ಶಿವಮೊಗ್ಗ,ಜ.14:
ಸಂಕ್ರಾಂತಿ ಹಬ್ಬ ದೇಶದ ಸಂಸ್ಕೃತಿಯ ಪ್ರತೀಕವಾಗಿದ್ದು, ವಿವಿಧ ಜಾತಿ ಜನಾಂಗ ಮತ್ತು ಸಂಸ್ಕೃತಿಗಳನ್ನು ಒಳಗೊಂಡ ಭಾರತ ದೇಶದಲ್ಲಿನ ಎಲ್ಲಾ ಪ್ರಜೆಗಳಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಅಗತ್ಯ ಎಂದು ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಮಾನಸಾಧಾರ ಸಂಸ್ಥೆಯಲ್ಲಿ ವಿಕಾಸ ರಂಗ ಶಿವಮೊಗ್ಗ ಸಂಕ್ರಾಂತಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸೌಹಾರ್ದ ಸಂಕ್ರಾಂತಿ ಭಾವೈಕ್ಯತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತನಾಡಿ, ಎಂಬುದು ಸಂಕ್ರಾಂತಿ ಹಬ್ಬದ ನುಡಿಗಟ್ಟಾಗಿದ್ದು, ಈ ಚಳಿಯ ಸಂದರ್ಭದಲ್ಲಿ ಪ್ರಾಚೀನ ಕಾಲದಿಂದಲೂ ಎಳ್ಳು ಮತ್ತು ಬೆಲ್ಲದಲ್ಲಿ ವಿಶೇಷ ಶಕ್ತಿ ಇರುವುದರಿಂದ ಮತ್ತು ಈ ಹವಮಾನ ಸಂದರ್ಭದಲ್ಲಿ ದೇಹಕ್ಕೆ ಅಗತ್ಯ ಇರುವುದರಿಂದ ಸಂಕ್ರಾಂತಿ ಸಂದರ್ಭದಲ್ಲಿ ಎಳ್ಳು ಬೆಲ್ಲ ಹಂಚುವುದು ಸಂಪ್ರದಾಯ. ಮನುಷ್ಯನು ಪರಸ್ಪರ ಭೇಟಿಯಾದಾಗ ಆರೋಗ್ಯವೇ ಎಂದು ವಿಚಾರಿಸುತ್ತಾನೆ. ನೀನು ಬ್ಯಾಂಕ್‌ನಲ್ಲಿ ಎಷ್ಟು ಹಣ ಇಟ್ಟಿದ್ದೀಯ ಎಂದು ಯಾರು ಕೇಳುವುದಿಲ್ಲ. ಯಾಕೆಂದರೆ ಹಣಕ್ಕಿಂತ ಆರೋಗ್ಯಕ್ಕೆ ಮೊದಲ ಆಧ್ಯತೆ.ಮಾನಸಾಧಾರ ಸಂಸ್ಥೆ ಹಲವು ವರ್ಷಗಳಿಂದ ಮಾನಸಿಕ ವಿಕಲತೆ ಹೊಂದಿರುವ ಹಲವು ರೋಗಿಗಳಿಗೆ ಮತ್ತು ನರ ದೌರ್ಬಲ್ಯಹೊಂದಿರುವ ರೋಗಿಗಳಿಗೆ ಚಿಕಿತ್ಸೆ ಮತ್ತು ಆಶ್ರಯ ನೀಡುತ್ತಾ ಬಂದಿದೆ. ಸಂಕ್ರಾಂತಿಯನ್ನು ಅವರೊಂದಿಗೆ ಆಚರಿಸುತ್ತಿರುವುದು ಒಂದು ಸೌಭಾಗ್ಯ. ರೈತ ಬೆಳೆದ ದವಸ-ಧಾನ್ಯ ಮತ್ತು ಆಹಾರವನ್ನು ಜಾತಿ ಮತ ಬೇದವಿಲ್ಲದೆ ಎಲ್ಲರೂ ಸೇವಿಸುತ್ತಾರೆ. ರೈತರಿಗೆ ಜಾತಿಯಿಲ್ಲ. ಅದೇ ರೀತಿ ವೈವಿದ್ಯಮಯ ಸಂಸ್ಕೃತಿಯುಳ್ಳ ಈ ದೇಶದಲ್ಲಿ ವಿವಿಧ ಜನಾಂಗ ಮತ್ತು ವಿವಿಧ ಪ್ರದೇಶದ ಜನರು ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬ ಎಲ್ಲರಿಗೂ ಆರೋಗ್ಯವನ್ನು ನೀಡಲಿ ಎಂದು ಅವರು ಹಾರೈಸಿದರ.
ಈ ಸಂದರ್ಭದಲ್ಲಿ ವಿಕಾಸ ರಂಗದ ಪದಾಧಿಕಾರಿಗಳಾದ ಲೋಕೇಶ್ವರಿ ಚೊಳಕೆ, ಮೊಹಮ್ಮದ್ ಇಕ್ಬಾಲ್, ಧರ್ಮೇಂದ್ರ ಸಿಂಗ್, ಜಿ. ವಿಜಯ್ ಕುಮಾರ್, ವಾಗೀಶ್, ಡಾ. ವಿದ್ಯಾ ಮೊದಲಾದವರು ಇದ್ದರು. ಡಾ. ರಜನಿ ಪೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.