Site icon TUNGATARANGA

ಜನರ ಭರ್ಜರಿ ಬೆಂಬಲ / ಎಲೆಕ್ಷನ್ ಇವತ್ತು ನಡೆದರೆ 1 ಲಕ್ಷ ಅಂತರದಲ್ಲಿ ಗೆಲ್ಲೋದು ನಾನೇ : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ:

ನಾನು ಕ್ಷೇತ್ರದ ಯಾವುದೇ ಊರಿಗೆ ಹೋದರು ಜನ ನಿರೀಕ್ಷೆ ಮೀರಿ ಬೆಂಬಲ ಕೊಡುತ್ತಿದ್ದಾರೆ. ಜನರ ಬೆಂಬಲ ನೋಡುತ್ತಿದ್ದರೆ ಇವತ್ತೇ ಚುನಾವಣೆ ನಡೆದರೆ ಒಂದು ಲಕ್ಷ ಮತ ಅಂತರದಲ್ಲಿ ಗೆಲ್ಲುವುದು ಖಚಿತವಾಗಿದೆ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಗರದಲ್ಲಿ ವಿಪ್ರ ಟ್ರಸ್ಟ್, ವಿಪ್ರ ಮಹಿಳೆಯರಿಂದ ಬುಧವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಲಿಂಗಾಯಿತರು, ವೀರಶೈವರು ಸೇರಿದಂತೆ ಎಲ್ಲ ಸಮುದಾಯದವರು ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಸುಮಾರು ಶೇ.60ರಷ್ಟು ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್‌, ಜೆಡಿಎಸ್‌ ನಾಯಕರು ನನಗೆ ಬೆಂಬಲ ನೀಡುತ್ತಿದ್ದಾರೆ. ನಾನು ಯಾವ ವಿಚಾರ ಇಟ್ಟುಕೊಂಡು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೋ ಅದಕ್ಕೆ ಎಲ್ಲರು ಬೆಂಬಲ ಸಿಗುತ್ತಿರುವುದು ನೋಡಿದರೆ ನೂರಕ್ಕೆ ನೂರು ಗೆಲ್ಲುತ್ತೇನೆ ಎಂಬ ವಿಶ್ವಾಸ ಹೆಚ್ಚಿಸಿದೆ ಎಂದರು.

ನಾನು ಸ್ಪರ್ಧೆ ಮಾಡುತ್ತೇನೆ ಎಂದಾಗ ಈಶ್ವರಪ್ಪ ಸ್ಪರ್ಧೆ ಮಾಡಲ್ಲ, ನಾಮಪತ್ರ ಸಲ್ಲಿಸಲ್ಲ ಎಂದು ಅಪ್ಪ-ಮ್ಕಕಳು ಇದೇ ರೀತಿ ಅಪಪ್ರಚಾರ ಮಾಡಿಕೊಂಡು ಬಂದರು. ಆದರೆ, ಹಲವರು ನನ್ನ ಸಿದ್ದಾಂತವನ್ನು ಮೆಚ್ಚಿದರು. 35 ವರ್ಷ ಪಕ್ಷಕ್ಕಾಗಿ ದುಡಿದ ವ್ಯಕ್ತಿ ಈಗ ಬಿಜೆಪಿ ಬಿಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದರೆ ಪಕ್ಷದಲ್ಲಿ ಎಷ್ಟು ಸಮಸ್ಯೆಗಳಿಗೆ ಎಂದು ಅರ್ಥ ಮಾಡಿಕೊಳ್ಳಿ, ದಯವಿಟ್ಟು ಎಲ್ಲರೂ ಈಶ್ವರಪ್ಪ ಅವರಿಗೆ ವೋಟು ಕೊಡಿ ಎಂದು ನಂಜುಂಡ ಶೆಟ್ಟಿ ಅವರು ನನ್ನ ಪರ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ತೀರ್ಥಹಳ್ಳಿಯಲ್ಲಿರುವ ಭೀಮನಕಟ್ಟೆ ಮಠಕ್ಕೆ ನನ್ನ ಬೆಂಬಲಗರು ಹೋಗಿದ್ದಾಗ ಸ್ವಾಮೀಜಿ ಈಶ್ವರಪ್ಪ ಮೋದಿ ವಿರುದ್ಧ ನಿಲ್ಲುತ್ತಾರಾ? ಬಿಜೆಪಿ ಬಿಡುತ್ತಾರಾ ಎಂದು ಕೇಳಿದ್ದಾರೆ. ಅವರು ಬಿಜೆಪಿ ಬಿಡಲ್ಲ. ಚುನಾವಣೆ ಮುಗಿದ ಮೇಲೆ ಅವರು ಮತ್ತೆ ಬಿಜೆಪಿಗೆ ಬರುತ್ತಾರೆ. ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತಾರೆ ಎಂದು ವಿವರಿಸಿದಾಗ ಸ್ವಾಮೀಜಿ ನನಗೆ ಆಶೀರ್ವಾದ ಮಾಡಿ ನನ್ನ ನಾಮಪತ್ರ ಸಲ್ಲಿಕೆಗೆ ಒಂದು ಸಾವಿರ ರೂ. ದೇಣಿಗೆ ಕೊಟ್ಟು ಕಳುಯಿಸಿದ್ದಾರೆ ಎಂದರೆ ನಾನು ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದನೋ ಗೊತ್ತಿಲ್ಲ ಎಂದರು.

