Site icon TUNGATARANGA

ಸೊರಬ: ಮೂಡುಗೋಡು ಗ್ರಾಮದಲ್ಲಿ ಮತ್ತೆ ಅಡಿಕೆ ಕಳುವು

ಸೊರಬ: ತಾಲೂಕಿನ ಮೂಡುಗೋಡು ಗ್ರಾಮದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 3.5 ಲಕ್ಷ ರೂ., ಮೌಲ್ಯದ ಅಡಿಕೆಯನ್ನು ಕಳ್ಳರು ದರೋಡೆ ನಡೆಸಿರುವ ಘಟನೆ ಮಂಗಳವಾರ ಬೆಳಗಿನಜಾವ ನಡೆದಿದೆ.

ಗ್ರಾಮದ ಜಯಕುಮಾರ್ ಎಂಬುವವರು ಮನೆ ಪಕ್ಕದಲ್ಲಿ ಅಡಿಕೆ ಗೋದಾಮನ್ನು ನಿರ್ಮಿಸಿಕೊಂಡು ತಾವು ಬೆಳೆದ ಸುಮಾರು 200 ಕ್ವಿಂಟಾಲ್ ಸಿಪ್ಪೆ ಅಡಿಕೆ, 10 ಕ್ವಿಂಟಾಲ್ ಕೆಂಪು ಅಡಿಕೆ ಹಾಗೂ 17 ಕ್ವಿಂಟಾಲ್ ಗೇರು ಬೀಜವನ್ನು ಸಂಗ್ರಹಿಸಿದ್ದರು. ಮಂಗಳವಾರ ಬೆಳಗ್ಗೆ ಗೋದಾಮಿಗೆ ತೆರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಕಳ್ಳರು ಗೋದಾಮಿನ ಬೀಗ ಮುರಿದು ಗೋದಾಮಿನಲ್ಲಿದ್ದ 3.5 ಲಕ್ಷ ರೂ., ಮೌಲ್ಯದ ಸುಮಾರು 14 ಕ್ವಿಂಟಾಲ್ ಒಣ ಸಿಪ್ಪೆ ಗೋಡು ಅಡಿಕೆಯನ್ನು ಕಳ್ಳತನ ಮಾಡಿದ್ದಾರೆ. ಇತ್ತೀಚೆಗೆ ಜು.9ರಂದು 3ಲಕ್ಷ ರೂ., ಮೌಲ್ಯದ ಸುಮಾರು 15 ಕ್ವಿಂಟಾಲ್ ಒಣ ಸಿಪ್ಪೆ ಗೋಟು ಅಡಿಕೆ, 2.4 ಲಕ್ಷ ರೂ., ಮೌಲ್ಯದ ಸುಮಾರು 6 ಕ್ವಿಂಟಾಲ್ ಕೆಂಪು ಅಡಿಕೆ, 1.2 ಲಕ್ಷ ರೂ., ಮೌಲ್ಯದ 10 ಕ್ವಿಂಟಾಲ್ ಗೇರು ಬೀಜವನ್ನು ಕಳ್ಳತನವಾಗಿತ್ತು. ಇದೀಗ ಪುನಃ ಅದೇ ಗೋದಾಮಿನಲ್ಲಿ ಕಳ್ಳತನ ನಡೆದಿದೆ.

ಜಯಕುಮಾರ್ ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ರಮೇಶ್ ರಾವ್, ಪಿಎಸ್ಐ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Exit mobile version