Site icon TUNGATARANGA

ನೆನಹುಗಳೊಂದಿಗೆ ಧೀಮಂತ ವ್ಯಕ್ತಿತ್ವದ ಎ.ಟಿ.ಅನಂತ ಕೃಷ್ಣಮೂರ್ತಿ

ಸರಳ ಸಜ್ಜನಿಕೆಯ ವ್ಯಕ್ತಿ ಎಂದೇ ಗುರುತಿಸಲಾದ ನಿವೃತ್ತ ಅಭಿಯಂತರ ಎ.ಟಿ.ಅನಂತ ಕೃಷ್ಣಮೂರ್ತಿ ಅವರ ಅಕಾಲಿಕ ನಿಧನ ನಾಡಿಗೆ, ಜಿಲ್ಲೆಗೆ ಸಾಕಷ್ಟು ನಷ್ಟವುಂಟು ಮಾಡಿದ್ದು, ಅವರ ಸಮಾಜಮುಖಿ ಸೇವೆ, ಗಣನೀಯ ಹಾಗೂ ಗಂಭೀರವಾದದು. ಅವರು ಆದಿಚುಂಚನಗಿರ ಮಠದ ಹಾಗೂ ಒಕ್ಕಲಿಗ ಸಮುದಾಯದ ಬಳಗದ ಜೊತೆಗೆ ಅತ್ಯಂತ ಪ್ರೀತಿಯಿಂದ ಗುರುತಿಸಿಕೊಂಡಿದ್ದು,

ತಮ್ಮನ್ನು ತಾವು ಎಂದು ವೈಭವೀಕರಿಸಿಕೊಳ್ಳದೇ ಇರುವುದು ಅವರ ಧೀಮಂತ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತದೆ.


ಈಗಲೂ ನಮ್ಮ ನಡುವೆ ಅವರ ಸೌಜನ್ಯದ ನಡೆ ಹಾಗೂ ಮಾರ್ಗದರ್ಶನ ಜೀವಂತಿಕೆಯಾಗಿವೆ. ಈ ಹಿನ್ನಲೆಯಲ್ಲಿ ಅವರ ಕಿರುಪರಿಚಯ ನಿಮಗಾಗಿ.


ಶಿವಮೊಗ್ಗ ಜಿಲ್ಲೆಯಲ್ಲಿಯೇ ಚಿರಪರಿಚರಾದಂತಹ, ಸರಳ, ಸಜ್ಜನಿಕೆಯ ಎ.ಟಿ. ಅನಂತ ಕೃಷ್ಣಮೂರ್ತಿಯವರು ಲೋಕೋಪಯೋಗಿ ಇಲಾಖೆಯಲ್ಲಿ ಹೆಸರಾಂತ ಹಿರಿಯ ಸಿವಿಲ್ ಇಂಜಿನಿಯರ್ ಆಗಿದ್ದ, ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿ ನಿರ್ವಹಿಸಿ ೨೦೦೬ರಲ್ಲಿ ನಿವೃತ್ತಿ ಆಗಿದ್ದರು.


ಇವರ ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರುಗಳು ಶಿವಮೊಗ್ಗ ಶಾಖೆಯ ಶಿಕ್ಷಣ ಟ್ರಸ್ಟಿನ ನಿರ್ದೇಶಕರಾಗಿ ನೇಮಿಸಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟರು. ಸುಮಾರು ೨೫ ವರ್ಷಗಳ ಕಾಲ ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡಿದ್ದಾರೆ. ಜೊತೆಗೆ ಸಮಾಜಮುಖಿಯಾದ ಹತ್ತು ಹಲವಾರು ಪ್ರಮುಖ ಕಾರ್ಯಕ್ರಮಗಲ್ಲಿ ನಾಡಿನ ಜನರ ನಡುವೆ ಗುರಿಸಿಕೊಂಡಿದ್ದರು.


ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ಶಿವಮೊಗ್ಗ ಶಾಖೆಯ ಹಿರಿಯ ನಿರ್ದೇಶಕರಾಗಿದ್ದ ಶ್ರೀಯುತ ಎ.ಟಿ. ಅನಂತಕೃಷ್ಣಮೂರ್ತಿಯವರು ದಿ:೧೧-೦೫-೨೦೨೪ ರಂದು ’ಚಿರನಿದ್ರೆಗೆ’ ಜಾರಿರುವುದು ನಮಗೆಲ್ಲರಿಗೂ ಅತೀವ ದುಃಖವನ್ನುಂಟು ಸಂಗತಿಯಾಗಿದೆ.


