ತದೆ. ಇಡೀ ಸುದ್ದಿಗೋಷ್ಠಿಯುದ್ದಕ್ಕೂ ತಮ್ಮ ಬಗ್ಗೆ ತಾವು ಸೋಲನ್ನು ಒಪ್ಪಿಕೊಳ್ಳುತ್ತಾ ವ್ಯವಸ್ಥೆ ಬದಲಾದ ಬಗ್ಗೆ ಅತ್ಯಂತ ಸ್ಪಷ್ಟ ಧ್ವನಿಗಳಲ್ಲಿ ಮನಬಿಚ್ಚಿ ಮಾತನಾಡಿದ ಮಂಜುನಾಥ್ ಅವರು ನಿತ್ಯವಂತರ ನೈತಿಕತೆಯನ್ನು ಪ್ರಶ್ನಿಸ ಬೇಕಾಗಿರುವುದು ದುರಂತವಾಗಿದೆ ಹಿರಿಯರ ಮನೆ ಈಗ ಬಂಡವಾಳಸ್ತರ ಮನೆಯಾಗಿ ಪರಿವರ್ತನೆಯಾಗಿರುವುದು ದುರಂತವೇ ಹೌದು. ನನ್ನ ಸೋಲಿನ ಹೊಣೆ ನನ್ನದೇ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ವೈ ಹೆಚ್ ನಾಗರಾಜ್, ನೇತ್ರಾವತಿ, ಶಿ.ಜು. ಪಾಶಾ ಜಿ.ಪದ್ಮನಾಬ್, ಚೆನ್ನೇಶ್, ಕೃಷ್ಣ, ಧೀರರಾಜ್ ಹೊನ್ನವಿಲೆ, ಚಾಮರಾಜ, ಲಕ್ಷ್ಮಣಪ್ಪ, ಸೈಯದ್ ಅಡ್ಡು ಹಾಗೂ ಇತರರು ಉಪಸ್ಥಿತರಿದ್ದರು.