Site icon TUNGATARANGA

ಸಾಮಾನ್ಯ ಕಾರ್ಯಕರ್ತನಿಗೂ ಭವಿಷ್ಯದಲ್ಲಿ ಉನ್ನತ ಸ್ಥಾನ : ಡಿ.ಬಿ ಶಂಕರಪ್ಪ

ಭದ್ರಾವತಿ: ಸಾಮಾನ್ಯ ಕಾರ್ಯಕರ್ತರಾಗಿ ಕನ್ನಡ ಸೇವೆ ಮಾಡಿದ ವ್ಯಕ್ತಿಗೆ ಸಮ್ಮೇಳನಾಧ್ಯಕ್ಷ ಗೌರವ ಸಂದಿರುವುದು ನಾಡಿನ ಪ್ರತಿಯೊಬ್ಬ ಕನ್ನಡ ಸೇವಕನಿಗೂ ಸಲ್ಲುವ ಗೌರವವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ಪ್ರಶಂಸೆ ವ್ಯಕ್ತಪಡಿಸಿದರು.
ಅವರು ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿರುವ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಎ.ಪಿ ಕುಮಾರ್‌ರವರನ್ನು ಅಭಿನಂದಿಸಿ ಮಾತನಾಡಿದರು.
ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಭವಿಷ್ಯದಲ್ಲಿ ಉನ್ನತಮಟ್ಟದ ಗೌರವ ಲಭಿಸುತ್ತದೆ ಎಂಬುದಕ್ಕೆ ಎ.ಪಿ ಕುಮಾರ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿವುದು ಸಾಕ್ಷಿಯಾಗಿದೆ. ಯಾವುದನ್ನೂ ನಿರೀಕ್ಷಿಸದೆ ಕನ್ನಡಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡು ಸುಮಾರು 8 ದಶಕಕ್ಕೂ ಹೆಚ್ಚು ಕಾಲ ದುಡಿದಿರುವ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಾಹಿತಿಯಲ್ಲದ ವ್ಯಕ್ತಿಯೊಬ್ಬರನ್ನು ಹಲವು ಆಯಾಮಗಳ ಮೂಲಕ ಗುರುತಿಸುವ ಪ್ರಯತ್ನವನ್ನು ತಾಲೂಕು ಪರಿಷತ್ ಮಾಡುವ ಮೂಲಕ ಜಿಲ್ಲೆಯಲ್ಲಿ ಮಾದರಿಯಾಗಿದೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ, ಪ್ರಮುಖರಾದ ಡಾ.ಬಿ.ಎಂ ನಾಸಿರ್‌ಖಾನ್, ಜಿ.ಎನ್ ಸತ್ಯಮೂರ್ತಿ, ಕೆ. ಮಂದಾರಕುಮಾರ್, ಸಿದ್ದಲಿಂಗಯ್ಯ, ಅರಳೇಹಳ್ಳಿ ಅಣ್ಣಪ್ಪ, ಚಂದ್ರಶೇಖರಪ್ಪ ಚಕ್ರಸಾಲಿ, ಎನ್. ಮಂಜುನಾಥ್, ನಾಗರತ್ನ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಜೈನ ಸಮಾಜದ ವತಿಯಿಂದ ಎ.ಪಿ ಕುಮಾರ್ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

Exit mobile version