Site icon TUNGATARANGA

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪರಿಗೆ ಜಿಲ್ಲೆಯಲ್ಲಿ ಭರ್ಜರಿ ಬೆಂಬಲ

ಶಿವಮೊಗ್ಗ: ಕರ್ನಾಟಕ ಮಾದಿಗ ದಂಡೋರ ಸಮಾಜವು ರಾಷ್ಟ್ರ ಭಕ್ತರ ಬಳಗದ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರಿಗೆ ಬೆಂಬಲ ನೀಡಲಿದೆ ಎಂದು ಮಾದಿಗ ದಂಡೋರದ ಜಿಲ್ಲಾ ಉಪಾಧ್ಯಕ್ಷ ಪ್ರಭು ಹಾಗೂ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕೆಂಪಮ್ಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾದಿಗ ಸಮಾಜಕ್ಕೆ ಕೆ.ಎಸ್. ಈಶ್ವರಪ್ಪ ಅವರ ಕೊಡುಗೆ ಅಮೂಲ್ಯವಾಗಿದೆ. ಎಲ್ಲಾ ರಂಗಗಳಲ್ಲಿಯೂ ಹಿಂದುಳಿದ ಈ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಕೆ.ಎಸ್. ಈಶ್ವರಪ್ಪ ಅವರು ಮೊದಲಿನಿಂದಲೂ ಪ್ರಯತ್ನಿಸಿದ್ದಾರೆ. ಶಿವಮೊಗ್ಗದ ರಾಯಲ್ ಆರ್ಕೆಡ್ ಹಿಂಭಾಗದ ಸ್ಲಂನಲ್ಲಿ ವಾಸವಾಗಿದ್ದ ನಮ್ಮ ಸಮಾಜದ ಸುಮಾರು 48 ಕುಟುಂಬಗಳನ್ನು ಬಿ.ವೈ. ರಾಘವೇಂದ್ರ ಅವರು ಖಾಲಿ ಮಾಡಿಸಿದ್ದರು. ಆದರೆ, ಈಶ್ವರಪ್ಪನವರು ಮನೆ ಕಳೆದುಕೊಂಡ ನಮ್ಮ ಸಮಾಜದವರಿಗೆ ಚಿಕ್ಕಲ್ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 4ರಲ್ಲಿ ನಿವೇಶನಗಳನ್ನು ನೀಡಿ ಖಾತೆ ಮಾಡಿಸಿಕೊಟ್ಟರು ಎಂದರು.

ಸಂಸದ ಬಿ.ವೈ. ರಾಘವೇಂದ್ರ ಇದುವರೆಗೂ ಪೌರ ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಯಾವುದೇ ಸಹಕಾರ ನೀಡಲಿಲ್ಲ. ಆದರೆ ಈಶ್ವರಪ್ಪ ಸಹಕಾರ ನೀಡಿದ್ದಾರೆ. ಸಮಾಜದ ಸಮುದಾಯ ಭವನಕ್ಕೆ ಮೂರು ಕೋಟಿ ಸಹಾಯಧನವನ್ನು ಸರ್ಕಾರದಿಂದ ಕೊಡಿಸಿದ್ದು ಈಶ್ವರಪ್ಪನವರೇ ಹೊರತೂ ರಾಘವೇಂದ್ರರಲ್ಲ ಎಂದರು.

ಯಡಿಯೂರಪ್ಪ ಮತ್ತು ಅವರ ಮಕ್ಕಳು ತಮ್ಮ ಸುತ್ತಲೂ ಕೇವಲ ಲಿಂಗಾಯತ ಸಮಾಜದವರನ್ನೇ ಇಟ್ಟುಕೊಂಡಿದ್ದಾರೆ. ಏನಾದರೂ ಸಹಾಯ ಕೇಳಲು ರಾಘವೇಂದ್ರ ಅವರ ಮನೆಗೆ ಹೋದರೆ ನಮ್ಮನ್ನು ಮನೆಯ ಹೊರಗೆ ನಿಲ್ಲಿಸಿ ಮಾತಾಡಿ ಕಳಿಸುತ್ತಾರೆ. ಆದರೆ ಈಶ್ವರಪ್ಪ ಅವರು ನಮ್ಮ ಸಮಾಜದ ಮುಖಂಡರನ್ನು ಮನೆ ಹೊರಗಲ್ಲದೇ, ಒಳಗೂ ಕರೆಯುತ್ತಾರೆ. ಈ ಎಲ್ಲಾ ಅಂಶಗಳಿಂದ ಈ ಬಾರಿ ನಮ್ಮ ಮಾದಿಗ ಸಮಾಜ ಕೆ.ಎಸ್. ಈಶ್ವರಪ್ಪ ಅವರನ್ನು ಬೆಂಬಲಿಸುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ರಾಜು, ಲಕ್ಷ್ಮಯ್ಯ, ಮೀನಾಕ್ಷಮ್ಮ, ರಶ್ಮಿ, ನಾಗರಾಜ್, ಮಂಜುನಾಥ್, ತೇಜಸ್, ಹಾಲಪ್ಪ ಹರಿಗೆ, ಮಂಜಣ್ಣ, ಪರಮೇಶ್ವರಪ್ಪ, ಕೃಷ್ಣಪ್ಪ, ಸಂಗಪ್ಪ ಮುಂತಾದವರಿದ್ದರು.

Exit mobile version