Site icon TUNGATARANGA

ಬಯಲು ರಂಗಮಂದಿರಕ್ಕೆ ಕಾಯಕಲ್ಪ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಭರವಸೆ/ಕಲಾವಿದರು ಒಕ್ಕೂಟದ ಶಿವಮೊಗ್ಗ ರಂಗಹಬ್ಬಕ್ಕೆ ಚಾಲನೆ

ಶಿವಮೊಗ್ಗ –
ಕುವೆಂಪು ರಂಗಮಂದಿರ ಹಿಂಭಾಗದ ಬಯಲು ರಂಗಮಂದಿರವನ್ನು ಕಾರ್ಯಕ್ರಮ ನಡೆಸಲು ಸಜ್ಜುಗೊಳಿಸಬೇಕಿದೆ. ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಬೇಕಾಗಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.


ಕಲಾವಿದರು ಒಕ್ಕೂಟವು ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಶಿವಮೊಗ್ಗ ರಂಗಹಬ್ಬ – ಮೂರು ದಿನಗಳ ಹೊಸ ನಾಟಕಗಳ ಉತ್ಸವವನ್ನು ಕುವೆಂಪು ರಂಗಮಂದಿರದಲ್ಲಿ ಮಾರ್ಚ್ 26ರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಬಯಲು ರಂಗಮಂದಿರ ಪೂರ್ಣಗೊಳಿಸಿ ಅದು ಎಲ್ಲರ ಬಳಕೆಗೆ ಸಿಗುವಂತಾಗಬೇಕು. ಶಿವಮೊಗ್ಗಕ್ಕೆ ಇದು ಅತ್ಯಂತ ಅಗತ್ಯವಾಗಿದೆ ಎಂದರು.


ಯಾವುದೇ ಕಾರ್ಯಕ್ರಮ ಸಂಘಟನೆ ಮಾಡುವುದು ಕಷ್ಟದ ಕೆಲಸ. ಅದನ್ನು ಕಲಾವಿದರು ಒಕ್ಕೂಟವು ಮಾಡುತ್ತಿದೆ. ಇದಕ್ಕೆ ಪ್ರೇಕ್ಷಕರ ಸ್ಪಂದನೆ ಬೇಕು. ನಾಟಕಗಳನ್ನು ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದ ಅವರು, ಶಿವಮೊಗ್ಗದಲ್ಲಿ ನಿರಂತರವಾಗಿ ಕಾರ್ಯಕ್ರಮ ನಡೆಸುತ್ತಿರುವ ಕಲಾವಿದರು ಒಕ್ಕೂಟದ ಕಾರ್ಯ ಶ್ಲಾಘನೀಯ ಎಂದರು.


ಒಕ್ಕೂಟದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ಅವರು ಮಾತನಾಡಿ, ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಆಯೋಜನೆ ಮಾಡಿರುವ ನಾಟಕೋತ್ಸವದಲ್ಲಿ ಮೂರು ದಿನಗಳ ಕಾಲ ಶಿವಮೊಗ್ಗದ ರಂಗತಂಡಗಳು ನಾಟಕ ಪ್ರದರ್ಶಿಸುತ್ತಿವೆ. ಎಲ್ಲಾ ರಂಗತಂಡಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.


ಕಲಾವಿದರು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಅವರು ಮಾತನಾಡಿ, ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಶಿವಮೊಗ್ಗದ 10 ತಂಡಗಳು ಹೊಸ ನಾಟಕಗಳು ಪ್ರದರ್ಶಿಸುವಂತಾಗಬೇಕು. ಈ ದಿಸೆಯಲ್ಲಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಈ ಮೂಲಕ ಕನಿಷ್ಠ 500 ಕಲಾವಿದರು, ತಂತ್ರಜ್ಞರು ರಂಗಭೂಮಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ರಂಗಚಳವಳಿಯನ್ನು ಮುಂದುವರಿಸುವುದು ನಮ್ಮ ಉದ್ದೇಶ ಎಂದರು.


ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿಗಳಾದ ಸುರೇಶ್ ಎಸ್.ಎಚ್., ಮನು ಟಿ., ಕಲಾವಿದರಾದ ಶ್ರೀಕಂಠಪ್ರಸಾದ್ ಇದ್ದರು. ಖಜಾಂಚಿ ಗಣೇಶ್ ಕೆಂಚನಾಲ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ ಸಹ್ಯಾದ್ರಿ ಕಲಾ ತಂಡದ ಕಲಾವಿದರು ಡಾ. ಲವ ಜಿ.ಆರ್. ಅವರ ನಿರ್ದೇಶನದಲ್ಲಿ ನಾ. ಶ್ರೀನಿವಾಸ್ ಅವರು ರಚಿಸಿದ ಗಾಂಧಿ ಕನ್ನಡಕ ನಾಟಕ ಪ್ರದರ್ಶಿಸಿದರು.

Exit mobile version