Site icon TUNGATARANGA

ರಾಜ್ಯದ ಟಾಪರ್ ಜೊತೆ ಶಿಕ್ಷಣ ಸಚಿವ ಮಧು ಮಾತುಕತೆ, ಅಭಿನಂದನೆ/ ಶುಭಹಾರೈಕೆ ಜೊತೆ ಸರ್ಕಾರಿ ಶಾಲೆ ಗೌರವ ಕಾಪಾಡಿ ಬೆಳೆಸಿದ ಕಂದನಿಗೆ ನೆರವಿನ ಭರವಸೆ


ಶಿವಮೊಗ್ಗ, ಮೇ.11:
ಪ್ರಸಕ್ತ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಟಾಪರ್ ಆದ ಸರ್ಕಾರಿ ಶಾಲೆಯ ಅಂಕಿತ ಜೊತೆ ಇಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.
ಸರ್ಕಾರಿ ಶಾಲೆಯ ಮಗಳು ಈ ಪ್ರಮಾಣದ ಫಲಿತಾಂಶ ಪಡೆಯಲು ಕಾರಣಕರ್ತರಾದ ಸರ್ವರನ್ನು ಅಭಿನಂದಿಸುವ ಜೊತೆಗೆ ಸರ್ಕಾರಿ ಶಾಲಾ ಶಿಕ್ಷಕರ ಬಗ್ಗೆ ಅತ್ಯಂತ ಗೌರವದಿಂದ ಪ್ರಶಂಶಿಸಿದ್ದು ವಿಶೇಷ.


ಇಂದು ಮಧು ಬಂಗಾರಪ್ಪ ಅವರು ಅಂಕಿತ ಅವರ ಜೊತೆ ಫೋನ್ ನಲ್ಲಿ ಮಾತನಾಡುತ್ತಾ ಸರ್ಕಾರಿ ಶಾಲೆಯಲ್ಲಿ ಓದಿ 625 ಅಂಕಗಳಿಗೆ 625 ಅಂಕಗಳನ್ನು ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಡೆದಿರುವುದು ಹೆಮ್ಮೆಯ ವಿಷಯ ಇದು ಅಭಿನಂದನಾರ್ಹ. ಇದಕ್ಕೆ ಕಾರಣಕರ್ತರಾದ ನಿನ್ನ ಪೂಜ್ಯ ತಂದೆ-ತಾಯಿಯವರಿಗೆ, ಶಿಕ್ಷಕ ವೃಂದಕ್ಕೆ ಹಾಗೂ ಪ್ರತ್ಯಕ್ಷ , ಪರೋಕ್ಷ ಸಹಾಯ ನೀಡಿದ ಸರ್ವರನ್ನು ಅಭಿನಂದಿಸುವುದಾಗಿ ಹೇಳಿದರು.


ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮವಾದ, ಗುಣಮಟ್ಟದ ಶಿಕ್ಷಕರಿದ್ದಾರೆ. ಒಂದು ಸರ್ಕಾರಿ ಶಾಲೆಯಲ್ಲಿ ನೀನು ಈ ಪ್ರಮಾಣದ ಅಂಕ ಪಡೆದಿರುವುದು ಇಡೀ ರಾಜ್ಯದ ಎಲ್ಲಾ ಶಾಲೆಗಳಿಗೆ ಮಾದರಿಯಾಗಿದೆ. ನಿನ್ನ ಈ ಫಲಿತಾಂಶ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಇಡೀ ಸರ್ಕಾರ ನಿನ್ನನ್ನು ಹಾಗೂ ನಿನ್ನ ಸಾಧನೆಯನ್ನು ಅಭಿನಂದಿಸಿದೆ. ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಇನ್ನಷ್ಟು ಅವಕಾಶಗಳನ್ನು ನೀಡುವ ನಮ್ಮ ಯೋಜನೆಗೆ ನೀನು ಮಾರ್ಗದರ್ಶಿಯಾಗಿದ್ದೀಯಾ ಎಂದರು.


ಅಗತ್ಯ ಬಿದ್ದರೆ ನಿನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯದ ನೆರವು ನೀಡುವುದಾಗಿ ಹೇಳಿದ ಮಧು ಬಂಗಾರಪ್ಪ ಅವರು ನಾನು ಅತ್ತ ಬಂದಾಗ ನಿನ್ನನ್ನು ಮುಖತಾಃ ಭೇಟಿ ಮಾಡುತ್ತೇನೆ. ನೀನು ರಾಜ್ಯಕ್ಕೆ ಒಂದು ಮಾದರಿ ಎಂದು ಪ್ರಶಂಸಿಸಿದರು.

Exit mobile version