Site icon TUNGATARANGA

ಮಾಂಗಲ್ಯವನ್ನು ಮಧ್ಯ ತಂದು ಮತ ಕೇಳುವ ಮಟ್ಟಕ್ಕೆ ಪ್ರಧಾನಿ ಹೋಗಿರುವುದು ಅತ್ಯಂತ ಅಪಾಯಕಾರಿ: ಸಚಿವ ಮಧುಬಂಗಾರಪ್ಪ

ಶಿವಮೊಗ್ಗ,ಏ.23: ಮಾಂಗಲ್ಯವನ್ನು ಮಧ್ಯ ತಂದು ಮತ ಕೇಳುವ ಮಟ್ಟಕ್ಕೆ ಪ್ರಧಾನಿ ಹೋಗಿರುವುದು ಅತ್ಯಂತ ಅಪಾಯಕಾರಿ ಮತ್ತು ಕೀಳು ಮಟ್ಟದ ರಾಜಕಾರಣ ಎಂದು ಸಚಿವ ಮಧುಬಂಗಾರಪ್ಪ ಟೀಕಿಸಿದ್ದಾರೆ.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮಹಿಳೆಯರಿಗೆ ಗೌರವ ಕೊಡುತ್ತದೆ ಎಂಬ ಮಾತು ಸುಳ್ಳಾಗಿದೆ. ಪ್ರಧಾನಿ ಮೋದಿಯಂತವರು ನಾನು ಈ ದೇಶದ ಪ್ರಧಾನಿ ಎಂಬುವುದನ್ನು ಮರೆತು ಮಹಿಳೆಯರನ್ನು ಮಧ್ಯ ತಂದು ಮಾಂಗಲ್ಯದ ವಿಷಯವನ್ನು ಮಾತನಾಡಿ ಮತ ಕೇಳುತ್ತಿರುವುದನ್ನು ಇಡೀ ದೇಶ ನೋಡುತ್ತದೆ. ತಾಳಿ ಎನ್ನುವುದು ತುಂಬ ಪವಿತ್ರವಾದದ್ದು ತಾಳ್ಮೆ ಇಲ್ಲದೆ ಅವರು ಮಾತನಾಡಿರುವುದು ಖಂಡನೀಯ. ಅವರು ಅವರ ಇತಿಹಾಸವನ್ನೇ ತೆಗೆದುಕೊಳ್ಳಲಿ ಎಂದರು.

ಜಾತಿ, ಧರ್ಮ, ರಾಮ, ಹಣ ಮುಂತಾದ ಆಟಗಳೆಲ್ಲ ಈಗ ಮುಗಿದ ಅಧ್ಯಾಯ ಬಿಜೆಪಿ ಆಡಳಿತದಲ್ಲಿಯೇ ಹೆಣ್ಣುಮಕ್ಕಳಮೇಲೆ ಅತ್ಯಾಚಾರ ಹೆಚ್ಚಾಗಿರುವುದನ್ನು ಅಂಕಿ ಅಂಶಗಳೇ ಹೇಳುತ್ತಿವೆ. ಅದರಲ್ಲೂ ಗುಜರಾತ್ ಮೊದಲ ಸ್ಥಾನದಲ್ಲಿದೆ. ಎಲ್ಲಾ ಸರ್ಕಾರ ಇರುವಾಗಲೂ ಅಪರಾಧ ಚಟುವಟಿಕೆಗಳು ಇದ್ದೇ ಇದೆ. ರಾಜ್ಯದಲ್ಲೂ ಕೂಡ ಬಿಜೆಪಿ ಸರ್ಕಾರವಿದ್ದಾಗ ಹೆಚ್ಚಿನ ಅಪರಾಧಗಳು ಆಗಿವೆ. ನಮ್ಮ ಸರ್ಕಾರ ಬಂದ ನಂತರ ನಾವು ಕಾನೂನನ್ನು ಬಿಗಿಯಾಗಿ ತೆಗೆದುಕೊಂಡಿದ್ದೇವೆ ಎಂದರು.

ಬರ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದ್ದನ್ನು ಎತ್ತಿಹಿಡಿದಿದೆ.ನಮಗೆ ಬರಬೇಕಾದ ಹಣವನ್ನು ಅವರು ಕೊಡಲಿಲ್ಲ. ಕರ್ನಾಟಕದ ಯಾವ ಎಂಪಿಗಳು ಬರದ ಬಗ್ಗೆ ಟಸ್‍ಪುಸ್ ಎನ್ನಲಿಲ್ಲ. ಈಗ ಸುಪ್ರೀಂ ಕೋರ್ಟ್ ಹೇಳಿದ ಮೇಲೆ ತೆಪ್ಪಗಾಗಿದ್ದರೆ ಎಂದರು.

ಕಾಂಗ್ರೆಸ್ ಶಿವಮೊಗ್ಗ ಜಿಲ್ಲೆಯಲ್ಲಿ ತನ್ನ ಪ್ರಚಾರವನ್ನು ಚುರುಕುಗೊಳಿಸಿದೆ. ಗೀತಾಶಿವರಾಜ್‍ಕುಮಾರ್ ಅವರಿಗೆ ಕ್ರಮಸಂಖ್ಯೆ 1ಸಿಕ್ಕಿದೆ.ಈಗಾಗಲೇ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ನಾವು ಇದುವರೆಗೂ 3.5ಲಕ್ಷ ಮತದಾರರನ್ನು ತಲುಪಿದ್ದೇವೆ. ಮುಂದಿನ ದಿನಗಳಲ್ಲಿ ರೋಡ್ ಶೋ, ಸಭೆ ಹೀಗೆ ವಿವಿಧ ರೀತಿಯಲ್ಲಿ ಇನ್ನೂ 4 ಲಕ್ಷ ಜನರ ತಲುಪುತ್ತೇವೆ. ಕಾರ್ಯಕರ್ತರು ನೀಟಾಗಿ ಕೆಲಸ ಮಾಡುತ್ತಿದ್ದಾರೆ. ಬೈಂದೂರು ಭಾಗದಲ್ಲಿ ರೋಡ್ ಶೋಗಳು ಕೂಡ ನಡೆಯಲಿವೆ ಎಂದರು.

