Site icon TUNGATARANGA

ಶಿವಮೊಗ್ಗ ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ, ಇನ್ಸ್‌ಪೆಕ್ಟರ್‌ಗಳ ಭಾರಿ ವರ್ಗಾವಣೆ!


ಶಿವಮೊಗ್ಗ: ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆಗಳು ಮೇಲ್ದರ್ಜೆಗೇರಿದ್ದು, ಇನ್ನು ಮುಂದೆ ಶಿವಮೊಗ್ಗ ನಗರದ ಪೊಲೀಸ್ ಠಾಣೆಗಳು ಸರ್ಕಲ್ ಇನ್ಸ್‌ಪೆಕ್ಟರ್ ಪದವನ್ನು ಮರೆತು ಠಾಣೆಯ ಇನ್ಸ್‌ಪೆಕ್ಟರ್ ಎನ್ನುವಂತೆ ವಿನೋಬನಗರ ಹಾಗೂ ತುಂಗಾ ನಗರಪೊಲೀಸ್ ಠಾಣೆಗಳು ಇಬ್ಬರು ಇನ್ಸ್‌ಪೆಕ್ಟರ್‌ಗಳನ್ನು ಹೊಂದಿದೆ.
ಶಿವಮೊಗ್ಗ ವಿನೋಬನಗರ ವೃತ್ತಕ್ಕೆ ಅಂದರೆ ವಿನೋಬನಗರ ಹಾಗೂ ಜಯನಗರ ವ್ಯಾಪ್ತಿಯಲ್ಲಿ ಇನ್ಸ್‌ಪೆಕ್ಟರ್ ಆಗಿ ಎನ್.ಎಸ್.ರವಿ ಅವರು ವರ್ಗಾವಣೆಯಾಗಿದ್ದರೆ ತುಂಗಾ ನಗರ ಠಾಣೆಗೆ ಎಂ.ಎಸ್.ದೀಪಕ್ ಅವರು ವರ್ಗಾವಣೆಯಾಗಿದ್ದಾರೆ. ದೊಡ್ಡಪೇಟೆ ಹಾಗೂ ಕೋಟೆ ಠಾಣೆಗಳು ಸರ್ಕಲ್ ವ್ಯಾಪ್ತಿಯನ್ನು ಕಳೆದುಕೊಂಡಿದ್ದು, ಆಯಾ ಠಾಣಾ ವ್ಯಾಪ್ತಿಯ ಇನ್ಸ್‌ಪೆಕ್ಟರ್‌ಗಳ ನೇಮಕವಾಗಿದೆ. ಸಾಗರ ಗ್ರಾಮಾಂತರ, ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳು ಮೇಲ್ದರ್ಜೆಗೇರಿವೆ.
೨ ಸಂಚಾರಿ ಪೊಲೀಸ್ ಠಾಣೆಗಳನ್ನು ಹೊಂದಿರುವ ಶಿವಮೊಗ್ಗ ನಗರದ ಸಂಚಾರಿ ವಿಭಾಗದ ಇನ್ಸ್‌ಪೆಕ್ಟರ್ ಆಗಿ ಸಿಐಡಿಯ ಹೆಚ್.ಎಂ. ಸಿದ್ದೇಗೌಡ ಅವರು ವರ್ಗಾವಣೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ವರ್ಗಾವಣೆ ವಿವರದಲ್ಲಿ ಡಿಸಿಆರ್‌ಬಿ ಹಾಗೂ ಡಿಸಿಐಬಿ ವಿಭಾಗಗಳು ರದ್ದಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಡಿಎಸ್‌ಬಿ ಪೊಲೀಸ್ ವಿಭಾಗ ಮಾತ್ರ ಕರ್ತವ್ಯ ನಿರ್ವಹಿಸಲಿದೆ. ಡಿಸಿಆರ್‌ಬಿ ಇನ್ಸ್‌ಪೆಕ್ಟರ್ ಆಗಿದ್ದ ಕುಮಾರಸ್ವಾಮಿ ಅವರನ್ನು ಡಿಎಸ್‌ಬಿ ಇನ್ಸ್‌ಪೆಕ್ಟರ್ ಆಗಿ ನೇಮಿಸಲಾಗಿದೆ.
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯ ಸ್ಪೆಷಲ್ ಬ್ಯಾಂಚ್‌ನ ಹರೀಶ್ ಪಾಟೀಲ್ ಅವರಿಗೆ ಕಡೂರಿನ ಪೊಲೀಸ್ ತರಬೇತಿ ಕೇಂದ್ರದ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆಯಾಗಿದೆ. ಅಂತೆಯೇ ಡಿಸಿಆರ್‌ಬಿ ಇನ್ಸ್‌ಪೆಕ್ಟರ್ ಆಗಿದ್ದ ಮಾದಪ್ಪ ಅವರನ್ನು ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆ ಇನ್ಸ್‌ಪೆಕ್ಟರ್ ಆಗಿ ವರ್ಗಾಯಿಸಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸಿದ್ದು, ಹಾಸನ ಡಿಎಸ್‌ಬಿ ಇನ್ಸ್‌ಪೆಕ್ಟರ್ ಆಗಿದ್ದ ಸಂತೋಷ್ ಕುಮಾರ್ ಡಿ.ಕೆ. ಅವರನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ದೊಡ್ಡಪೇಟೆ ಹಾಗೂ ಕೋಟೆ ವೃತ್ತದ ವಸಂತ್ ಕುಮಾರ್ ಹಾಗೂ ಚಂದ್ರಶೇಖರ್ ಅವರನ್ನು ಮೇಲ್ದರ್ಜೆಗೇರಿಸಲಾದ ದೊಡ್ಡಪೇಟೆ ಹಾಗೂ ಕೋಟೆ ಠಾಣೆಗೆ ವರ್ಗಾಯಿಸಲಾಗಿದೆ.
ಎಸಿಬಿಯಿಂದ ಸಿ.ಜೆ.ಚೈತನ್ಯ ಅವರನ್ನು ಮೇಲ್ದರ್ಜೆಗೇರಿಸಲಾದ ಭದ್ರಾವತಿ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದ್ದು, ಸಾಗರ ಗ್ರಾಮಾಂತರಕ್ಕೆ ಮಂಗಳೂರಿನ  ಸಿಇಎನ್ ಇನ್ಸ್‌ಪೆಕ್ಟರ್ ಬಿ.ಸಿ.ಗಿರೀಶ್ ಅವರನ್ನು ವರ್ಗಾಯಿಸಲಾಗಿದೆ.
ಒಟ್ಟಾರೆ ರಾಜ್ಯದಲ್ಲಿ ೧೪೨ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಇಲಾಖೆ ವತಿಯಿಂದ ಡೈರಕ್ಟರ್ ಜನರಲ್ ಡಾ.ಎಂ.ಎ. ಸಲೀಂ ಅವರು ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.

Exit mobile version