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೂ 35 ಸಾವಿರ ಜನ ಬರುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ನಾಮಪತ್ರ ಬಳಿಕ ಶ್ರೀಧರಾಶ್ರಮಕ್ಕೆ ಹೋಗಿ ಅಲ್ಲಿ ಸ್ವಾಮೀಜಿ ಆಶೀರ್ವಾದ ಪಡೆಯುವ ಸಂದರ್ಭ ದೇವರಿಗೆ ಪೂಜೆ ಮಾಡಿ ಸ್ಕ್ರೀನ್‌ ತೆಗೆಯುವ ಸಂದರ್ಭದಲ್ಲಿ ಅರ್ಚಕರು ಹೊರ ಬಂದು ನಿಮಗೆ ಜಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು. ಆಗ ನನಗೆ ಆಶ್ವರ್ಯವಾಯಿತು. ಹೀಗೆ ಎಲ್ಲ ಮಠಕ್ಕೂ ಹೋಗಿ ಬಂದೆ. ಎಲ್ಲ ಮಠದ ಸ್ವಾಮೀಜಿಗಳು ನೀನು ಹಿಂದು ಪರ ಕೆಲಸ ಮಾಡುತ್ತಿದ್ದೀಯಾ ನಿನಗೆ ಒಳ್ಳೆದಾಗುತ್ತದೆ ಎದು ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.

ಚುನಾವಣೆ ಬಳಿಕ ಬಿಜೆಪಿಯಲ್ಲಿ ಶುದ್ದೀಕರಣ ಆಗಲಿದೆ. ಹಿಂದುತ್ವ ಪರವಾಗಿರುವವರು ನನಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಅನೇಕರಿಗೆ ಇನ್ನೂ ನನ್ನ ಚಿಹ್ನೆ ಕಮಲ ಎಂದುಕೊಂಡಿದ್ದಾರೆ. ಬಿಜೆಪಿಯಿಂದ ನನ್ನ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಈ ಚುನಾವಣೆಯಲ್ಲಿ ನನ್ನ ಚಿಹ್ನೆ ಕಮಲ ಅಲ್ಲ. ಕಬ್ಬಿನ ಜಲ್ಲೆ ಜೊತೆ ನಿಂತಿರುವ ರೈತ ಚಿಹ್ನೆ ನನ್ನದು. ರೈತನ ಚಿಹ್ನೆ ಸಿಕ್ಕಿರುವುದು ತುಂಬಾನೇ ಸಂತೋಷವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಸಿಕ್ಕರೆ ದೇವರ ಆಶೀರ್ವಾದ ಸಿಕ್ಕಂಗೆ. ಇದು ನನ್ನ ಕೊನೆ ಚುನಾವಣೆ, ನಾನು ಯಾವತ್ತು ಕಾಂಗ್ರೆಸ್‌ಗೆ ಹೋಗಲ್ಲ. ನನ್ನ ಚಿಹ್ನೆ ರೈತ ಎಂದು ತಿಳಿಸಿ ನನ್ನ ಪರ ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಮೇಶ್ ಹೊಯ್ಸಳ, ವಿಪ್ರ ಸಹಕಾರ ಸಂಘದ ಸದಸ್ಯೆ ಉಮಾ ಮೂರ್ತಿ, ವಿಜಯ ಲಕ್ಷ್ಮಿ ಹೊಯ್ಸಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Exit mobile version