ಗೀತಕ್ಕನ ಪರ ಪ್ರಚಾರಕ್ಕೆ ಕೆಲವು ಸಿನಿಮಾ ತಾರೆಯರು ಬರುವ ನಿರೀಕ್ಷೆ ಇದೆ. ದುನಿಯಾ ವಿಜಯ್, ಡಾಲಿ ಧನಂಜಯ ಸೇರಿದಂತೆ ಅನೇಕರು ಬರುತ್ತಿದ್ದಾರೆ. ನಾವು ಯಾರನ್ನು ಅದರಲ್ಲೂ ಶಿವರಾಜ್‍ಕುಮಾರ್ ಯಾವ ತಾರೆಯರನ್ನು ಒತ್ತಾಯ ಮಾಡಿ ಕರಿಯುವುದಿಲ್ಲ ಎಂದರು.

ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ ಮಧು ಬಂಗಾರಪ್ಪ ಗೀತಾಕ್ಕನ ಬಗ್ಗೆ ಒಂದು ಕಡೆ ಸಹೋದರಿ ಎನ್ನುತ್ತಾರೆ. ಮತ್ತೊಂದು ಕಡೆ ಕೀಳಾಗಿ ಮಾತನಾಡುತ್ತಾರೆ. ಡಮ್ಮಿ ಡಮ್ಮಿ ಎನ್ನುತ್ತಾರೆ. ಈ ವಯಸ್ಸಿಗೆ ಈಶ್ವರಪ್ಪನವರು ಈ ರೀತಿ ಮಾತನಾಡುವುದು ಸರಿಯಲ್ಲ . ಅವರಿಗೆ ರಾಜಕಾರಣ ಮಾಡುವ ಯೋಗ್ಯತೆಯೂ ಇಲ್ಲ ಅದನ್ನು ನಿಲ್ಲಿಸಬೇಕು ಎಂದರು.

ಒಂದು ಹಂತದಲ್ಲಿ ಈಶ್ವರಪ್ಪನವರ ಅವರಿಗೆ ಗಂಡಸುತನ ವಿದ್ದರೆ ತನ್ನ ಮಗನಿಗೆ ಟಿಕೇಟ್ ಕೊಡಿಸಬಹುದಿತ್ತು. ಎಂದ ಅವರು ಈಶ್ವರಪ್ಪನವರು ನಾಲಿಗೆಗೆ ಬಣ್ಣ ಹಂಚಿಕೊಂಡೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಅವರ ಗಂಡಸುತನದ ಭಾಷೆಯ ಬಗ್ಗೆ ಒಬ್ಬ ಶಿಕ್ಷಣ ಸಚಿವರಾಗಿ ನೀವು ಹೀಗೆ ಮಾತನಾಡಬಾರದಲ್ಲವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಇದನ್ನು ವೈಯುಕ್ತಿಕವಾಗಿ ಹೇಳುತ್ತೇವೆ. ಶಿಕ್ಷಣ ಸಚಿವಗಿಂತ ಮೊದಲು ನಾನು ಗೀತಕ್ಕನ ಸಹೋದರ, ನನ್ನ ಸಹೋದರಿಗೆ ಯಾರಾದರೂ ಮಾತನಾಡಿದರೆ, ಹೀಗೆ ಹೇಳಬೇಕಾಗುತ್ತದೆ ಎಂದರು.

ಕಾಂಗ್ರೆಸ್ ತನ್ನ ಗ್ಯಾರಂಟಿ ಕಾರ್ಡ್‍ಗಳನ್ನು ನೆನ್ನೆಯಿಂದಲೇ ಮನೆಮನೆಗೆ ತಲುಪಿಸುತ್ತಿದೆ. ಇನ್ನೆರಡು ದಿನಗಳಲ್ಲಿ ಪ್ರತಿ ಮನಗಳಲ್ಲೂ ಗ್ಯಾರಂಟಿ ಕಾರ್ಡ್ ಇರುತ್ತದೆ. ಎಲ್ಲರೂ ಒಟ್ಟಾಗಿ ಪ್ರಚಾರ ಮಾಡುತ್ತಿದ್ದೇವೆ ಯಾರೂ ಏನೆ ಹೇಳಿದರು, ಏನೇ ಮಾಡಿದರು ಗೀತಾ ಶಿವರಾಜ್‍ಕುಮಾರ್‍ರವರನ್ನು ಈ ಚುನಾವಣೆಯಲ್ಲಿ ಸೋಲಿಸಲು ಅಸಾಧ್ಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಚಂದ್ರಭೂಪಾಲ್, ಜಿ.ಡಿ.ಮಂಜುನಾಥ್, , ಶಿವಾನಂದ್, ಏಸುದಾಸ್, ಮುಕ್ತಿಯಾರ್, ಚಿನ್ನಪ್ಪ, ಎಸ್.ಟಿ. ಚಂದ್ರಶೇಖರ್, ಉಮೇಶ್, ಶಿವಣ್ಣ ಸೇರಿದಂತೆ ಹಲವರಿದ್ದರು.

Exit mobile version