Site icon TUNGATARANGA

ಸರ್ಕಾರ ಯಾವುದೇ ಬರಲಿ! ಜನಹಿತ ಕೆಲಸ ಮಾಡಲಿ, ವೀಣಾ ಕಾರಂತ್ ಅವರ ಅರ್ಥಗರ್ಭಿತ ಮಾತು ಮಾತು ಓದಿ, ಲೋಕಸಭಾ ಕೌಂಟಿಂಗ್ ಕುರಿತ ಮಾತು

ಬರಹ: ವೀಣಾ ಆರ್ ಕಾರಂತ್, ತೀರ್ಥಹಳ್ಳಿ

ಸರ್ಕಾರ ಯಾವುದೇ ಬರಲಿ!
ಜನಹಿತ ಕೆಲಸ ಮಾಡಲಿ!!
ಇನ್ನೇನು ಕೆಲವೇ ದಿನಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
ದೇಶದ ಎಲ್ಲಾ ಜನರಿಗೂ ಒಂದು ರೀತಿಯ ಕುತೂಹಲ!


ಯಾವ ಪಕ್ಷ ಅಧಿಕಾರಕ್ಕೆ ಬಂದು ಆಡಳಿತದ ಚುಕ್ಕಾಣಿ ಹಿಡಿಯಬಹುದು ಎನ್ನುವ ಮಾತು,ಚರ್ಚೆ,ವಾದ.. ವಿವಾದ, ಹಾಗೆಯೇ ಬೆಟ್ಟಿಂಗ್ ಕಟ್ಟುವುದು ಪ್ರತಿ ನಿತ್ಯ ನಡೆಯುತ್ತಲೇ ಇದೆ!


ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಇಲ್ಲಿ ಪ್ರಜೆಗಳೇ ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ತಮಗೆ ಬೇಕಾದ ನಾಯಕರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.. ಪ್ರತಿಯೊಬ್ಬರಿಗೂ ಆಯ್ಕೆಯ ಸ್ವಾತಂತ್ರ್ಯವಿದೆ, ಕೆಲವರು ಪಕ್ಷ ನೋಡಿ ಮತವನ್ನು ನೀಡಿದರೆ… ಮತ್ತೆ ಕೆಲವರು ವ್ಯಕ್ತಿಯನ್ನು ನೋಡಿ ಮತ ಹಾಕುತ್ತಾರೆ, ಅದು ಅವರವರ ವೈಯಕ್ತಿಕ ವಿಚಾರಕ್ಕೆ ಬಿಟ್ಟಿದ್ದು.


ಜನರು ರಾಜಕಾರಣಿಗಳಿಗೆ ಯಾವಾಗಲೂ ಬೈಯ್ಯುವುದನ್ನು ಕೇಳಿದ್ದೇವೆ,ಹೊಗಳುವುದನ್ನು ಕೇಳಿದ್ದೇವೆ, ರಾಜಕೀಯವೇ ಹೊಲಸು ಅನ್ನುವುದನ್ನು ಕೇಳುತ್ತಲೇ ಇರುತ್ತೇವೆ ಆದರೆ ನಾಯಕರು ಇಲ್ಲದೆ ಪಥ ಚಲಿಸುವುದಿಲ್ಲ..ಎಲ್ಲಾ ಕ್ಷೇತ್ರಗಳಲ್ಲೂ ನಾಯಕರು ಬೇಕೇ ಬೇಕು, ರಾಜಕೀಯದಲ್ಲಿ ಮುಂದೆ ನಡೆಸಲು ರಾಜಕಾರಣಿಗಳು ಬೇಕು.
ಕೆಲವು ಜನರು ರಾಜಕೀಯದಲ್ಲಿ ಪಳಗಿರುತ್ತಾರೆ, ಕೆಲವು ರಾಜಕಾರಣಿಗಳು ಚಾಕಚಕ್ಯತೆಯಿಂದ ವ್ಯವಹಾರ, ಮತ್ತು ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಾರೆ ,ಸಲಹೆ ನೀಡುವವರು ಉತ್ತಮ ವ್ಯಕ್ತಿಗಳಾಗಿರುತ್ತಾರೆ, ಸೂಕ್ತ ಯೋಜನೆಯನ್ನು ನೀಡಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಜಾರಿಗೊಳಿಸುತ್ತಾರೆ.
ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಅಂದರೆ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ!


