ಶಿವಮೊಗ್ಗ,ಮಾ.23: ಬ್ರಹ್ಮ ಬಂದು ಬೇಡ ಎಂದು ಹೇಳಿದರೂ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಪಕ್ಷದ ವಿರುದ್ಧವೇ ಬಂಡಾಯವೆದ್ದಿರುವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ಅವರು ಇಂದು ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಈಗಾಗಲೇ ನಿರ್ಧಾರ ಕೈಗೊಂಡಿರುವೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೂಡ ಮಾಡಿರುವೆ. ಎಲ್ಲಾ ಕಡೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ಅದೃಶ್ಯದ ಮತಗಳೆಲ್ಲ ನನಗೆ ಖಂಡಿತ ಸಿಗುತ್ತವೆ. ವಿಶೇಷವಾಗಿ ಜೆಡಿಎಸ್, ಕಾಂಗ್ರೆಸ್, ರಾಷ್ಟ್ರಭಕ್ತ ಮುಸ್ಲಿಂರ ಮತಗಳು ಕೂಡ ನನಗೆ ಸಿಗುತ್ತವೆ. ನಾನು ಗೆದ್ದು ಮತ್ತೆ ಬಿಜೆಪಿಯಲ್ಲಿ ಗುರುತಿಸಿಕೊಂಡು ಮೋದಿಯವರು ಪ್ರಧಾನಿಯಾಗಲು ನೆರವಾಗುತ್ತೇನೆ ಎಂದರು.
ಈಗಾಗಲೇ ಸೊರಬ, ಶಿಕಾರಿಪುರ, ಸಾಗರ ಮುಂತಾದ ಸ್ಥಳಗಳಿಂದ ಅಭಿಮಾನಿಗಳು ಕಾರ್ಯಕರ್ತರು ಮನೆಗೆ ಬಂದು ಬೆಂಬಲ ನೀಡುತ್ತಿದ್ದಾರೆ. ಇದೇ ಬರುವ ಮಾ.28ರಂದು ಬೆಳಗ್ಗೆ 11ಕ್ಕೆ ರಾಷ್ಟ್ರಭಕ್ತ ಬಳಗದ ಹೆಸರಿನಲ್ಲಿ ಜಿಲ್ಲಾ ಚುನಾವಣಾ ಕಾರ್ಯಾಲಯವನ್ನು ಮಲ್ಲೇಶ್ವರ ನಗರದಲ್ಲಿಯೇ ಆರಂಭಿಸುವೆ. ಕಾರ್ಯಾಲಯದ ಉದ್ಘಾಟನೆಗೆ ಹಿರಿಯ ಗಣ್ಯ ವ್ಯಕ್ತಿಗಳು ಬರಲಿದ್ದಾರೆ. 5 ಜನ ಮುತ್ತೈದೆಯರು ಕಾರ್ಯಾಲಯವನ್ನು ಉದ್ಘಾಟಿಸಲಿದ್ದಾರೆ ಎಂದರು.
ಕುಟುಂಬ ರಾಜಕಾರಣ ಸ್ಪಷ್ಟವಾಗಿ ಮೋದಿಯವರು ವಿರೋಧಿಸಿದ್ದರು. ಒಂದು ಕುಟುಂಬಕ್ಕೆ ಒಂದೇ ಸ್ಥಾನ ಎಂದು ಕೂಡ ಹೇಳಿದ್ದರು. ಆದರೆ, ಅವರ ಮಾತನ್ನು ಮೀರಿ ಬಿ.ಎಸ್.ಯಡಿಯೂರಪ್ಪನವರು ನಡೆದುಕೊಂಡಿದ್ದಾರೆ. ಅಧಿಕಾರ ಅವರ ಕುಟುಂಬದಲ್ಲೇ ಕೇಂದ್ರೀಕೃತವಾಗಿದೆ. ಒಬ್ಬ ಮಗ ಸಂಸದ, ಮತ್ತೊಬ್ಬ ಮಗ ಶಾಸಕ ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷ ಸ್ವತಃ ಯಡಿಯೂರಪ್ಪನವರೇ ಬಿಜೆಪಿ ಕಾರ್ಯಕಾರಿಣಿ ರಾಷ್ಟ್ರೀಯ ಸಮಿತಿಯ ಸದಸ್ಯರು. ಈಗಿರುವಾಗ ಸಾಮಾನ್ಯ ಕಾರ್ಯಕರ್ತರ ಪಾಡೇನು ಎಂದರು.
ಅನೇಕ ವರ್ಷಗಳ ಕಾಲ ಹಿಂದೂತ್ವದ ಬಗ್ಗೆ ಹೋರಾಟ ಮಾಡಿದವರನ್ನೇ ಯಡಿಯೂರಪ್ಪ ಕುಟುಂಬ ಕಡೆಗಾಣಿಸುತ್ತಿದೆ. ಸಿ.ಟಿ.ರವಿ, ಯತ್ನಾಳ್, ಸದಾನಂದ ಗೌಡರು, ಪ್ರತಾಪಸಿಂಹ ಮುಂತಾದವರನ್ನೆಲ್ಲ ಕೈಬಿಟ್ಟಿದ್ದು ಏಕೆ, ಕಾಂತೇಶ್‍ರವರನ್ನು ದೆಹಲಿಗೆ ಕರೆದುಕೊಂಡು ಬಾ, ನಾನು ಟಿಕೇಟ್ ಕೊಡಿಸುತ್ತೇನೆ, ಗೆಲ್ಲಿಸುತ್ತೇನೆ ಎಂದು ಯಡಿಯೂರಪ್ಪನವರು ಹೇಳಿದ್ದರು. ಆದರೆ ಆಗೆ ಮಾಡಲಿಲ್ಲ. ಶೋಭಕ್ಕನನ್ನು ದೆಹಲಿ ಕರೆದುಕೊಂಡು ಹೋಗಿ ಇವರು ಸೀಟು ಕೊಡಿಸಿದ್ದರೇನು ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದರು.
ಚುನಾವಣಾ ಚಟುವಟಿಕೆಗಳು ತೀವ್ರಗೊಳ್ಳುತ್ತಿದೆ. ಮಾ.26ರಂದು ಬೆಳಿಗ್ಗೆ 11ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ಬೂತ್‍ಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದೆ. ಪ್ರತಿ ಬೂತ್‍ನಿಂದ ಇಬ್ಬರಂತೆ ಸುಮಾರು 4ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸೇರಲಿದ್ದಾರೆ. ಸಮುದಾಯ ಭವನದ ಒಳಗಡೆ ಜಾಗ ಸಾಕಾಗದಿರಬಹುದು, ಆದರೆ ಸಮುದಾಯದ ಹೊರಗಡೆ ಶಾಮಿಯಾನ ಹಾಕಲಾಗುವುದು ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವಾಸ್, ಸುವರ್ಣ ಶಂಕರ್, ಗನ್ನಿಶಂಕರ್, ಸೀತಾಲಕ್ಷ್ಮೀ, ಮಹಾಲಿಂಗಶಾಸ್ತ್ರಿ, ಕಾಚಿನಕಟ್ಟೆ ಸತ್ಯನಾರಾಯಣ, ಏಳುಮಲೈ, ಲಕ್ಷ್ಮೀಶಂಕರ ನಾಯಕ, ಅನಿತಾ, ವನಿತಾ, ಯಶೋಧ, ರಾಧ, ಉಮಾ, ಶಂಕರನಾಯ್ಕ ಸೇರಿದಂತೆ ಹಲವರಿದ್ದರು.