Site icon TUNGATARANGA

ಭದ್ರಾ ಅಣೆಕಟ್ಟಿನಿಂದ ಗದಗ ಬೆಟಗೇರಿ ಭಾಗಕ್ಕೆ ಯಾವುದೇ ಕಾರಣಕ್ಕೂ ನೀರು ಬಿಡದಿರಿ: ರೈತಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ

ಶಿವಮೊಗ್ಗ,ಏ.20: ಭದ್ರಾ ಅಣೆಕಟ್ಟಿನಿಂದ ಗದಗ ಬೆಟಗೇರಿ ಭಾಗಕ್ಕೆ 2 ಟಿ.ಎಂ.ಸಿ. ನೀರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈಗಾಗಲೇ ತೀರ್ಮಾನವಾದಂತೆ ಅಚ್ಚುಕಟ್ಟು ಪ್ರದೇಶದ ಒಂದು ಲಕ್ಷಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿರುವ ತೋಟಗಳಿಗೆ ಮತ್ತು ಕುಡಿಯುವ ನೀರಿಗೆ ಹಂಚಿಕೆ ಮಾಡಿ, ಈಗಾಗಲೇ ಪ್ರಕಟಣೆ ಮಾಡಲಾಗಿದೆ. ಅದರಂತೆ ನೀರನ್ನು ಕೂಡ ಬಿಡಲಾಗುತ್ತಿದೆ. ಈಗ ಭದ್ರಾ ಅಣೆಕಟ್ಟೆಯಲ್ಲಿ 124.8ಅಡಿ ಇದೆ. ಇದರಲ್ಲಿ ಡೆಡ್ ಸ್ಟೋರೆಜ್ 13 ಟಿ.ಎಂ.ಎಸ್ಸಿ ಇದ್ದು, ಸದ್ಯಕ್ಕೆ 4.5 ಟಿ.ಎಂ.ಸಿ.ನೀರನ್ನು ಮಾತ್ರ ನಾಲ ಮುಖಂತರ ಹರಿಸಬಹುದಾಗಿದೆ. ಇದು 10 ದಿನಗಳಿಗೆ ಸಕಾಗುತ್ತದೆ ಎಂದರು.

ಏ.23ರಿಂದ ಮೇ 6ರವರೆಗೆ ನೀರು ಹರಿಸಬೇಕಾಗುತ್ತದೆ. ಆದರೆ ಹೀಗೆ ನೀರು ಹರಿಸಲು 4 ದಿನದ ಕೊರತೆ ಉಂಟಾಗುತ್ತದೆ. ಈಗಾಗಲೇ ನದಿ ಮೂಲಕ ಕುಡಿಯುವ ನೀರಿಗಾಗಿ ಒಂದು ಟಿ.ಎಂ.ಸಿ. ನೀರನ್ನು ಹೆಚ್ಚಿಗೆ ಬಿಡಲಾಗಿದೆ. ಮತ್ತು ಹೆಚ್ಚಿಗೆ ಬಿಡಲು ನೀರಿನ ಸಂಗ್ರಹ ಇಲ್ಲವಾಗಿದೆ ಎಂದು ಮಾಹಿತಿ ನೀಡಿದರು.

ಆದರೆ ಈಗ ಗದಗ ಬೆಟಗೇರಿ ನಗರಕ್ಕೆ 2 ಟಿ.ಎಂ.ಸಿ. ಕುಡಿಯುವ ನೀರನ್ನು ಹರಿಸಬೇಕೆಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ. ಪಾಟೇಲರು ಪತ್ರ ಬರೆದಿರುವುದು ಆಶ್ಚರ್ಯವಾಗಿದೆ. ಈ ನೀರು ಕುಡಿಯುವುದಕ್ಕೆ ಅಲ್ಲ. ನದಿ ಪಾತ್ರದ ತೋಟಗಳಿಗೆ ಎಂದು ಸ್ಪಷ್ಟವಾಗಿದೆ. ಈಗ ಸರ್ಕಾರ ಕುಡಿಯುವ ನೀರಿನ ನೆಪದಲ್ಲಿ 2 ಟಿ.ಎಂ.ಸಿ. ನೀರು ಹರಿಸಿದರೆ ಶಿವಮೊಗ್ಗ, ದಾವಣಗೆರೆ ಹಾವೇರಿ ಜಿಲ್ಲೆಗಳ ರೈತರ ಲಕ್ಷಾಂತರ ಅಡಕೆ ಮತ್ತು ತೆಂಗಿನ ಮರಗಳನ್ನು ಕಡಿದು ಹಾಕಬೇಕಾಗುತ್ತದೆ. ಆದ್ದರಿಂದ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡುವ ತೀರ್ಮಾನವನ್ನು ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಕೆ.ರಾಘವೇಂದ್ರ , ಪಿ.ಶೇಖರಪ್ಪ, ನಂಜುಂಡಪ್ಪ, ಸಿ.ಚಂದ್ರಪ್ಪ, ಪಂಚಾಕ್ಷರಿ ಇದ್ದರು

Exit mobile version