Site icon TUNGATARANGA

ಅಂತರರಾಷ್ಟ್ರೀಯ ಸಂಶೋಧನೆಗಳ ಪ್ರಸ್ತುತತೆ ಅರಿವಿಗೆ ಸಮ್ಮೇಳನಗಳು ಉತ್ತಮ ವೇದಿಕೆ

ಶಿವಮೊಗ್ಗ ಪೆಸಿಟ್‌ನಲ್ಲಿ ಐಇಇಇ ಸಹಭಾಗಿತ್ವದಲ್ಲಿ
ಅಮಾತೆ – 2024 ಅಂತರರಾಷ್ಟ್ರೀಯ ಸಮ್ಮೇಳನ

ಶಿವಮೊಗ್ಗ, ಮೇ.17:
ಆವಿಷ್ಕಾರವೆಂಬುದು ತಲಾತಲಾಂತರಗಳಿಂದ ಯಾವುದೇ ರೀತಿಯ ಜಾತಿ ಧರ್ಮವನ್ನಾಗಲಿ, ವಯಸ್ಸಿನಾಗಲಿ, ಗಂಡು ಹೆಣ್ಣೆಂಬ ತಾರತಮ್ಯವನ್ನಾಗಲಿ ಎಂದಿಗೂ ಪರಿಗಣಿಸದೆ ಮನಸ್ಸಿನ ಅಂತರಾಳದಲ್ಲಿ ಹುದುಗಿರುವ ಅದಮ್ಯ ವಾಂಚೆಯನ್ನು ಪರಿಗಣನೆಗೆ ತೆಗೆದುಕೊಂಡು, ಅತ್ಯುನ್ನತವಾದದ್ದನ್ನು ಸಾಧಿಸಲು ತನ್ಮೂಲಕ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದರಲ್ಲಿ ಯಾವುದೇ ರೀತಿಯ ಅನುಮಾನಗಳಿಲ್ಲ ಎಂಬ ಮಾಹಿತಿ ಶಿವಮೊಗ್ಗ ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಐಇಇಇ ಸಹಭಾಗಿತ್ವದಲ್ಲಿ ಜರುಗಿದ
ಅಮಾತೆ – 2024 ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ನಿರೂಪಿಸಲ್ಪಟ್ಟಿತು.


ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕೊರಿಯಾ ದೇಶದ ಗುಂನ್ಸನ್ ಪ್ರದೇಶದ ಕುನ್ಸನ್ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಪ್ರೊಫೆಸರ್
ಡಾ. ಇನ್ – ಹೋ – ರಾ ಮಾತನಾಡುತ್ತಾ, ಸಂಶೋಧನಾ ಕ್ಷೇತ್ರದಲ್ಲಿ ಪ್ರಪಂಚದ ವಿವಿಧ ದೇಶಗಳು ನಡೆಸುತ್ತಿರುವ ಅದ್ವಿತೀಯ ಸಂಶೋಧನಾ ವಿಷಯಗಳ ಬಗ್ಗೆ ಈ ರೀತಿಯ ಸಮ್ಮೇಳನಗಳು ಒಡಮೂಡಿಸುವ ವಿಚಾರಗಳ ಬಗ್ಗೆ ಒಂದು ಉತ್ತಮ ವೇದಿಕೆಗಳು ನಿರ್ಮಾಣಗೊಳ್ಳುವಲ್ಲಿ ಸಹಕಾರಿಯಾಗಲಿವೆ. ಈ ಬಗೆಯ ಅಂತರಾಷ್ಟ್ರೀಯ ಸಮ್ಮೇಳನಗಳು ತಮ್ಮ ತಮ್ಮ ದೇಶಗಳಲ್ಲಿ ಕಂಪ್ಯೂಟರ್ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮೆಸೇಜ್ ಲರ್ನಿಂಗ್ ಹಾಗೂ ತತ್ಸಂಬಂಧ ಕ್ಷೇತ್ರಗಳಲ್ಲಿ ಜರುಗುತ್ತಿರುವ ಸಂಶೋಧನೆಗಳ ಬಗ್ಗೆ ಆಮೂಲಾಗ್ರ ಮಾಹಿತಿಯನ್ನು ನೀಡುವಲ್ಲಿ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಿಕೊಡಲಿದೆ ಎಂದರು.


