Site icon TUNGATARANGA

ಡಿ.ಕೆ. ಶಿವಕುಮಾರ್ ಅವರ 64 ನೇ ಹುಟ್ಟುಹಬ್ಬ/ಡಿಕೆಶಿ ಸಿಎಂ ಆಗಲಿ ಎಂದು ಪ್ರಾರ್ಥಿಸಿ ಶಿವನಿಗೆ ರುದ್ರಾಭಿಷೇಕ


ಶಿವಮೊಗ್ಗ: ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ. ಇದರಿಂದ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಲು ಉತ್ತೇಜನ ನೀಡಿದಂತಾಗುತ್ತದೆ. ಅಲ್ಲದೆ ಈ ಮೂಲಕ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್ ಹೇಳಿದರು.

ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ೬೪ನೇ ಜನ್ಮ ದಿನಾಚರಣೆ ಅಂಗವಾಗಿ ೧೫-೦೫-೨೦೨೪ರ ಬುಧವಾರ ಬೆಳಿಗ್ಗೆ ಇಲ್ಲಿನ ಶುಭಂ ಹೋಟೆಲ್ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಹಕ್ಕಿಪಿಕ್ಕಿ ಕ್ಯಾಂಪ್‌ನ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸೇರಿದಂತೆ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮಗಳ ನೇತೃತ್ವವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಮತ್ತು ಡಿ.ಕೆ. ಶಿವಕುಮಾರ್ ಅವರು ಸರ್ಕಾರಿ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಅಂಕಿತಾಗೆ ತಲಾ ೫ ಲಕ್ಷ ೩ನೇ ಸ್ಥಾನ ಪಡೆದ ಮಂಡ್ಯದ ನವನೀತ್‌ಗೆ ಕ್ರಮವಾಗಿ ಮೂರು ಮತ್ತು ಎರಡು ಲಕ್ಷ ರೂ. ಪ್ರೋತ್ಸಾಹ ಧನ ನೀಡಿ ಅಭಿನಂದಿಸಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರು ದೇಶದಲ್ಲೇ ಮಾದರಿ ರಾಜಕಾರಣಿ ಆಗಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸ್ತುತ ದಿನಮಾನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಬೇಕಾದರೂ ಸ್ಪರ್ಧೆ ಎದುರಿಸಿ ಸಮಾಜದಲ್ಲಿ ಮುಂದೆ ಬರಬಹುದು ಎಂದರು.

ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್ ಮತ್ತಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರೌಢಶಾಲಾ ಹಂತದಲ್ಲೇ ಪೂರ್ವ ತಯಾರಿ ನಡೆಸಬೇಕು. ಆ ಮೂಲಕ ತಮ್ಮ ಪೋ?ಕರ ಕನಸನ್ನು ನನಸು ಮಾಡಿ ಸಮಾಜದಲ್ಲಿ ಒಳ್ಳೆ ಹೆಸರು ಸಂಪಾದನೆ ಮಾಡಬೇಕು. ಆಗ ಪೋ?ಕರ ಶ್ರಮಕ್ಕೆ ಒಂದು ಅರ್ಥ ಸಿಗುತ್ತದೆ ಎಂದು ತಿಳಿಸಿದರು.

ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಂಸ್ಕಾರಯುತ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಬೇಕಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಗುರುಗಳ ಮಾರ್ಗದರ್ಶನ, ಪಾಲಕರ ವಾಕ್ಯ ಪರಿಪಾಲನೆ, ಸ್ನೇಹಿತರ ಪ್ರೀತಿ ವಿಶ್ವಾಸ ಗಳಿಸಿ ಉತ್ತಮವಾದ ಶಿಕ್ಷಣ ಪಡೆದು, ಶೈಕ್ಷಣಿಕ ಪ್ರಗತಿಯ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸದಾಕಾಲ ಗೌರವ, ಸ್ಥಾನಮಾನ, ಸನ್ಮಾನ ಸಿಗಲು ಸಾಧ್ಯವೆಂದರು.

ಸೂಡ ಅಧ್ಯಕ್ಷ ಎಸ್. ಸುಂದರೇಶ್ ಮಾತನಾಡಿ ಆರ್. ಮೋಹನ್ ಅವರು ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘ ಸ್ಥಾಪಿಸಿ ಆಯಾ ಸಂದರ್ಭದ ಲಾಭ, ಸ್ವಹಿತ ಇಲ್ಲವೇ ವ್ಯಕ್ತಿಪೂಜೆ ಅಥವಾ ವ್ಯಕ್ತಿ ಆರಾಧನೆಗಾಗಿ ಸೀಮಿತವಾಗದೇ ೨೦೦೧ರಿಂದಲೂ ನಿರಂತರವಾಗಿ ಡಿ.ಕೆ. ಶಿವಕುಮಾರ್ ಅವರ ಹೆಸರಿಗೆ ಶೋಭೆ ತರುವಂತಹ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ, ಕ್ರಿಯಾಶೀಲ ವ್ಯಕ್ತಿತ್ವದ ಮೋಹನ್ ಅವರು ಉತ್ತಮ ನಾಯಕತ್ವದ ಗುಣ ಹೊಂದಿದ್ದಾರೆ. ಇವರಿಗೆ ಉತ್ತಮ ಸ್ಥಾನಮಾನ ಸಿಗಲಿ. ರಾಜಕೀಯ ಜೀವನ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರುಗಳನ್ನು ಸನ್ಮಾನಿಸಲಾಯಿತು. ಚಲವಾದಿ ಮಹಾಸಭಾದ ಅಧ್ಯಕ್ಷ ಸಿದ್ದಪ್ಪ, ಯಾಗ ಕ್ಷತ್ರೀಯ ಸಾಧುಶೆಟ್ಟಿ ಸಮಾಜದ ಜಿಲ್ಲಾಧ್ಯಕ್ಷ ಎನ್. ಉಮಾಪತಿ, ಗ್ಯಾರಂಟಿ ಯೋಜನೆಯ ಚಂದ್ರಭೂಪಾಲ್, ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಹಸೂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಲಲಿತಾ ಗಣೇಶ್, ಯುವ ಕಾಂಗ್ರೆಸ್ ಮುಖಂಡ ದಯಾನಂದ್, ಕಾಂಗ್ರೆಸ್‌ನ ೨೪ನೇ ವಾರ್ಡಿನ ಅಧ್ಯಕ್ಷ ಶಿವಕುಮಾರ್, ಪ್ರಕಾಶ್ ಐತಾಳ್, ಹಸೂಡಿ ಫಾರಂನ ಆರ‍್ಮುಗಂ, ಭೋವಿ ಸಮಾಜದ ಮುಖಂಡ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿ ಜೆಪಿಎನ್ ರಸ್ತೆಯ ಸರ್ವಸಿದ್ಧಿ ವಿನಾಯಕ ದೇವಾಲಯದಲ್ಲಿ ಶಿವನಿಗೆ ರುದ್ರಾಭಿಷೇಕ, ಗಣಪತಿ ಪೂಜೆ ನಡೆಯಿತು.

Exit mobile version