ಹೊಸನಗರ: 5 ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಗೆ ತಾವು ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯುತ್ತಿದ್ದೀರಿ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಮತಗಳು ತಮಗೆ ಬಂದಿದೆ. ಆ ಎರಡು ಲಕ್ಷ ಜನರಿಗೆ ನೀವು ಕಷ್ಟ-ಸುಖಗಳಿಗೆ ಬಂದು ಸ್ಪಂದಿಸದೇ ಈ ಬಾರಿ ನನಗೆ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಎಂದು ಯಾವ ರೀತಿ ಮತದಾರರ ಬಳಿ ಹೋಗಿ ಮತ ಕೇಳುತ್ತೀರಿ ? ಕೇಳುವುದಕ್ಕೆ ನಿಮಗೆ ಯಾವ ನೈತಿಕ ಹಕ್ಕಿದೆ ? ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್ ಪ್ರಶ್ನಿಸಿದ್ದಾರೆ.
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, 10 ವರ್ಷಗಳಿಂದ ಸಂಸದರಾಗಿ ಆಯ್ಕೆಯಾಗಿರುವ ಬಿ.ವೈ ರಾಘವೇಂದ್ರರವರು ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜಿಲ್ಲೆಯ ಮನೆ ಮಗನಾಗಿದ್ದಾರೆ ಇವರ ಅಭಿವೃದ್ಧಿ ಕೆಲಸಗಳೇ ಈ ಬಾರಿಯ ಚುನಾವಣೆ ಅವರಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಕೇಂದ್ರ ಸರ್ಕಾರ ಎಲ್ಲ ರೈತರಿಗೆ 6 ಸಾವಿರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹಣ ನೀಡುತ್ತಿದ್ದು ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ರೈತರಿಗೆ 4 ಸಾವಿರ ಒಟ್ಟು ಎಲ್ಲ ರೈತರ ಖಾತೆಗೆ 10 ಸಾವಿರ ರೂ. ನೀಡುತ್ತಾ ಬಂದಿತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ರೈತರಿಗೆ ನೀಡುತ್ತಿದ್ದ 4 ಸಾವಿರ ರೂ. ಕಡಿತಗೊಳಿಸಿ ರೈತ ವಿರೋಧ ಕಾಂಗ್ರೇಸ್ ಸರ್ಕಾರವಾಗಿದೆ ಎಂದರು.
ಗ್ಯಾರಂಟಿ ಕೈಕೊಡಲಿದೆ:
ರಾಜ್ಯ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಚುನಾವಣೆಯಲ್ಲಿ ಹೇಳುವುದು ಬಿಟ್ಟು ಗ್ಯಾರಂಟಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ ಈ ಬಾರಿ ಗ್ಯಾರಂಟಿ ಯೋಜನೆ ಕೈಕೊಡಲಿದೆ. ಹಿಂದೆ ಮತ ಹಾಕಿರುವ ಮತದಾರರು ಸಾಕಪ್ಪ ಇಂತವರ ಸಹವಾಸ ಬೇಡ ಎಂದು ಮಾತನಾಡುತ್ತಿದ್ದಾರೆ. ಮನೆಗಳಿಗೆ ಕರೆಂಟ್ ಫ್ರೀ ಎಂದು ಕಮರ್ಶಿಯಲ್ ಕರೆಂಟ್ ಬಿಲ್ ಗಗನಕ್ಕೇರಿದೆ. ಛಾಪ ಕಾಗದದ ಬೆಲೆ 20 ರೂಪಾಯಿಯಿಂದ 100 ರಿಂದ 500 ನೂರುಗಳಾಗಿವೆ. ಇವರು ನೀಡುತ್ತಿರುವುದು ಜನಪರ ಗ್ಯಾರಂಟಿಯೇ? ಎಂದು ಪ್ರಶ್ನಿಸಿದರು.
ಚುನಾವಣೆ ಬಂದಾಗ ಜಾತಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಜಾತಿ-ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಎಲ್ಲರೂ ತಮ್ಮ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಿ ಮತ ಪಡೆಯಲಿ ಎಂದರು.