ನಿಜವಾಗಿಯೂ ಇದೊಂದು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಿದ ಯೋಜನೆಯಾಗಿದೆ ಅನ್ನಬಹುದು.
ಇದರಿಂದಾಗಿ ಅದೆಷ್ಟೋ ಮಹಿಳೆಯರಿಗೆ ಅನುಕೂಲವಾಯಿತು.
ಕೂಲಿ ಕಾರ್ಮಿಕರಿಂದ ಹಿಡಿದು ಸರ್ಕಾರಿ ಕೆಲಸಕ್ಕೆ ಹೋಗುವ ಪ್ರತಿಯೊಬ್ಬ ಮಹಿಳೆಗೂ ಸುಲಭದಲ್ಲಿ ಕೈಗೆಟುಕುವ ಯೋಜನೆಯಾಗಿದೆ.
ಗ್ಯಾರಂಟಿ ಯೋಜನೆಗಳಲ್ಲಿ ಎಲ್ಲರಿಗೂ ಸಹಾಯವಾಗುವ ಉಚಿತ ಪ್ರಯಾಣ.. ಬಸ್ ನಿಲ್ದಾಣದ ಅಂಗಡಿಗಳಿಗೆ,ಹೋಟೆಲ್ ಗಳಿಗೆ, ದೇವಾಲಯಗಳಿಗೆ,ಪ್ರವಾಸಿ ತಾಣಗಳಿಗೆ ಹೀಗೆ ಹಲವಾರು ಕಡೆಗಳಲ್ಲಿ ಲಾಭದಾಯಕವಾಗಿ ಕಾಣುತ್ತಿದೆ,
ಬೇಕಾದವರು ಅನಿವಾರ್ಯವಿದ್ದವರು ಖಾಸಗಿ ಬಸ್ ಗಳಲ್ಲಿ ಹೋಗುತ್ತಾರೆ, ಹಾಗೆಯೇ ಉಳಿದ ಬಹುಪಾಲು ಪ್ರಯಾಣಿಕರು ಉಚಿತ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಾರೆ,


ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣ ಮಾಡಿ ಕಷ್ಟ ಪಟ್ಟು ದುಡಿದು ಸಂಪಾದಿಸಿದ ಹಣವೆಲ್ಲಾ ಬಸ್ ಟಿಕೆಟ್ ಗೆ ಹಾಕಿ ಅಲ್ಪ ಸ್ವಲ್ಪ ಹಣವನ್ನು ಸಂಸಾರಕ್ಕೆ ಹಾಕುತ್ತಿದ್ದ ಮಹಿಳೆಗೆ ಈಗ ತಿಂಗಳ ತುದಿಯಲ್ಲಿ ಕೈ ತುಂಬಾ ಸಂಬಳ ಉಳಿಸಿಕೊಂಡು ಮನೆ ಸೇರುವಂತೆ ಮಾಡಿದೆ!
ಇದೊಂದು ರಾಜ್ಯದ ಅಭಿವೃದ್ಧಿ ಮತ್ತು ಜನಹಿತ ಕೆಲಸಗಳಲ್ಲಿ ಮುಖ್ಯವಾದದ್ದು ಅನ್ನಬಹುದು
ಒಟ್ಟಿನಲ್ಲಿ ಸರ್ಕಾರ ಯಾವುದೇ ಬರಲಿ ಜನಹಿತ ಕೆಲಸ ಮಾಡಲಿ!!

Exit mobile version