Site icon TUNGATARANGA

ಅಡಿಕೆ ರೈತರ ಹಿತ ಕಾಪಾಡುವಲ್ಲಿ ಕೇಂದ್ರ ವಿಫಲ: ತೀನಾಶ್ರೀ


ಶಿವಮೊಗ್ಗ,ಜ. 14:
ಅಡಿಕೆ ಬೆಳೆಗಾರರ ಹಿತ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2018 ರಲ್ಲಿ ತೀರ್ಥಹಳ್ಳಿಗೆ ಬಂದಿದ್ದಾಗ ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ, ಈಗ ಅವರು ಕೊಟ್ಟ ಮಾತನ್ನೇ ಮರೆತಿದ್ದಾರೆ ಎಂದರು.
ಕಳೆದ 6 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೂಡ ಅಡಕೆ ಬೆಳೆಗಾರರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಕರ್ನಾಟಕದಲ್ಲಿ ಸುಮಾರು 15 ಸಂಸದರು, 100 ಶಾಸಕರು ಅಡಕೆ ಬೆಳೆಗಾರರಿದ್ದಾರೆ. ಇವರ್ಯಾರು ಕೂಡ ಅಡಕೆ ಬೆಳೆಗಾರರ ಹಿತ ಕಾಯುವಲ್ಲಿ ಮುಂದೆ ಬಂದಿಲ್ಲ ಎಂದು ದೂರಿದರು.
ಈಗ ಅಮಿತ್ ಶಾ ಅವರು ಶಿವಮೊಗ್ಗ ಜಿಲ್ಲೆಗೆ ಬರುತ್ತಿದ್ದಾರೆ. ನಮ್ಮ ಜಿಲ್ಲೆಯ ಬಿಜೆಪಿ ನಾಯಕರು ಅವರು ತೀರ್ಥಹಳ್ಳಿಗೆ ಬಂದಿದ್ದಾಗ ಅಡಕೆ ಬೆಳೆಗಾರರ ರಕ್ಷಣೆ ಮಾಡುವುದಾಗಿ ಮಾತು ಕೊಟ್ಟಿದ್ದನ್ನು ನೆನಪಿಸಿ ತಕ್ಷಣವೇ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿ ಸಂಶೋಧನೆಗೆ ಸಮಿತಿ ರಚಿಸುವಂತೆ ಅಡಕೆ ಹಾನಿಕಾರಕವಲ್ಲ ಎಂಬ ಅಂಶವನ್ನು ಕೋರ್ಟ್ ಗೆ ಮನದಟ್ಟು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಅಡಕೆ ಸಂಶೋಧನೆಗಾಗಿ ಎಂ.ಎಸ್. ರಾಮಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ವಹಿಸಲಾಗಿದೆ. ಆದರೆ, ಈ ಸಂಶೋಧನೆಯನ್ನು ಸುಪ್ರೀಂ ಕೋರ್ಟ್ ಒಪ್ಪುವುದಿಲ್ಲ. ಸುಪ್ರೀಂಕೋರ್ಟ್ ನಿಂದಲೇ ನೇರವಾಗಿ ಸಮಿತಿ ರಚಿಸಬೇಕು, ಈ ಹಿನ್ನಲೆಯಲ್ಲಿ ಸಂಸದ ರಾಘವೇಂದ್ರ ಮತ್ತು ಇತರ ಸಂಸದರು ಒತ್ತಡ ತರಬೇಕು. ಅಮಿತ್ ಶಾ ಅವರಿಗೆ ಇದನ್ನು ವಿವರಿಸಿ ತಿಳಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಸಿಗರೇಟ್ ಲಾಬಿಗೆ ಮಣಿಯುವುದನ್ನು ಬಿಟ್ಟು ಇಚ್ಛಾಶಕ್ತಿ ಪ್ರದರ್ಶಿಸಿ ಅಡಕೆ ಹಾನಿಕಾರಕವಲ್ಲ ಎಂಬುದರ ಬಗ್ಗೆ ನ್ಯಾಯಾಲಯಕ್ಕೆ ಸಾಬೀತುಪಡಿಸಿ ಅಡಕೆ ಬೆಳೆಗಾರರ ಹಿತ ಕಾಯಬೇಕೆಂದು ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು. ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆ ಬಗೆಹರಿಸಬೇಕು. ವಿಐಎಸ್ಎಲ್, ಎಂಪಿಎಂ ಉಳಿಯಬೇಕು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ಹೇಳಿದರು.
ಬಿ.ವೈ. ರಾಘವೇಂದ್ರ ಅವರು ಇತ್ತೀಚೆಗೆ ಬುರುಡೆ ಬಿಡುವುದನ್ನು ಕಲಿತಿದ್ದಾರೆ. ರೈತರ ಪರ ಅವರ ಮಾತುಗಳು ಕೇವಲ ಬೂಟಾಟಿಕೆ. ಅವರ ಡೋಂಗಿ ಮಾತುಗಳಿಗೆ ಅಡಕೆ ಬೆಳೆಗಾರರು, ಸಾಗುವಳಿದಾರರು ಮರುಳಾಗುತ್ತಿದ್ದಾರೆ ಅಷ್ಟೇ. ಸಾಗುವಳಿದಾರರ ಪರವಾಗಿ ಹೋರಾಟ ನಡೆಸಿದ್ದ ಇವರು ಇಂದು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ನಮ್ಮದೇ ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಅವರಿಗೆ ಏನೂ ಅನಿಸಿಲ್ಲ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರವಿ ಜಂಬಗಾರು, ಸುಭಾಷ್ ಇದ್ದರು.

Exit mobile version