ತಮ್ಮ ಜೀವಮಾನದಲ್ಲಿ ನಡೆಸಿದ ಹಲವಾರು ಸಂಶೋಧನೆಗಳ ಬಗ್ಗೆ ಅನೇಕ ಪ್ರಯುಕ್ತ ಮಾಹಿತಿಗಳನ್ನು ನೀಡುವ ಮೂಲಕ ಸಾಮಾಜಿಕ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಪ್ರಯತ್ನಿಸಬೇಕೆಂದು ಹಲವು ಪ್ರಾಯೋಗಿಕ ಉದಾಹರಣೆಗಳ ಸಮೇತ ಸೂಚ್ಯವಾಗಿ ತಿಳಿಸಿದರು. ಸಂಶೋಧನೆ ಎಂಬುದು ಒಂದು ದೇಶದ ಸಾಂಸ್ಕೃತಿಕ, ಪಾರಿವಾರಿಕ, ವೈಜ್ಞಾನಿಕ ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಪ್ರತಿನಿಧಿಯಾಗಿ ಹೊರಹೊಮ್ಮುವಲ್ಲಿ ಸಹಕಾರಿಯಾಗಲಿದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂದರು.


ಶಿವಮೊಗ್ಗ ನಗರದ ಪಿಇಎಸ್ ಟ್ರಸ್ಟ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ
ಅಮಾತೆ – 2024ರ ಗೌರವಾನ್ವಿತ ಅತಿಥಿಯಾಗಿ ಆಹ್ವಾನಿತರಾಗಿದ್ದ ಸುಭಾಷ್ ಬಿ ಆರ್ ಅವರು ಪ್ರಸ್ತುತ ಕಾಲಘಟ್ಟದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಇಂಜಿನಿಯರಿಂಗ್ ಕ್ಷೇತ್ರವು ನೀಡುತ್ತಿರುವ ಸಂಶೋಧನಾತ್ಮಕ ಕೊಡುಗೆಗಳ ಬಗ್ಗೆ ಪಕ್ಷಿ ನೋಟ ವಿವರಣೆಯನ್ನು ಹಲವಾರು ಪ್ರಾಯೋಗಿಕ ಉದಾಹರಣೆಗಳ ಸಮೇತ ಮಂಡಿಸುವಲ್ಲಿ ಯಶಸ್ಸನ್ನು ಪಡೆದ ಇಂಜಿನಿಯರ್ ಗಳ ಬಗ್ಗೆ ಕೃತಜ್ಞತೆಯನ್ನು ತಿಳಿಸಿದರು.


ಮೆಡಿಕಲ್ ಕ್ಷೇತ್ರದಲ್ಲಿ ಜನರ ಆರೋಗ್ಯವನ್ನು ಸರ್ವಾಂಗೀಣ ರೀತಿಯಲ್ಲಿ ಸುಧಾರಿಸುವ ಮಟ್ಟಕ್ಕೆ ಹಾಗೂ ಅಸಾಧಾರಣ ಮಟ್ಟದಲ್ಲಿ ಮೆಡಿಕಲ್ ಕ್ಷೇತ್ರದ ತಂತ್ರಜ್ಞಾನಗಳ ಸದ್ಬಳಕೆ ಮತ್ತು ವಿನಿಯೋಗದ ಬಗ್ಗೆ ಜರುಗುತ್ತಿರುವ ಪ್ರಯತ್ನಗಳನ್ನು ತುಂಬು ಹೃದಯದಿಂದ ಶ್ಲಾಘಿಸಿದರು. ಒಂದು ಕಾಲದಲ್ಲಿ ಗಗನಕುಸುಮವೆಂದು ಬಿಂಬಿತವಾದ ವೈದ್ಯಕೀಯ ಶಸ್ತ್ರಚಿಕಿತ್ಸೆಗಳು, ಔಷದೋಪಚಾರಗಳು ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದ ಎಲ್ಲಾ ವರ್ಗದ ಜನಗಳಿಗೂ ತಲುಪುವಲ್ಲಿ ಪ್ರಯತ್ನಗಳು ಜರುಗುತ್ತಾ ಬಂದಿರುವುದು ವಿಶ್ವಾಸನೀಯ ಎಂದು ಹೇಳಿದರು.
ಅಮಾತೆ – 2024 ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭದ ಅಧ್ಯಕ್ಷರಾದ ಶಿವಮೊಗ್ಗದ ಪಿಇಎಸ್ ಟ್ರಸ್ಟ್ ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ನಾಗರಾಜ್ ಆರ್ ಅಧ್ಯಕ್ಷೀಯ ಭಾಷಣದಲ್ಲಿ, ಮಲೆನಾಡು ಭಾಗದ ವಿದ್ಯಾರ್ಥಿ ಸಮೂಹಕ್ಕೆ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಅನುವು ಮಾಡಿಕೊಡುವಂತೆ ತಾಂತ್ರಿಕ, ಕೈಗಾರಿಕಾ ಹಾಗೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಜರುಗುತ್ತಿರುವ ಸಂಶೋಧನೆಗಳು ಮಾನವ ಸಮಾಜದ ಆಮೂಲಾಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದರು.

