Site icon TUNGATARANGA

ಸತಿಪತಿಯ ಹೊಂದಾಣಿಕೆ ಬದುಕು ಈಶ್ವರನಿಗೆ ಇಷ್ಟ, ಅಂತೆಯೇ ಬದುಕಿ: ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು

    ಸತಿ ಪತಿ ಒಂದಾದ ಬದುಕು ಈಶ್ವರನಿಗೆ ಅತ್ಯಂತ ಇಷ್ಟವಾದುದು. ಧರ್ಮ, ಅರ್ಥ, ಕಾಮದ ಮೂರು ಅಂಶಗಳಲ್ಲಿ ಸತಿಪತಿ ಪರಸ್ಪರ ಹೊಂದಾಣಿಕೆ ಅತ್ಯಗತ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ತಿಳಿಸಿದರು.
ಅವರಿಂದು ಬೆಳಗ್ಗೆ 26ನೇ ವರ್ಷದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಸಮಾರಂಭ ನಿಮಿತ್ತ ನಡೆದ ಉಚಿತ ಸಾಮೂಹಿಕ  ವಿವಾಹ ಹಾಗೂ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಹಿರಿಯರನ್ನು ಗೌರವಿಸುವ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ಡಾ. ರಾಜಕುಮಾರ್ ಅವರ ಉದಾಹರಣೆಯೊಂದರ ಮೂಲಕ ಪತ್ನಿ ಗಂಡನಿಗೆ ಹೇಗೆ ಮುಖ್ಯವಾಗುತ್ತಾಳೆ. ಬದುಕು ಹೇಗೆ ಸುಂದರವಾಗುತ್ತದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದ ಅವರು ಹಿಂದೆ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಇದ್ದಾಗ ನಮ್ಮ ಅಂದರಮಕ್ಕಳ ಶಾಲೆಗೆ ಬಂದಿದ್ದ ಡಾ. ರಾಜಕುಮಾರ್ ಅವರು ಮಾತನಾಡಿದಾಗ ಶ್ರೀಗಳು ಮಕ್ಕಳಿಗಾಗಿ ಹಾಡೊಂದನ್ನು ಹಾಡಲು ತಿಳಿಸಿದರು. ಆಗ ಅಲ್ಲಿಯೇ ಪಕ್ಕದಲ್ಲಿದ್ದ ಪಾರ್ವತಮ್ಮ ರಾಜಕುಮಾರ್ ಅವರಿಗೆ ರಾಜಕುಮಾರ್ ಅವರು ಹಾಡು ಕೇಳುತ್ತಾರೆ ಹಾಡಲೇ ಎಂದು ಪ್ರಶ್ನಿಸಿದರು. ಇದು ತಗ್ಗಿ ಬಗ್ಗಿ ನಡೆಯುವುದಲ್ಲ. ಪತ್ನಿಯ ಬಗ್ಗೆ ಅವರಿಗಿದ್ದ ಪ್ರೀತಿ ವಿಶ್ವಾಸ ಎಂದು ಹೇಳಿದರು.


      ಧರ್ಮದ ವಿಚಾರದಲ್ಲಿ ಸತಿಪತಿ ಜೊತೆಯಾಗಿರಬೇಕು. ಹಾಗೆಯೇ ಹಣಕಾಸಿನ ವಿಷಯದಲ್ಲಿ ಎಲ್ಲಾ ವ್ಯವಹಾರಗಳು ಗಂಡ ಹೆಂಡತಿ ಮಧ್ಯೆ ಗುಟ್ಟಾಗಿರಬಾರದು. ಮನೆಯ ಬೇಕು, ಬೇಡ ಎಂಬುದರ ಬಗ್ಗೆ ಇಬ್ಬರೂ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಬೇಕು. ಎಂದು ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ ಎಂಬ ಶ್ಲೋಕದ ವಿವರಣೆ ನೀಡಿದರು.


ಯಾವುದೇ ಪುರುಷನ ಯಶಸ್ಸಿನ ಸಾಧನೆಯ ಹಿಂದೆ ತಾಯಿ ಅಥವಾ ಪತ್ನಿಯ ಬೆಂಗಾವಲಿರುತ್ತದೆ ಎಂದು ಅರ್ಥ ಸಹಿತವಾಗಿ ಶ್ರೀಗಳು ವಿವರಿಸಿದರು.
      ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ  ಹಾಗೂ ಶಿವಮೊಗ್ಗ ಶಾಖೆಯ ಪ್ರಮುಖರು ಆದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಹಿಂದಿನಿಂದ ನಡೆಸುತ್ತಾ ಬಂದಿರುವ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಈಗಾಗಲೇ 600 ಕ್ಕೂ ಹೆಚ್ಚು ದಂಪತಿಗಳು ಬದುಕಿನ ಭವ್ಯ ಬಂಧನಕ್ಕೆ ಒಳಗಾಗಿದ್ದಾರೆ. ಸುಖಿಯಾಗಿದ್ದಾರೆ ಎಂಬುದು ಸಂತೋಷದ ವಿಷಯ. ಇಲ್ಲಿ ವಿವಾಹವಾಗುವ ಸತಿಪತಿ ಇಬ್ಬರೂ ಅತ್ಯಂತ ಆತ್ಮೀಯರಾಗಿ ಬದುಕಬೇಕು. ಯಾವುದೇ ಸಮಸ್ಯೆಗಳು ಬಂದರೂ ಅವುಗಳ ವಿಷಯವನ್ನು ದೊಡ್ಡದು ಮಾಡದೆ ಬದುಕನ್ನು ಪರಸ್ಪರ ಹೊಂದಾಣಿಕೆ ಮೂಲಕ ಕಟ್ಟಿಕೊಳ್ಳಬೇಕು. ಅಗತ್ಯ ಬಿದ್ದರೆ ಮಠಕ್ಕೆ ಬನ್ನಿ ಸರಿ ಮಾಡೋಣ ಎಂದರು.


