ಸಾಗರ, ಜೂ.೫- ಈ ದೇಶಕ್ಕೆ ಮೋದಿ ನಾಯಕತ್ವವನ್ನು ಜನರು ಬೆಂಬಲಿಸಿದ್ದಾರೆ. ಅವರು ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಜಿಲ್ಲೆಯಲ್ಲೂ ಬಿ.ವೈ.ರಾಘವೇಂದ್ರ ಅವರು ಜನಸ್ನೇಹಿಯಾಗಿ ಕೆಲಸ ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳು ಮತಗಳಾಗಿ ಪರಿವರ್ತನೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಘವೇಂದ್ರ ಅವರು ೨ ಲಕ್ಷ ೪೦ ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಸಾಗರ ಕ್ಷೇತ್ರದಲ್ಲಿ ೨೭ ಸಾವಿರ, ಸೊರಬದಲ್ಲಿ ೧೮ ಸಾವಿರ ಮತಗಳ ಲೀಡ್ ಬಂದಿದೆ. ಸಚಿವರ ಕ್ಷೇತ್ರದಲ್ಲೂ ಬಿಜೆಪಿ ಲೀಡ್ ಪಡೆದಿದೆ ಎಂದರು. ಬಿಜೆಪಿಯನ್ನು ಬೆಂಬಲಿಸಿದ ಎಲ್ಲ ಮತದಾರರಿಗೆ, ಶ್ರಮಿಸಿದ ಪಕ್ಷದ ಎಲ್ಲ ಹಂತದ ಕಾರ್ಯರ್ಕರಿಗೆ ಕೃತಜ್ಞತೆಗಳು ಎಂದರು.
ಶಿಕ್ಷಣ ಸಚಿವರಾಗಿ ಮಧು ಬಂಗಾರಪ್ಪನವರು ಜನವಿರೋಧಿ ಕೆಲಸ ಮಾಡಿದ್ದಾರೆ. ಹಿಂದೆ ಶಿಕ್ಷಣ ಸಚಿವರಾಗಿದ್ದ ಗೋವಿಂದೇ ಗೌಡರು, ವಿಶ್ವನಾಥ್ ಅವರು ಇಲಾಖೆಗೆ ಗೌರವ ತಂದುಕೊಟ್ಟಿದ್ದರು. ಮಾದರಿ ಎನ್ನುವಂತೆ ಕೆಲಸ ಮಾಡಿದ್ದರು. ಆದರೆ ಮಧು ಬಂಗಾರಪ್ಪನವರು ಸಚಿವರಾಗಿ ಕಳಪೆ ಕೆಲಸ ಮಾಡುತ್ತಿದ್ದಾರೆ. ಇಂಥ ಸಚಿವರನ್ನು ಈವರೆಗೆ ಕಂಡಿರಲಿಲ್ಲ. ೯ ನೇ ತರಗತಿಯವರೆಗೆ ಯಾರನ್ನೂ ಫೇಲ್ ಮಾಡಬಾರದು ಎಂದು ಹೇಳುವ ಮೂಲಕ ಪಬ್ಲಿಕ್ ಫಲಿತಾಂಶ ಕೊಟ್ಟಿಲ್ಲ. ಮಂತ್ರಿ ಆಗಿರುವುದೇ ಅವರಿಗೆ ಬಂದಿರುವ ದುರಂಹಕಾರ. ಈಗ ಅವರಿಗೆ ಪಕ್ಷದ ಯಾವ ಮುಖಂಡರು, ಕಾರ್ಯಕರ್ತರು ಬೇಡವಾಗಿದ್ದಾರೆ. ೧೦ ತಿಂಗಳಿಗೆ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ನೀಡಿದ ಗ್ಯಾರಂಟಿ ಅವರ ಕೈ ಹಿಡಿಯುತ್ತದೆ ಎಂದು ತಿಳಿದಿದ್ದರು. ಹಾಗಾಗಿ ಕಾರ್ಯಕರ್ತರನ್ನು ಕಡೆಗಣಿಸಿ ಮನೆಯಲ್ಲಿದ್ದ ಗೀತಕ್ಕನವರನ್ನು ನಿಲ್ಲಿಸಿದ್ದರು. ಈ ಕ್ಷೇತ್ರದಲ್ಲಿ ೧ ಲಕ್ಷ ಮತ ಕೊಡಿಸುತ್ತೇನೆ ಎಂದು ಶಾಸಕ ಬೇಳೂರು ಡಿ.