ಬಿಜೆಪಿ ಹಿರಿಯ ಮುಖಂಡ ಎನ್.ಆರ್. ದೇವಾನಂದ್ ಮಾತನಾಡಿ, ಕೇಂದ್ರದಲ್ಲಿ 65 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಮಾಡದೇ ಆಡಳಿತ ನಡೆಸಿದ್ದು ನಮ್ಮ ಬಿಜೆಪಿಯ ನರೇಂದ್ರ ಮೋದಿಯವರು 10 ವರ್ಷಗಳಲ್ಲಿ ದೇಶದ ಮೂಲೆ-ಮೂಲೆಗಳಲ್ಲಿಯೂ ರಸ್ತೆ ನಿರ್ಮಿಸಲಾಗಿದೆ. ಜಲ ಜೀವನ್ ಯೋಜನೆಯಡಿಯಲ್ಲಿ ಮನೆ-ಮನೆಗಳಿಗೆ ನೀರು ಕೊಡುವ ಯೋಜನೆ ಕೇಂದ್ರ ಸರ್ಕಾರ ಮಾಡುತ್ತಿದ್ದೂ ದೇಶದ ಉದ್ದಗಲಕ್ಕೂ ಜನ ಸಂಪರ್ಕ ಸೇತುವೆಗಳನ್ನು ನಿರ್ಮಿಸಲಾಗಿದೆ. ದೇಶ ಸಾಕಷ್ಟು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದೂ ರಾಷ್ಟ್ರ ಅಂತರರಾಷ್ಟ್ರೀಯ ದೇಶಗಳು ಮೋದಿಯನ್ನು ವಿಶ್ವ ನಾಯಕರೆಂದು ಕರೆಯುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮೋದಿಯನ್ನು ತೆಗಳುವುದು ಸರೀಯೇ? ಎಂದು ಪ್ರಶ್ನಿಸಿ, ಮೋದಿಯನ್ನು ದೇಶದ ಪ್ರಧಾನಿಯಾಗಿ ಮುಂದಿನ ಚುನಾವಣೆಯಲ್ಲಿ ಕಾಣುವುದು ನಮ್ಮ ಕನಸ್ಸಾಗಿದ್ದು ಮೋದಿ ಪ್ರಧಾನಿಯಾಗಬೇಕಾದರೆ ನೀವೆಲ್ಲರೂ ಬಿ.ವೈ. ರಾಘವೇಂದ್ರರವರನ್ನು ಗೆಲ್ಲಿಸಿ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಮಾತನಾಡಿ, ಭಾರತ ದೇಶ ಹಿಂದು ರಾಷ್ಟ್ರ ನಮ್ಮ ಹಿಂದು ರಾಷ್ಟ್ರದಲ್ಲಿ ಹಿಂದುಗಳ ಬಗ್ಗೆ ಹಿಂದುತ್ವದ ಬಗ್ಗೆ ಮಾತನಾಡುವುದು ತಪ್ಪೆ? ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ 500 ವರ್ಷ ರಾಮಮಂದಿರ ಕಟ್ಟಲೂ ಸಾಧ್ಯವಾಗದಿರುವುದನ್ನು ನಮ್ಮ ಪ್ರಧಾನಿ ಮೋದಿಯವರು ರಾಮಮಂದಿರ ನಿರ್ಮಿಸಿ ದೇಶಕ್ಕೆ ಮಾದರಿಯಾಗಿದ್ದಾರೆ ಇಂಥಹ ನಾಯಕರನ್ನು ಜನರು ಕೈ ಬಿಡದೇ ಬಿಜೆಪಿ ಪಕ್ಷವನ್ನು ನರೇಂದ್ರ ಮೋದಿಯವರನ್ನು ಎನ್‌ಡಿಎ ಪಕ್ಷವನ್ನು ಜಯಬೇರಿ ಗೊಳಿಸಿ ಹಿಂದು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖರಾಗಬೇಕೆಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯರಾದ ಟೌನ್ ಘಟಕದ ಅಧ್ಯಕ್ಷ ಶ್ರೀಪತಿರಾವ್, ಮಂಡಾನಿ ಮೋಹನ್, ನೇರಲೆ ರಮೇಶ್, ಕೋಣೆಮನೆ ಶಿವಕುಮಾರ್, ಧರ್ಮಪ್ಪ, ಓಂಕೇಶ್, ಸತೀಶ್, ಕಪಿಲ ಸುಬ್ರಹ್ಮಣ್ಯ, ಜಯನಗರ ಪ್ರಹ್ಲಾದ್, ಇಂದ್ರೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.