     ಕನ್ನಡದ ಅತ್ಯಂತ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಕುವೆಂಪು ಅವರ ಜನ್ಮ ಭೂಮಿ ಇದು. ಈ ಭೂಮಿಯಲ್ಲಿ ಬದುಕುತ್ತಿರುವ ನೀವುಗಳು ಪುಣ್ಯವಂತರು. ಕುವೆಂಪು ಕಟ್ಟಿಕೊಟ್ಟ ಸುಂದರ ಬದುಕು ನಿಮ್ಮದಾಗಲಿ ಅವರೂ ಸಹ ಪತ್ನಿ ಹೇಮಾವತಿ ಅಮ್ಮನವರ ಬಗ್ಗೆ ಇಟ್ಟುಕೊಂಡಿದ್ದ ಪ್ರೀತಿ ಹಾಗೂ ವಿಶ್ವಾಸದ ಉದಾಹರಣೆ ನೀಡಿದರು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ಕಿರಿ ಕಿರಿ ಆಗಬಾರದೆಂದು ಅತ್ಯಂತ ವಿಶೇಷವಾಗಿ ಹಾಗೂ ಸರಳವಾಗಿ ಈ ಬಾರಿ ಸಮಾರಂಭವನ್ನು ಆಚರಿಸುತ್ತಿದ್ದು ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.

   ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಕಾರ್ಯಕ್ರಮದ ರೂವಾರಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಹಾಗೂ ಬಿಜೆಪಿ ಸಂಸದ ಅಭ್ಯರ್ಥಿ ಬಿ. ವೈ.ರಾಘವೇಂದ್ರ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ಚಲನಚಿತ್ರ ನಟ ಶಿವರಾಜ್ ಕುಮಾರ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾಜಿ ಸಂಸದ ಆಯನೂರು ಮಂಜುನಾಥ್, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ಹಾಗೂ ಇತರರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು  ವರ್ಷ ದಾಂಪತ್ಯ ಜೀವನವನ್ನು ಪೂರೈಸಿದ ಹಿರಿಯ ದಂಪತಿಗಳನ್ನು ಸನ್ಮಾನಿಸಿದ್ದು ವಿಶೇಷ.


    ಪರಮಪೂಜ್ಯ ಜಗದ್ಗುರು  ಶ್ರೀ ಶ್ರೀಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಗಳವರ  ದಿವ್ಯ ಸಾನಿಧ್ಯದಲ್ಲಿ ಶ್ರೀ ಆದಿಚುಂಚನಗಿರಿ ಮಠದಲ್ಲಿ ಇಂದು ಇಡೀ ಕಾರ್ಯಕ್ರಮದ ಜೊತೆ ಬೆಳಗ್ಗೆಯಿಂದ ನಾದೋಪಾಸನೆ ಕಾರ್ಯಕ್ರಮ ನಡೆಸಲಾಗುವುದು. ಬೆಳಗ್ಗೆ ೯:೦೦ ರಿಂದ ರಾತ್ರಿ ೮ ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ವಿದ್ವಾಂಸರು, ಪ್ರಖ್ಯಾತ ಗಾಯಕರು ಸಂಗೀತ ಸುಧೆ ನೀಡಲಿದ್ದಾರೆ,  ಮಂಗಳವಾದ್ಯ ವಿದ್ವಾನ್ ಮಣಿ ಮತ್ತು ತಂಡದವರಿಂದ, ವೇದ ಪಾರಾಯಣ ಹಾಗೂ ಭಜನೆ ಬೆಂಗಳೂರಿನ ಶ್ರೀ ಆದಿಚುಂಚನಗಿರಿ ಶಾಖಾಮಠ ನಾರಾಯಣಧಾಮ ಮಕ್ಕಳಿಂದ ನಡೆಯುವುದು, ಶ್ರೀ  ಮಠ ವಿಶೇಷವಾಗಿ ಶಿವಮೊಗ್ಗದ ಕುಮಾರಿ ಮಹತಿ ಭಟ್, ಶ್ರೀಮತಿ ರೇಖಾ ಸುಬ್ರಹ್ಮಣ್ಯಂ, ಶ್ರೇಯಸ್, ನಿಖಿಲ್ ಕುಮಾರ್,  ವಿದ್ವಾನ್ ಶ್ರೀ ಹೊಸಹಳ್ಳಿ,ಪಂಡಿತ್ ಹುಮಾಯೂನ್ ಹರ್ಲಾಪುರ್, ವಿನಾಯಕ ಭಟ್, ರಾಜೀವ್, ಶ್ರೇಯಸ್, ಹೊಸಳ್ಳಿ ಕೆ ವೆಂಕಟರಾವ್, ಶಿವರಾಜಪ್ಪ ಅವರ ಹಾರ್ಮೋನಿಯಂ ಸೇರಿದಂತೆ ಗಣ್ಯರ ಭಜನೆ, ವೇದಿಕೆ ಕಾರ್ಯಕ್ರಮ, ಸಂಗೀತ ಸುಧೆ ಕಾರ್ಯಕ್ರಮ ನಡೆಯಲಿದೆ.
– ಶ್ರೀ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ  ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ

Exit mobile version