ಕೆ.ಶಿವಕುಮಾರ್ ಅವರಿಗೆ ಭರವಸೆ ನೀಡಿದ್ದರು. ಆವಿನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ೭೫೦೦ ಕ್ಕೂ ಹೆಚ್ಚು, ಗಟ್ಟಿ ನೆಲೆಯಾಗಿರುವ ಕಸಬಾದಲ್ಲಿ ಸಮಸಮ ಮತಗಳು ಬಂದಿವೆ. ಪಟ್ಟಣದಲ್ಲಿ ೫ ಸಾವಿರ, ಗ್ರಾಮಾಂತರದಲ್ಲಿ ೨೦ ಸಾವಿರ ಮತಗಳ ಲೀಡ್ ಬಂದಿದೆ. ಕಳೆದ ೧೨ ತಿಂಗಳಿಂದ ಶಾಸಕರಾಗಿ ತಮ್ಮ ಅಹಂಕಾರದ ಮಾತಿಗೆ ಜನರು ಉತ್ತರ ಕೊಟ್ಟಿದ್ದಾರೆ. ಆಡಳಿತ ವಿರೋಧಿಯಾದರೆ ಜನರು ಹೇಗೆ ಉತ್ತರ ಕೊಡುತ್ತಾರೆ ಎಂಬುದು ನಿಜವಾಗಿದೆ ಎಂದು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಶ್ನೆಪತ್ರಿಕೆ ಹಗರಣ ರಾಜ್ಯದಲ್ಲಿ ನಡೆದಿದೆ. ೨೩ ಪೈಸೆಯ ಪ್ರಶ್ನೆ ಪತ್ರಿಕೆಯನ್ನು ೬೩ ಪೈಸೆಗೆ ಏರಿಸಿ ೨ ಪಟ್ಟು ಹೆಚ್ಚು ತೋರಿಸಿ ನೂರಾರು ಕೋಟಿ ರೂ. ಹಣ ದೋಚಲಾಗಿದೆ. ಜಿಲ್ಲೆಯಲ್ಲಿ ಅಧಿಕಾರಿಗಳಿಂದ ವಸೂಲಿ ಮಾಡಲು ‘ಮಂಜುನಾಥ’ನ ಹುಂಡಿ ಇಡಲಾಗಿದೆ. ಇಡೀ ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿಗಳೇ ಸಚಿವರಿಗೆ ಮಾಮೂಲು ಕೊಡಬೇಕು ಎಂದು ಹೇಳುತ್ತಾರೆ. ಅಧಿಕಾರಿ ವರ್ಗ ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಆಡಳಿತ ಯಂತ್ರ ಸತ್ತುಹೋಗಿದೆ. ಇಡೀ ಜಿಲ್ಲೆಯಲ್ಲಿ ಪಕ್ಷ ಎಂದರೆ ನನ್ನ ಮನೆ ಸೊತ್ತು ಎಂದು ಸಚಿವ ಮಧು ಬಂಗಾರಪ್ಪ ತಿಳಿದಿದ್ದಾರೆ. ಜಿಲ್ಲೆಯಾದ್ಯಂತ ದುರಾಡಳಿತ ಕಾಣುತ್ತಿದೆ. ಇದಕ್ಕೆ ಜನರು ಉತ್ತರ ಕೊಟ್ಟಿದ್ದಾರೆ. ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಮೂರು ತಿಂಗಳಿಂದ ಬರಗಾಲ ಕಾಡುತ್ತಿದೆ. ಇಲಾಖೆಯ ಪ್ರಗತಿಪರಿಶೀಲನೆ ಮಾಡಿಲ್ಲ. ನೀತಿ ಸಂಹಿತೆ ಇದ್ದರೂ ತುರ್ತು ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅವಕಾಶವಿದೆ. ಮೂರು ಬಾರಿ ಶಾಸಕರಾದರೂ ಯಾವುದನ್ನೂ ಮಾಡಿಲ್ಲ. ಕುಡಿಯುವ ನೀರು, ಉದ್ಯೋಗ ಖಾತ್ರಿ ಕೆಲಸಗಳ ನಿರ್ವಹಣೆ ಮಾಡಬೇಕಿತ್ತು. ಆದರೆ ಎಲ್ಲ ಇಲಾಖೆಗಳೂ ಭ್ರಷ್ಟಾಚಾರದ ಕೂಪವಾಗಿದೆ. ಇವಕ್ಕೆಲ್ಲ ಉತ್ತರ ಎಂಬಂತೆ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದವರೂ ಗುಪ್ತವಾಗಿ ಬಿಜೆಪಿಗೆ ಮತ ನೀಡಿದ್ದಾರೆ. ಈಗ ಚುನಾವಣೆ ನಡೆದರೆ ೫೦ ಸಾವಿರಕ್ಕಿಂತಲೂ ಕಡಿಮೆ ಮತಗಳಿಂದ ಶಾಸಕರು ಸೋಲು ಅನುಭವಿಸುತ್ತಾರೆ. ನೈತಿಕತೆಯಿಂದ ಶಾಸಕರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಂತ್ ಅವರ ಬೂತ್ ಕಲ್ಮನೆ ಯಲ್ಲಿ ಕಾಂಗ್ರೆಸ್ ಗೆ ಎಷ್ಟು ಮತ ಬಂತು ? ಪ್ರಫುಲ್ಲಾ ಮಧುಕರ್ ಮನೆ ಸಮೀಪ ಎಷ್ಟು ಮತಗಳು ಬಂದವು ? ಎಂದು ಪ್ರಶ್ನಿಸಿದರು. ಶಾಸಕರಾಗಿ ಹಾಲಪ್ಪನವರು, ಕಾಗೋಡು ತಿಮ್ಮಪ್ಪನವರು ಮಾದರಿಯಾಗಿ ಅಭಿವೃದ್ಧಿ ಕೆಲಸ ಮಾಡಿದರು. ಆದರೆ ನೀವು ಒಂದು ವರ್ಷದಲ್ಲಿ ಎಷ್ಟು ಹಣ ತಂದಿದ್ದೀರಿ ? ಹಿಂದಿನ ಕಾಮಗಾರಿ ಮುಂದುವರಿದಿದೆ ಬಿಟ್ಟರೆ ಬೇರೆ ಹಣ ಬಂದಿಲ್ಲ. ಕೆಲಸ ಮುಗಿದ ಜೆಜೆಎಂ ಕಾಮಗಾರಿಗೆ ಮತ್ತೆ ಗುದ್ದಲಿ ಪೂಜೆ ಮಾಡಿದ್ದೀರಿ. ನಿಮ್ಮ ಗೆಲುವಿಗೆ ಕಾಗೋಡು ತಿಮ್ಮಪ್ಪನವರ ಪ್ರಯತ್ನವೂ ಇದೆ ಎಂಬುದನ್ನು ಹೇಳುವುದಿಲ್ಲ. ನಿಮ್ಮ ದುರಂಹಕಾರಕ್ಕೆ ಈ ಚುನಾವಣೆ ಉತ್ತರ ನೀಡಿದೆ ಎಂದರು.
ನಗರ ಘಟಕದ ಅಧ್ಯಕ್ಷ ಗಣೇಶ್ ಪ್ರಸಾದ್, ಗ್ರಾಮಾಂತರ ಅಧ್ಯಕ್ಷ ದೇವೇಂದ್ರಪ್ಪ, ಪ್ರಮುಖರಾದ ಡಾ.ರಾಜನಂದಿನಿ ಕಾಗೋಡು, ಕೆ.ಎಸ್.ಪ್ರಶಾಂತ್, ಗೌತಮ್, ಸ್ವಾಮಿಗ ಗೌಡ್ರು, ನಾಗರಾಜ್ ಮಜ್ಜಿಗೆರೆ, ಅಣ್ಣಪ್ಪ ಪೂಜಾರಿ, ವಸಂತಕುಮಾರ್ ನಿರ್ಮಲಾ ಹಾಜರಿದ್ದರು.