ಮತದಾನ ಮಾಡುವುದು ನಮ್ಮ ಕರ್ತವ್ಯ, ಗರ್ವ
ಶಿವಮೊಗ್ಗ:
ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಮತದಾರರ ಪಾತ್ರ ಪ್ರಮುಖವಾಗಿದ್ದು, ನಾಳೆ ನಡೆಯಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಮಹಾನಗರ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿ ಅನುಪಮಾ ಮನವಿ ಮಾಡಿದ್ದಾರೆ.
ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ನಾಳೆ ಬೆಳಗ್ಗೆ7 ಗಂಟೆಯಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಮತದಾನಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ವಿಶೇಷ ಬೂತ್ ಗಳನ್ನು ಕೂಡ ತೆರೆಯಲಾಗಿದೆ. ಮಹಾನಗರ ಪಾಲಿಕೆ ಕೂಡ ಮತದಾನ ಪ್ರಮಾಣ ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ಹಲವು ಸ್ಪರ್ಧೆಗಳು ಬೀದಿ ನಾಟಕ, ಯುವಕರಲ್ಲಿ ಜಾಗೃತಿ, ಕಾಲೇಜ್ ಆವರಣಗಳಲ್ಲಿ ಹೀಗೆ ಪ್ರಚಾರ ಮಾಡಿರುವುದರಿಂದ ಈ ಬಾರಿ ಮತದಾನ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ ಎಂದು ಹೇಳಿದರು.
ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಕೆಲವು ಹೋಟೆಲ್ ಮಾಲೀಕರು ಕೂಡ ಮುಂದೆ ಬಂದಿದ್ದು, ಹೋಟೆಲ್ ಶುಭಂ ಮತ್ತು ಮಾಲ್ಗುಡಿ ಹೋಟೆಲ್ ನವರು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಟೀ ಅಥವಾ ಕಾಫಿಯನ್ನು ಉಚಿತವಾಗಿ ನೀಡುವುದಾಗಿ ತಿಳಿಸಿವೆ.
ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಚುನಾವಣೆ ಬಹುದೊಡ್ಡ ಅಸ್ತ್ರವಾಗಿದೆ. ಮುಖ್ಯವಾಗಿ ಯುವ ಜನಾಂಗ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮತದಾನ ಮಾಡುವುದು ನಮ್ಮ ಕರ್ತವ್ಯ. ಮತ್ತು ಅದೊಂದು ಗರ್ವ. ಹಾಗಾಗಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದಿದ್ದಾರೆ.