Site icon TUNGATARANGA

ಭದ್ರಾವತಿಯಲ್ಲಿ ದಕ್ಷಿಣ ಭಾರತದ ಆರ್‌ಎಎಫ್ ಘಟಕ

ಶಿವಮೊಗ್ಗ: ದಕ್ಷಿಣ ಭಾರತದ ಆಸ್ತಿಯಾಗಿರುವ ಆರ್‌ಎಎಫ್ ಘಟಕ ನಮ್ಮ ಜಿಲ್ಲೆಯ ಭದ್ರಾವತಿಯಲ್ಲಿ ಸ್ಥಾಪನೆಯಾಗುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ಸಂಸದ ಬಿ.ವೈ. ರಾಘವೇಂದ್ರ ಸಂತಸ ವ್ಯಕ್ತಪಡಿಸಿದರು.
ಈ ಕುರಿತಂತೆ ಮಾತನಾಡಿದ ಅವರು, ನಾಲ್ಕು ರಾಜ್ಯಗಳಿಗೆ 38 ಜಿಲ್ಲೆಗಳಿಗೆ ಅನ್ವಯವಾಗುವಂತೆ ಆರ್‌ಎಎಫ್ ಘಟಕ ಭದ್ರಾವತಿಯ ಬುಳ್ಳಾಪುರದಲ್ಲಿ ಸ್ಥಾಪನೆಯಾಗುತ್ತಿರುವುದು ಸಂತಸದ ವಿಚಾರ. ಇದರ ಶಂಕುಸ್ಥಾಪನೆಯನ್ನು ಜ.೧೭ರ ಮಧ್ಯಾಹ್ನ12 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೆರವೇರಿಸಲಿದ್ದಾರೆ ಎಂದರು.

ಗೃಹ ಸಚಿವ ಅಮಿತ್ ಷಾ ಭೇಟಿಯ ಪೂರ್ವಭಾವಿ ಹಿನ್ನೆಲೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಘಟಕ ನಮ್ಮ ಜಿಲ್ಲೆಗೆ ಬಹಳಷ್ಟು ಅನುಕೂಲವಾಗಲಿದೆ. ಆರ್‌ಎಎಫ್ ಘಟಕ ಸ್ಥಾಪನೆಯಾಗುವ ಜಾಗದಲ್ಲೇ ಅಮಿತ್ ಷಾ ಅವರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, 10 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲೂ ಸಹ ನಮ್ಮ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಸರ್ಕಾರ ನಮ್ಮ ಜಿಲ್ಲೆಗೆ ಈ ಘಟಕವನ್ನು ನೀಡಿರುವುದು ಜಿಲ್ಲೆಯ ಜನರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ಈ ಘಟಕ ಆರಂಭವಾಗುವುದರಿಂದ ಸುಮಾರು ನಾಲ್ಕರಿಂದ ಐದು ಸಾವಿರ ಕುಟುಂಬಗಳು ಇಲ್ಲಿ ನೆಲೆಸಲಿದ್ದು, ಹೊಸ ಟೌನ್ ಶಿಪ್ ಸಹ ನಿರ್ಮಾಣವಾಗಲಿದೆ ಎಂದರು.
ಭದ್ರಾವತಿಯನ್ನು ಕೈಗಾರಿಕಾ ಹಬ್ ಆಗಿ ಮಾಡಬೇಕು ಎಂಬ ವಿಶ್ವೇಶ್ವರಯ್ಯನವರ ಕನಸಿಗೆ ಪೂರಕವಾಗಿ ಈ ಆರ್‌ಎಎಫ್ ಘಟಕ ಆರಂಭವಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ನಮ್ಮ ಜಿಲ್ಲೆಯಲ್ಲಿ ಈ ಘಟಕ ಸ್ಥಾಪನೆಯಾಗಲು ಸಹಕಾರ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಎಲ್ಲ ಅಧಿಕಾರಿಗಳಿಗೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.

Exit mobile version