Site icon TUNGATARANGA

ಯುವತಿಯರ ಕೈಚಳಕ, ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ ಲಕ್ಷಾಂತರ ಮೌಲ್ಯದ ಬಂಗಾರ ದೋಚಿದ ಚೋರಿಯರು!, ಕೊನೆಗೆ ಎಚ್ಚೆತ್ತ ಜ್ಯೂವೆಲರಿ ಮಾಲಿಕನಿಂದ ದೂರು

ಶಿವಮೊಗ್ಗ,ಜೂ.2:

ಗ್ರಾಹಕರಂತೆ ಚಿನ್ನ-ಬೆಳ್ಳಿ ಅಂಗಡಿಗೆ ಬಂದಿದ್ದ ಮೂವರು ಯುವತಿಯರು ಹಾಗೂ ಓರ್ವ ಪುರುಷ ವ್ಯಕ್ತಿ ಉಂಗುರ ಮತ್ತು ಬೆಳ್ಳಿ ದೀಪ ಖರೀದಿ ನೆಪದಲ್ಲಿ ಬುದ್ಧಿವಂತಿಕೆಯಿಂದ ಅಂಗಡಿಯವರ ಕಣ್ತಪ್ಪಿಸಿ ಲಕ್ಷಾಂತರ ರೂ. ಬೆಲೆ ಬಾಳುವ ಸುಮಾರು 67 ಗ್ರಾಂ ತೂಕದ ಒಡವೆಗಳ ಬಾಕ್ಸ್ ಅನ್ನು ದೋಚಿಕೊಂಡು ಪರಾರಿಯಾದ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.


ನಗರದ ಗಾಂಧಿಬಜಾರ್ ಬಳಿಯ ತಿರುಪಳಯ್ಯನ ಕೇರಿಯ ಸಂಪತ್ ಜ್ಯುವೆಲರ್‍ಸ್‌ಗೆ ಗ್ರಾಹಕರಂತೆ ಬಂದಿದ್ದ ಈ ಮೂವರು ಯುವತಿಯರು ಹಾಗೂ ಓರ್ವ ಪುರುಷ ಉಂಗುರ ವಗೈರೆಗಳನ್ನು ಖರೀದಿಸುವ ನೆಪದಲ್ಲಿ ಒಡವೆ ದೋಚಿದ್ದಾರೆ ಎಂದು ಅಂಗಡಿ ಮಾಲೀಕರು ದೂರಿತ್ತಿದ್ದಾರೆ. ಅಂಗಡಿಗೆ ಬಂದಿದ್ದ ಇವರು ಮದುವೆ ಗಿಫ್ಟ್‌ಗೆ ಬಂಗಾರದ ಉಂಗುರ ತೋರಿಸುವಂತೆ ಕೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ಹಾಗೂ ಮಹಿಳೆ ಬೆಳ್ಳಿ ಕಾಮಾಕ್ಷಿ ದೀಪ ತೋರಿಸಿ ಎಂದಿದ್ದಾರೆ. ಈ ಸಂದರ್ಭದಲ್ಲಿ ಯುವತಿ ಯರಿಬ್ಬರಿಗೆ ಡಿಸ್‌ಪ್ಲೇಸ್‌ನಲ್ಲಿದ್ದ ಉಂಗುರಗಳನ್ನು ತೋರಿಸಿದಾಗ ಇದು ಬೇಡ ಕಡಿಮೆ ತೂಕದ 3 ಗ್ರಾಂ ಒಳಗಿನ ಉಂಗುರ ತೋರಿಸಿ ಎಂದಿದ್ದಾರೆ.

