Site icon TUNGATARANGA

ಪ್ರಧಾನಿ ಮೋದಿಗೆ ಭಯ ಶುರು ಪ್ರಜ್ವಲ್‌ರೇವಣ್ಣ ಅತ್ಯಾಚಾರಿಯ ಪರ ಮತಯಾಚಿಸಿದ್ದು ಎಷ್ಟು ಸರಿ / ನಾವು ಅಧಿಕಾರಕ್ಕೆ ಬಂದರೆ ತಕ್ಷಣ 1 ಲಕ್ಷ ಖಾತೆಗೆ ಜಮಾ ಸಮಾನತೆ ಕೇಳಿದರೆ ನಮ್ಮನ್ನು ನಕ್ಸಲ್ ಪಟ್ಟಿಗೆ ಸೇರಿಸುವ ಬಿಜೆಪಿಗರು: ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು.

ಅವರು ಇಂದು ಅಲ್ಲಮಪ್ರಭು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಜಾಧ್ವನಿ -2 ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಒಬ್ಬ ಸಾಮೂಹಿಕ ಅತ್ಯಾಚಾರಿ. ಆತನನ್ನು ಗೆಲ್ಲಿಸಿ ಎಂದು ಪ್ರಚಾರ ಮಾಡಿದ ತಪ್ಪಿಗೆ ಮತ್ತು ಪ್ರಜ್ವಲ್ ರೇವಣ್ಣ ಅವರು ದೇಶ ತೊರೆಯುವುದಕ್ಕೆ ಸಹಾಯ ಮಾಡಿದ್ದಕ್ಕಾಗಿ ನರೇಂದ್ರ ಮೋದಿ ರಾಷ್ಟ್ರದ ಕ್ಷಮೆ ಕೇಳಬೇಕು ಎಂದು ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಪ್ರಜ್ವಲ್ ಒಬ್ಬ ಮಾಸ್ ರೇಪಿಸ್ಟ್ ಎಂದು ಬಿಜೆಪಿಯವರಿಗೆ ಗೊತ್ತಿದ್ದರೂ ಕೂಡ ಮೋದಿ ಅವರನ್ನು ಕರೆತಂದು ಅವರ ಪರ ಪ್ರಚಾರ ಮಾಡಿದವರು ಬಿಜೆಪಿಯವರು. ಇದು ರಾಷ್ಟ್ರದಲ್ಲಿಯೇ ಅತಿದೊಡ್ಡ ಲೈಂಗಿಕ ದೌರ್ಜನ್ಯವಾಗಿದೆ. ಕೇವಲ ಲೈಂಗಿಕ ದೌರ್ಜನ್ಯ ಮಾತ್ರವಲ್ಲ, ಆತ ಸಾಮೂಹಿಕ ಅತ್ಯಾಚಾರಿಯಾಗಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ಉಳಿಸುವ ಕೆಲಸ ಮಾಡಿದೆ. ಈ ಬಿಜೆಪಿ ಸಂವಿಧಾನವನ್ನೇ ತಿರುಚಲು ಪ್ರಯತ್ನಿಸಿದೆ. ಬಿಜೆಪಿಯವರು ಸಂವಿಧಾನದಲ್ಲಿರುವ ಮೀಸಲಾತಿಯನ್ನೇ ತೆಗೆದು ಹಾಕಲು ಹೊರಟಿದ್ದಾರೆ. ಅಂಬೇಡ್ಕರ್ ರಚಿಸಿದ ಶ್ರೇಷ್ಟ ಗ್ರಂಥ ಸಂವಿಧಾನ. ಸಮಾನತೆ ಅಲ್ಲಿದೆ. ನಾವು ಸಮಾನತೆ ಕೇಳಿದರೆ ನಮ್ಮನ್ನು ಅವರು ನಕ್ಸಲ್ ಪಟ್ಟಕ್ಕೆ ಹೋಲಿಸುತ್ತಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಅವರು ಕೂಡ ದೇಶದ ಕ್ಷಮೆ ಕೇಳಬೇಕು ಎಂದರು.

ಕಾಂಗ್ರೆಸ್ ಸಂವಿಧಾನ ಉಳಿಸುವುದಕ್ಕಾಗಿಯೇ ಈ ಚುನಾವಣೆಯಲ್ಲಿ ಗೆಲ್ಲಬೇಕಾಗಿದೆ. ಗ್ಯಾರಂಟಿ ಯೋಜನೆಗಳು ಇದಕ್ಕೆ ಸಹಕಾರಿಯಾಗಲಿವೆ. ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂ. ಕೊಡುವ ನ್ಯಾಯ ಯೋಜನೆ ಅದು. ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಒಂದು ಲಕ್ಷ ರೂಪಾಯಿಯನ್ನು ಪಟಪಟನೇ ಅವರ ಖಾತೆಗಳಿಗೆ ಜಮಾ ಮಾಡುತ್ತೇವೆ. ಹಾಗೆಯೇ ಯುವನಿಧಿ ಯೋಜನೆ ಮೂಲಕ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷಕ್ಕೆ ಒಂದು ಪಕ್ಷ ರೂ, ನೀಡಿ ಅವರಿಗೆ ತರಬೇತಿ ಕೊಟ್ಟು ಕೇಂದ್ರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

ಪ್ರಧಾನಿ ಮೋದಿ ಅವರಿಗೆ ಭಯ ಶುರುವಾಗಿದೆ. ಏಕೆಂದರೆ ಅವರ ಜೊತೆಗಿರುವ 27 ಜನ ಶ್ರೀಮಂತರಿಗೆ ಈ ಹಣ ಹೋಗುವುದಿಲ್ಲ ಎಂದು. ಬಿಜೆಪಿಯವರ ಹಾಗೆ ನಾವು ಸುಳ್ಳು ಹೇಳುವುದಿಲ್ಲ. ಮೋದಿ ಅವರು ಕೆಲವೇ ಕೆಲವು ವ್ಯಕ್ತಿಗಳ ಸಾಲ ಮನ್ನಾ ಮಾಡಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು.

ದೇಶದಲ್ಲಿ ಇಂದು ವಿಶ್ವವಿದ್ಯಾಲಯಗಳು ಸೇರಿ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನು ಸರ್ಕಾರದಲ್ಲಿಯೇ ಉಳಿಸಿಕೊಳ್ಳಲಾಗುವುದು ಎಂದರು.

ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮಂಜುನಾಥ್ ಭಂಡಾರಿ, ಸಚಿವ ಮಧು ಬಂಗಾರಪ್ಪ, ಟಿ.ಬಿ. ಜಯಚಂದ್ರ, ಕಿಮ್ಮನೆ ರತ್ನಾಕರ್, ಬೇಳೂರು ಗೋಪಾಲಕೃಷ್ಣ, ಸಂಗಮೇಶ್, ಆಯನೂರು ಮಂಜುನಾಥ್, ನಟರಾದ ಶಿವರಾಜ್ ಕುಮಾರ್, ದುನಿಯಾ ವಿಜಯ್ ಸೇರಿದಂತೆ ಹಲವರಿದ್ದರು.

Exit mobile version