ಶಿವಮೊಗ್ಗ:- ಈ ಬಾರಿ ಬರ ಪರಿಸ್ಥಿತಿ ತೀವ್ರವಾಗಿದ್ದರೂ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ನಗರಗಳಲ್ಲಿ ಆದಂತೆ ಕುಡಿಯುವ ನೀರಿನ ಸಮಸ್ಯೆ ಶಿವಮೊಗ್ಗದಲ್ಲಿ ಆಗದಿರಲು ಗಾಜನೂರು ಡ್ಯಾಂ ನಿರ್ಮಿಸಿರುವುದೇ ಕಾರಣ ಎಂದು ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೦೩ ರಲ್ಲಿ ನಾನು ಶಿವಮೊಗ್ಗ ಕ್ಷೇತ್ರದ ಶಾಸಕನಾಗಿದ್ದಾಗ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಹಳೆಯ ಡ್ಯಾಂ ಮುಂಭಾಗದಲ್ಲಿ ನೂತನವಾಗಿ ಗಾಜನೂರು ಡ್ಯಾಂ ನಿರ್ಮಿಸಲಾಯಿತು. ಇದರಿಂದ ಮಳೆಗಾಲದಲ್ಲಿ ೫೮೮ಮೀ. ನೀರು ಸಂಗ್ರಹವಾಗುತ್ತಿದೆ. ೨ ವರ್ಷ ಸರಿಯಾಗಿ ಮಳೆಯಾಗದಿದ್ದರೂ ಈ ನೀರಿನಿಂದ ಶಿವಮೊಗ್ಗದ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಪ್ರಸ್ತುತ ಡ್ಯಾಂನಲ್ಲಿ ೨.೨೨೮ ಟಿಎಂಸಿ ನೀರಿನ ಸಂಗ್ರಹವಿದೆ. ನೀರಾವರಿ ಹಾಗೂ ವಿದ್ಯುತ್ ಉತ್ಪಾದನಾ ಕೆಲಸವೂ ಈ ಡ್ಯಾಂ ಮೂಲಕ ಆಗುತ್ತಿದೆ. ಶಿವಮೊಗ್ಗ ಕ್ಕೆ ಶಾಶ್ವತ ಯೋಜನೆ ಇದಾಗಿದೆ ಎಂದರು.
ಇಂತಹ ಶಾಶ್ವತ ಯೋಜನೆಗಳನ್ನು ರಾಜಕಾರಣಿಗಳು ಕೊಡಬೇಕು. ಗಾಜನೂರು ಡ್ಯಾಂ ಬಳಿ ಕೆಆರ್‌ಎಸ್ ಮಾದರಿ ಉದ್ಯಾನವನ ನಿರ್ಮಿಸಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕು ಒತ್ತಾಯಿಸಿದರು.
ಇಂದಿನ ಬರ ಪರಿಸ್ಥಿತಿಯಲ್ಲಿ ಜನರು ಹಿತ ಮಿತವಾಗಿ ನೀರು ಬಳಸಬೇಕು, ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದರು.
ರಾಜ್ಯ ಪ್ರವಾಸ: ಈ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಕಾಂಗ್ರೆಸ್‌ನ ಆಪ್ತರ ಪರವಾಗಿ ಪ್ರಚಾರ ಮಾಡಿದ್ದೇನೆ. ಎಲ್ಲೆಡೆ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದೆ ಎಂದರು.