ಆಗ ಮಾಲೀಕರು ಬೇರೆ ಉಂಗುರ ತರಲು ಲಾಕರ್ ರೂಂಗೆ ಹೋಗಿ ಉಂಗುರ ತಂದು ತೋರಿಸಿದಾಗ ಇದು ಓಕೆ, ನಮ್ಮವರನ್ನು ಕರೆದುಕೊಂಡು ಬಂದು ಖರೀದಿಸುತ್ತೇನೆ ಎಂದು ಆ ಯುವತಿಯರು ಜಾಗ ಖಾಲಿ ಮಾಡಿದ್ದಾರೆ. ಇನ್ನೋರ್ವ ಪುರುಷ ಹಾಗೂ ಮಹಿಳೆ ಕಡಿಮೆ ಬೆಲೆಯ ಬೆಳ್ಳಿ ದೀಪ ತೋರಿಸಿ ಎಂದು ಹೇಳಿ ನಂತರ ಬರುತ್ತೇವೆ ಎಂದು ವಾಪಾಸ್ ಹೊರಟಿದ್ದಾರೆ. ಉಂಗುರ ತರಲು ತಾವು ಲಾಕರ್ ರೂಮಿಗೆ ಹೋದಾಗ ನಮ್ಮ ಅಂಗಡಿಯ ಹುಡುಗಿಗೆ ಇನ್ನಿಬ್ಬರು ಅಡ್ಡಲಾಗಿ ನಿಂತಿದ್ದು, ಈ ಸಂದರ್ಭ ಬಳಸಿ ಚಿನ್ನದ ಒಡವೆಗಳಿದ್ದ ಪ್ಲಾಸ್ಟಿಕ್ ಬಾಕ್ಸ್ ಅನ್ನು ಓರ್ವ ಯುವತಿ, ಡಿಸ್‌ಪ್ಲೇ ಗ್ಲಾಸ್ ಡ್ರಾ ತೆಗೆದು ಕೈ ಹಾಕಿ ಅಲ್ಲಿದ್ದ ಒಡವೆಗಳ ಬಾಕ್ಸ್‌ನ್ನು ತನ್ನ ಬ್ಲೌಸ್‌ನಲ್ಲಿ ಹಾಕಿಕೊಂಡು ಬುದ್ದಿವಂತಿಕೆ ಯಿಂದ ಒಡವೆಗಳನ್ನು ದೋಚಿದ್ದಾರೆ ಎಂದು ಪೇಟೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.


ಪ್ಲಾಸ್ಟಿಕ್ ಒಡವೆಗಳ ಬಾಕ್ಸ್‌ನಲ್ಲಿ 84 ಸಾವಿರ ರೂ. ಅಂದಾಜು ಬೆಲೆಯ 16 ಗ್ರಾಂ ತೂಕದ ಮಾಂಟಿಕಾ, 73 ಸಾವಿರ ರೂ. 14 ಗ್ರಾಂ ತೂಕದ 10 ಲಕ್ಷ್ಮಿ ಕಾಸುಗಳು, 1.10 ಲಕ್ಷ ರೂ. ಮೌಲ್ಯದ 9 ಚಿನ್ನದ ತಾಳಿಗಳು, 63 ಸಾವಿರ ರೂ. ಬೆಲೆಯ 7 ಜೊತೆ ಬುಗಡಿ, 21 ಸಾವಿರ ಬೆಲೆಯ ಮೂಗುಬೊಟ್ಟುಗಳು ಸೇರಿದಂತೆ ಒಟ್ಟಾರೆ ೩ ಲಕ್ಷದ 51 ಸಾವಿರದ 500 ರೂ. ಬೆಲೆಯ ಚಿನ್ನದ ಒಡವೆಗಳನ್ನು ದೋಚಲಾಗಿದೆ. ಈ ನಾಲ್ವರು ಅಂಗಡಿಯಿಂದ ಹೊರ ಹೋದ ಮೇಲೆ ಅಂಗಡಿ ಮಾಲೀಕರಿಗೆ ಅನುಮಾನ ಬಂದು ಅಂಗಡಿಯ ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ವಾಸ್ತವ ಸತ್ಯ ಅರಿವಿಗೆ ಬಂದಿದ್ದು ಕೂಡಲೇ ವೀಡಿಯೋ ಸಹಿತ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಈ ಬಗ್ಗೆ ತಕ್ಷಣ ತನಿಖೆ ನಡೆಸಿ ಕಳುವು ಆರೋಪಿಗಳನ್ನು ಬಂಧಿಸಿ ತಮಗೆ ನ್ಯಾಯ ಕಲ್ಪಿಸುವಂತೆ ಅಂಗಡಿಯ ಮಾಲೀಕ ಬಿ. ಹರ್ಷ ಯಾನೆ ಸಂಪತ್ ಕುಮಾರ್ ಜೈನ್ ಅವರು ವಿನಂತಿಸಿದ್ದಾರೆ.

Exit mobile version