Site icon TUNGATARANGA

ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತರ ಅನುಕೂಲಕ್ಕೆ ಸಹಾಯವಾಣಿ ಕಾರ್ಯಾರಂಭ : ಪವಿತ್ರಾ ರಾಮಯ್ಯ


ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ಎಲ್ಲಾ ಅರ್ಹ ರೈತರ ಹೊಲಗಳಿಗೆ ಅಗತ್ಯವಿರುವಷ್ಟು ನೀರನ್ನು ಸಕಾಲದಲ್ಲಿ ಒದಗಿಸಲು ಸಾಧ್ಯವಿರುವ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಹೇಳಿದರು.
ಅವರು ಇಂದು ಬಿ.ಆರ್.ಪ್ರಾಜೆಕ್ಟ್‌ನ ಕರ್ನಾಟಕ ನೀರಾವರಿ ನಿಗಮದ ಭದ್ರಾ ಯೋಜನಾ ವೃತ್ತ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಕಾಲುವೆಗಳಲ್ಲಿ ನೀರನ್ನು ಹರಿಸಿದಾಗ ಈ ಭಾಗದಲ್ಲಿ ಕಾರ್ಯನಿರ್ವಹಿಸುವ ಇಂಜಿನಿಯರುಗಳು ಒಂದೆಡೆಯಾದರೆ ಅಗತ್ಯಕ್ಕೆ ನೀರನ್ನು ನಿರೀಕ್ಷಿಸುತ್ತಿದ್ದ ರೈತರು ಮತ್ತೊಂದೆಡೆಯಾಗಿ, ರೈತರು ನೀರಿಗಾಗಿ ಹಪಹಪಿಸುತ್ತಿದ್ದರು. ಇದರಿಂದಾಗಿ ಅಗತ್ಯಕ್ಕೆ ತಕ್ಕಂತೆ ರೈತರ ಹೊಲಗಳಿಗೆ ನೀರು ಲಭ್ಯವಾಗುತ್ತಿರಲಿಲ್ಲ. ಈ ಸೂಕ್ಷ್ಮ ವಿಷಯವನ್ನು ಅರಿತು ರೈತರ ಅನುಕೂಲಕ್ಕಾಗಿ ಹಾಗೂ ತಮ್ಮ ಅಗತ್ಯತೆಗಳಿಗೆ ನಿಗಮದ ಇಂಜಿನಿಯರರನ್ನು ಸಂಪರ್ಕಿಸಿ, ಸಕಾಲಿಕವಾಗಿ ನೆರವು ಸಹಕಾರ ಪಡೆದುಕೊಳ್ಳಲು ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ ಎಂ
ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸುವ ಈ ಸಹಾಯವಾಣಿ ಕೇಂದ್ರಕ್ಕೆ ಬರುವ ಕರೆಗಳನ್ನು ಸ್ವೀಕರಿಸಿ, ಸಂಬಂಧಪಟ್ಟವರಿಗೆ ತಲುಪಿಸಲಾಗುವುದು. ರೈತರ ಕೋರಿಕೆಯಂತೆ ತ್ವರಿತಗತಿಯಲ್ಲಿ ರೈತರ ಅಹವಾಲುಗಳಿಗೆ ಪರಿಹಾರ ನೀಡುವಲ್ಲಿ ಈ ಸಹಾಯವಾಣಿ ಕೇಂದ್ರ ಸಹಕಾರಿಯಾಗಲಿದೆ ಎಂದರು.
ಅಲ್ಲದೇ ಕಾಲುವೆಗಳಲ್ಲಿ ಹೆಚ್ಚಾಗಿ ಹರಿಯುವ ನೀರನ್ನು ನಿಯಂತ್ರಿಸಲು, ವ್ಯರ್ಥವಾಗಿ ಹೋಗದಂತೆ ತಡೆಯಲು, ಅಚ್ಚುಕಟ್ಟು ಪ್ರದೇಶದ ಕೊನೆಯ ರೈತರ ಹೊಲಗಳಿಗೆ ನೀರು ಹರಿಸಲು ಈ ಸಹಾಯವಾಣಿ ಉಪಯುಕ್ತವಾಗಿರಲಿದೆ. ಈ ಕೇಂದ್ರದ ನಿರ್ವಹಣೆಗೆ ಸಿಬ್ಬಂಧಿಗಳನ್ನು ನಿಯೋಜಿಸಲಾಗುವುದು. ರೈತರು ತಮ್ಮ ಅಹವಾಲುಗಳನ್ನು ದೂರವಾಣಿ ಸಂಖ್ಯೆ 08282-256338 ಗೆ ಕರೆ ಮಾಡಿ, ದಾಖಲಿಸಬಹುದಾಗಿದೆ ಎಂದರು.
ಕೆಲವು ಸಂದರ್ಭಗಳಲ್ಲಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರು ಇದ್ದಾಗ್ಯೂ ಮಲೆಬೆನ್ನೂರು ಭಾಗದ ರೈತರಿಗೆ ನೀರು ಲಭ್ಯವಾಗದೆ ತೀವ್ರ ತರಹದ ಅಡಚಣೆ ಉಂಟಾಗುತ್ತಿತ್ತು. ಇದು ಕಚೇರಿಯ ನಿರ್ವಹಣೆಯ ಲೋಪವೆಂದೇ ಭಾವಿಸಿದ್ದು, ರೈತರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಲಾಗುವುದು. ಪ್ರಸ್ತುತ ರೈತರು ಮತ್ತು ಇಂಜಿನಿಯರುಗಳ ನಡುವೆ ಸಂಪರ್ಕ ಸೇತುವೆಯಾಗಿ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ ಎಂದರು.
ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿ ಸಿಬ್ಬಂಧಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದ ಅವರು, ನಿಗಮದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ-ಸಿಬ್ಬಂದಿಗಳು ರೈತರ ಅನುಕೂಲಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವಂತೆ ಸೂಚಿಸಿದರು.
ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗಾಗಿ ಬಿಡುಗಡೆಯಾದ ಅನುದಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಕ್ರಿಯಾ ಯೋಜನೆ ಅನುಮೋದನೆಗೊಂಡ ನಂತರ ತ್ವರಿತಗತಿಯಲ್ಲಿ ಕಾರ್ಯಾರಂಭ ಮಾಡಲಾಗುವುದು ಎಂದ ಅವರು, ಅಚ್ಚುಕಟ್ಟು ವ್ಯಾಪ್ತಿಯ ಕೆರೆ, ಕಟ್ಟೆ ಕಾಲುವೆಗಳಲ್ಲಿ ತುಂಬಿರುವ ಹೂಳನ್ನು ತೆಗೆದು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವಂತೆ ರೈತರಿಗೆ ಮಾಡಿದ ಮನವಿಯ ಮೇರೆಗೆ ಅಪಾರ ಸಂಖ್ಯೆಯ ರೈತರು ನೂರಾರು ಕಿ.ಮೀ. ದೂರದವರೆಗೆ ಕಾಲುವೆಗಳಲ್ಲಿನ ಹೂಳನ್ನು ತೆಗೆದು ಸ್ವಚ್ಚ ಮಾಡಿಕೊಂಡಿರುವುದು ಹರ್ಷದ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು, ಭದ್ರಾ ನೀರಾವರಿ ನಿಗಮ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಚಂದ್ರಹಾಸ ಮುಂತಾದವರು ಉಪಸ್ಥಿತರಿದ್ದರು.

Exit mobile version