ದಿ:೦೭-೦೭-೧೯೪೮ ರಂದು ಜನಿಸಿದ ದಿ. ಆನಂತಕೃಷ್ಣಮೂರ್ತಿಯವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮಿಟ್ಲುಗೋಡಿನವರು. ವೃತ್ತಿಯಿಂದ ಇಂಜಿನಿಯರ್ ಆಗಿದ್ದ ಇವರು ಸುಮಾರು ೨೫ ವರ್ಷಗಳ ಕಾಲ ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಅಸಿಸ್ಟೆಂಟ್ ಇಂಜಿನಿಯರ್ ಆಗಿ ಆರಂಭಿಸಿ, ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿ ನಿವೃತ್ತಿಯನ್ನು ಹೊಂದಿದ ಇವರು, ಇಂಜಿನಿಯರ್ ಕ್ಷೇತ್ರದಲ್ಲಿ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದಾರೆ.


ಚಿದಂಬರ ರಾವ್ ಅವರ ಪಾಲುದಾರಿಕೆಯೊಂದಿಗೆ ಶಿವಮೊಗ್ಗ ನಗರದಲ್ಲಿ ಇವರು ಆರಂಭಿಸಿದ ಶಿವಮೊಗ್ಗ ಕನ್ಸಲ್ವೆನ್ಸಿ ಮತ್ತು ಕನ್‌ಸ್ಟ್ರಕ್ಷನ್ ಸಂಸ್ಥೆಯು ಬಹಳ ದೊಡ್ಡ ಮಟ್ಟದಲ್ಲಿ ಬೆಳೆದು ಉತ್ತಮ ಹೆಸರನ್ನು ಮಾಡಿರುವುದು ಇವರ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ. ೫೦ ಕ್ಕೂ ಹೆಚ್ಚು ಇಂಜಿನಿಯರ್‌ಗಳು ಹಾಗೂ ೫೦ ಕ್ಕೂ ಹೆಚ್ಚು ಕಂಟ್ರಾಕ್ಟರ್‌ಗಳಿಗೆ ತರಬೇತಿಯನ್ನು ನೀಡಿದ ಹೆಗ್ಗಳಿಕೆ ಇವರದು.


ತಾವು ನಿರ್ದೇಶಕರಾಗಿದ್ದ ಅವಧಿಯಲ್ಲಿ ವಿದ್ಯಾಸಂಸ್ಥೆಯ ಏಳಿಗೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಶಿವಮೊಗ್ಗದ ಶಾಲಾ-ಕಾಲೇಜು ಕಟ್ಟಡಗಳು, ಸಮುದಾಯಭವನ, ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನ, ಜಿಲ್ಲಾ ಒಕ್ಕಲಿಗರ ಸಂಘ, ಚುಂಚಾದ್ರಿ ಮಹಿಳಾ ವೇದಿಕೆಯ ಕಟ್ಟಡಗಳು ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಕಟ್ಟಡಗಳು ಇವರ ಯೋಜನೆಯಲ್ಲಿಯೇ ನಿರ್ಮಾಣಗೊಂಡಿರುವುದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕಾಗಿದೆ. ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಪುರಸ್ಕೃತ ಡಾ. ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರೊಂದಿಗೆ ಮತ್ತು ಪೂಜ್ಯ ಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಇವರು,ಶ್ರೀ ಮಠದ

ಪರಮಭಕ್ತರಾಗಿದ್ದರು. ವೃತ್ತಿ ಹಾಗೂ ಪ್ರವೃತ್ತಿ ಎರಡರಲ್ಲಿಯೂ ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದ ಇವರು ಸರಳ ಸಜ್ಜನಿಕೆಯ,ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು.ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿವರ್ಷ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ’ಚುಂಚಶ್ರೀ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಗೌರವಿಸಲಾಗುತ್ತದೆ. ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಅಮೃತ ಹಸ್ತದಿಂದಲೇ ಇವರು ’ಚುಂಚಶ್ರೀ’ ಪ್ರಶಸ್ತಿಗೆ ಭಾಜನಾಗಿರುವುದು ಇವರ ಕಾರ್ಯತತ್ಪರತೆಯ ದ್ಯೋತಕವಾಗಿದೆ.


ಇಂತಹ ಸಹೃದಯಿ ಈ ಲೋಕದಿಂದ ಕಣ್ಮರೆಯಾಗಿರುವುದು ನಮಗೆಲ್ಲರಿಗೂ ಅತ್ಯಂತ ದುಃಖದ ಸಂಗತಿಯಾಗಿದೆ. ಆ ಭಗವಂತನು ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಹಾಗೂ ದಿವಂಗತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

ರಾ.ಹ.ತಿಮ್ಮೇನಹಳ್ಳಿ
ಶಿವಮೊಗ್ಗ

Exit mobile version