Site icon TUNGATARANGA

ಭಾಗ್ಯ, ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ ; ಸಂಸದ ಬಿ.ವೈ ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಬದಲಾಗಿ ದೇಶದ ಹಾಗೂ ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಹಿತದೃಷ್ಠಿಯಿಂದ ನಡೆಯುವ ಚುನಾವಣೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇಲ್ಲಿನ ಬಸ್‌ ನಿಲ್ದಾಣ ಸಮೀಪ ಸೋಮವಾರ ಪಕ್ಷದ ನೂತನ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿ, ಬಿಜೆಪಿ ದೇಶದ ಎಲ್ಲಾ ವರ್ಗದವರನ್ನೂ ಒಳಗೊಂಡಿದೆ. ಎಲ್ಲರಿಗೂ ಅವಕಾಶ ದೊರೆಯುವಂತೆ ಮಾಡಿದೆ. ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಿದೆ. ಕೇಂದ್ರದ ಹಿಂದಿನ ಎರಡು ಅವಧಿಯ ಸಾಧನೆ ಹಾಗೂ ತಾವು ಇಲ್ಲಿಯ ತನಕ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸವನ್ನು ಜನರಿಗೆ ಮನದಟ್ಟು ಮಾಡುವ ಕೆಲಸ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಾದ ಜಲಜೀವನ್ ಮಿಷನ್, ಅನ್ನಭಾಗ್ಯದಂತಹ ಯೋಜನೆಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ತಮ್ಮ ಕೊಡುಗೆ ಎಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಅವರು ಆರೋಪಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿರುವುದು ಇನ್ನಷ್ಟು ಬಲ ನೀಡಿದೆ. ಕಾರ್ಯಕರ್ತರು ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಬೇಕು ಎಂದು ಕರೆ ನೀಡಿದರು.

ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿದರು. ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ, ಜೆಡಿಎಸ್‌ ತಾಲೂಕು ಅಧ್ಯಕ್ಷ ವರ್ತೇಶ್, ಪ್ರಮುಖರಾದ ದೇವಾನಂದ್, ಗಾಯತ್ರಿ ಮಲ್ಲಪ್ಪ, ಮಂಗಳಾ, ಮಂಡಾನಿ ಮೋಹನ್, ಗುರುರಾಜ್, ಕೋಣೆಮನೆ ಶಿವಕುಮಾರ್, ಟೌನ್ ಘಟಕದ ಅಧ್ಯಕ್ಷ ಶ್ರೀಪತಿರಾವ್,  ಮತ್ತಿತರರು ಇದ್ದರು.

______________________

ಯಶಸ್ವಿ ಟೇಕ್‌ಆಫ್…

ಪ್ರಧಾನಿ ಮೋದಿ ಅವರು ಈಗಾಗಲೇ ಶಿವಮೊಗ್ಗಕ್ಕೆ ಆಗಮಿಸಿ ತಮ್ಮ ಪರವಾಗಿ ಪ್ರಚಾರ ನಡೆಸಿದ್ದಾರೆ. ಚುನಾವಣೆಯ ಈ ಯಾನ ಉತ್ತಮ ಟೇಕ್‌ಆಫ್ ಪಡೆದುಕೊಂಡಿದೆ. ಸುರಕ್ಷಿತ ಲ್ಯಾಂಡಿಂಗ್‌ ಆಗುವಂತೆ ಮಾಡುವುದು ಕಾರ್ಯಕರ್ತರ ಹೊಣೆಯಾಗಿದೆ. 

– ಬಿ.ವೈ.ರಾಘವೇಂದ್ರ, ಸಂಸದ  

Exit mobile version