ಶಿವಮೊಗ್ಗ : ಮೊಬೈಲ್ ಎಂಬ ಅಂಧತ್ವದಿಂದ ಹೊರಬಂದು ಸಮಾಜದ ವಾಸ್ತವತೆಯ ಜ್ಞಾನ ಪಡೆದುಕೊಳ್ಳಿ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಡಾ.ಶರತ್ ಅನಂತಮೂರ್ತಿ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವತಿಯಿಂದ ಶನಿವಾರ ಕಾಲೇಜಿನ ಚಂದನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಆಚಾರ್ಯ ಅದ್ವಿತೀಯ’ ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು ನಿರ್ವಹಣಾ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಯುವ ಸಮೂಹ ಮೊಬೈಲ್ ಎಂಬ ಯುನಿವರ್ಸಿಟಿಗೆ ಸೀಮಿತರಾಗಿದ್ದಾರೆ. ಅಲ್ಲಿ ಬರುವ ವಿಷಯಗಳೆ ಸತ್ಯ ಎಂದು ನಂಬಿದ್ದಾರೆ. ಅಂತಹ ಮನಸ್ಥಿತಿಗಳಿಂದ ಹೊರಬಂದು ನಮ್ಮ ಸಮಾಜದ ವಾಸ್ತವತೆಯ ಜ್ಞಾನ ಪಡೆಯಿರಿ. ಶೈಕ್ಷಣಿಕ ಕಲಿಕೆಯ ಜೊತೆಗೆ ಕೌಶಲ್ಯ ಸಹಿತ ಜ್ಞಾನಾರ್ಜನೆ ನಿಮ್ಮದಾಗಲಿ ಎಂದು ಹಾರೈಸಿದರು.
ಕಲೆ, ಸಾಹಿತ್ಯ ಸಾಂಸ್ಕೃತಿಕ ಚಿಂತನೆಗಳು ಸದಾ ನಮ್ಮನ್ನು ಬಲಗೊಳಿಸುತ್ತದೆ. ಬದುಕಿನ ಅದ್ವಿತೀಯಕ್ಕೆ ವಿದ್ಯಾರ್ಥಿ ದೆಸೆಯಿಂದಲೇ ಸದಾಭಿರುಚಿ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ನಾವೀನ್ಯಯುತ ಯೋಜನೆಗಳನ್ನು ರೂಪಿಸುವಾಗ ಇಂತಹ ಯೋಚನೆ ಸಮಾಜಕ್ಕೆ ಮಾರಕವೊ ಪೂರಕವೊ ಎಂಬ ಜವಾಬ್ದಾರಿಯುತ ನಡೆ ನಿಮ್ಮಲಿರಲಿ ಎಂದು ಹೇಳಿದರು.
ಕುವೆಂಪು ವಿವಿ ಕುಲಸಚಿವರಾದ ಎ.ಎಲ್.ಮಂಜುನಾಥ, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿದರು. ಪ್ರಾಂಶುಪಾಲರಾದ ಪ್ರೊ.ಮಮತಾ ಅಧ್ಯಕ್ಷತೆ ವಹಿಸಿದ್ದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಮಧುರಾವ್, ಎನ್.ಟಿ.ನಾರಾಯಣರಾವ್, ಹೆಚ್.ಸಿ.ಶಿವಕುಮಾರ್, ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಪ್ರಾಧ್ಯಾಪಕರಾದ ಪ್ರೊ.ಎಸ್.ಜಗದೀಶ್, ಪ್ರೊ.ಕೆ.ಎಂ.ನಾಗರಾಜ, ಪ್ರೊ.ಎನ್.ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕಿ ಗಾಯತ್ರಿ.ಟಿ ನಿರೂಪಿಸಿದರು.
ಇದೇ ವೇಳೆ ಈ ಸಾಲಿನ ಬಿಕಾಂ ಮತ್ತು ಬಿಬಿಎ ವಿಭಾಗಗಳಲ್ಲಿ ರ‍್ಯಾಂಕ್ ಪಡೆದ ಕಾಲೇಜಿನ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಪದವಿ ಕಾಲೇಜುಗಳ 300 ಕ್ಕು ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.