ಶಿವಮೊಗ್ಗ,ಮಾ.23:ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಕ್ರಮವಾಗಿ ನೈಟಿಂಗೇಲ್ ಆಂಗ್ಲ ಶಾಲಾ ಕಟ್ಟಡವನ್ನು ಧ್ವಂಸ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಾಲೆಯ ಆಡಳಿತ ಮಂಡಳಿ ಮತ್ತು ಮಕ್ಕಳ ಪೋಷಕರು ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ನ್ಯೂಮಂಡ್ಲಿಯ ನೂರಡಿ ರಸ್ತೆಯಲ್ಲಿರುವ ನೈಟಿಂಗೇಲ್ ಆಂಗ್ಲ ಶಾಲೆಯು ನ್ಯೂಮಂಡ್ಲಿ ಗ್ರಾಮದ ಸರ್ವೆ ನಂ. 186/1ಲ್ಲಿ 0-20ಗುಂಟೆ ಜಾಗವು ಶಾಲೆಯ ಹೆಸರಿಗೆ ನೊಂದಾಯಿಸಲಾಗಿದೆ. ಸುಮಾರು 20 ವರ್ಷಗಳಿಂದ ಶಾಲೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಾಲೆಯ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಇದ್ದು ಕೋರ್ಟಿನ ಆದೇಶವನ್ನು ಉಲ್ಲಂಘಿಸಿ ಶಾಲಾ ಕಟ್ಟಡವನ್ನು ಜೆ.ಸಿ.ಬಿ.ಯಂತ್ರದ ಮೂಲಕ ಹೊಡೆದು ಹಾಕಲಾಗುತ್ತಿದೆ. ಶಾಲೆಯಲ್ಲಿ ಸುಮಾರು 350 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲೂ ಪಬ್ಲಿಕ್ ಪರೀಕ್ಷೆಯಲ್ಲಿ ಮಕ್ಕಳು ಭಾಗವಹಿಸಬೇಕಾಗಿದೆ. ಆದ್ದರಿಂದ ಪರೀಕ್ಷೆ ಮುಗಿಯುವವರೆಗೂ ಶಾಲೆ ಕೆಡವದಂತೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
5,8,9 ಮತ್ತು ಎಸ್‍ಎಸ್‍ಎಲ್‍ಸಿ ಪಬ್ಲಿಕ್ ಪರೀಕ್ಷೆ ಸೋಮವಾರದಿಂದ ಆರಂಭವಾಗಲಿದ್ದು, ಈ ಶಾಲೆಯಲ್ಲಿ 28 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಖಾಸಗಿ ವ್ಯಾಜ್ಯ ಏನೇ ಇರಲಿ ಮಕ್ಕಳ ಹಿತ ದೃಷ್ಟಿಯಿಂದ ತೆರವು ಕಾರ್ಯಾಚರಣೆ ಪರೀಕ್ಷೆಯಾಗುವವರೆಗೆ ಕಾಲಾವಕಾಶ ನೀಡುವಂತೆ ಪಾಲಿಕೆ ಆಯುಕ್ತರನ್ನು ಸಂಪರ್ಕಿಸುವಂತೆ ಶಾಲಾ ಆಡಳಿತ ಮಂಡಳಿಯವರೆಗೆ ಹಾಗೂ ಡಿಡಿಪಿಐ ಅವರಿಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆ ಆಡಳಿತ ಮಂಡಳಿ ಜೊತೆಗೆ ಮಕ್ಕಳು, ಪೋಷಕರು ಹಾಜರಿದ್ದರು.