ಶಿವಮೊಗ್ಗದಂತಹ ನಗರಗಳಿಗೂ ಸಹ ಅಂತರಾಷ್ಟ್ರೀಯ ಮಟ್ಟದಲ್ಲಿ ಘಟಿಸುವ ಸಂಶೋಧನೆಗಳ ಪ್ರಸ್ತುತತೆಯನ್ನು ತಿಳಿಸಲು ಈ ರೀತಿಯ ಸಮ್ಮೇಳನಗಳು ಒಂದು ಉತ್ತಮ ವೇದಿಕೆಯಾಗಿ ರೂಪುಗೊಳ್ಳುವಲ್ಲಿ ಯಾವುದೇ ರೀತಿಯ ಅತಿಶಯೋಕ್ತಿಗಳಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದರು. ಪಿ ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಜೊತೆ ಜೊತೆಗೆ ಪ್ರಪಂಚದಲ್ಲೆಡೆ ನಡೆಯುತ್ತಿರುವ ಅದ್ವಿತೀಯ ಸಂಶೋಧನೆಗಳ ಪ್ರಸ್ತುತತೆ ಹಾಗೂ ಅನಿವಾರ್ಯತೆಯ ಬಗ್ಗೆ ವಿಚಾರ ವಿನಿಮಯ ಮಾಡುವ ಈ ಬಗೆಯ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಪ್ರತಿ ವರ್ಷವೂ ನಡೆಸುವಂತೆ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತದೆ ಎಂಬುದನ್ನು ತಿಳಿಸಿದರು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ತಮ್ಮ ಕಾರ್ಯ ಕ್ಷೇತ್ರದ ಆಯ್ಕೆ, ತತ್ಸಂಬಂಧ ತಮ್ಮ ಕಲ್ಪನಾ ಲಹರಿ ಹಾಗೂ ಪ್ರಾಯೋಗಿಕ ಚಾಕ ಚಕ್ಯತೆಗಳ ವೃದ್ಧಿ ಬಗೆಗಿನ ಮಾಹಿತಿಗಳನ್ನು ಪಡೆಯುವಲ್ಲಿ ಸದಾಕಾಲ ಕಾರ್ಯ ತತ್ಪರರಾಗಬೇಕೆಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದ
ಡಾ. ಇನ್ – ಹೋ – ರಾ ರವರ ಕಿರುಪರಿಚಯವನ್ನು ಇನ್ಫರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್ ಹೆಚ್ ಆರ್ ನೀಡಿದರು.

ಪಿಇಎಸ್ಐಟಿಎಂನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಅನನ್ಯ ಐತಾಳ್ ಪ್ರಾರ್ಥಿಸಿದರು. ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಯುವರಾಜು ಬಿ ಎನ್ ಸ್ವಾಗತಿಸಿದರು. ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಲೈಕ್ವಿನ್ ಥಾಮಸ್ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಿಇಎಸ್ಐಟಿಎಂನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಸಿಬ್ಬಂದಿ, ಮತ್ತು ದೇಶ ವಿದೇಶದ 250ಕ್ಕೂ ಅಧಿಕ ಸಂಶೋಧನಾಕಾಂಕ್ಷಿಗಳು, ಬಿಇ, ಎಂ ಟೆಕ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version