ಸಾಗರ : ತಾವು ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದಾಗ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಅಧಿಕಾರದ ಕುತ್ತಿಗೆ ಹಿಸುಕಿದ್ದ ಕೆ.ಎಸ್.ಈಶ್ವರಪ್ಪ ಲೋಕಸಭೆ ಪ್ರವೇಶ ಮಾಡಿ ಇನ್ನಷ್ಟು ವ್ಯವಸ್ಥೆ ಹಾಳು ಮಾಡಲು ಸಜ್ಜಾಗಿದ್ದಾರೆ. ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಟ ೨೫ಸಾವಿರ ಮತ ಪಡೆದರೆ ನಾನು ಅವರನ್ನು ಒಬ್ಬ ನಾಯಕ ಎಂದು ಒಪ್ಪಿಕೊಳ್ಳುತ್ತೇನೆ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಂಚಾಯತ್ ರಾಜ್ ಸಚಿವರಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಹಾಳು ಮಾಡಿರುವ ಕೆ.ಎಸ್.ಈಶ್ವರಪ್ಪ ಚುನಾವಣೆಗೆ ಸ್ಪರ್ಧೆ ಮಾಡಿದರೆ ಜನರೆ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಶಾಸನಬದ್ದ ಅನುದಾನಕ್ಕೆ ಸಚಿವರಾಗಿ ಕೊಡಲಿಪೆಟ್ಟು ಕೊಟ್ಟವರು ಈಶ್ವರಪ್ಪ. ರಾಜ್ಯಮಟ್ಟದಲ್ಲಿ ಸೋಲಾರ್ ಟೆಂಡರ್ ಕರೆದು ಪ್ರತಿ ಗ್ರಾಮ ಪಂಚಾಯ್ತಿಯಿಂದ ೧.೨೫ ಲಕ್ಷ ರೂ. ವಸೂಲಿ ಮಾಡಿದ್ದಾರೆ. ರಾಜ್ಯದ ೬೩೦೦ ಗ್ರಾಮ ಪಂಚಾಯ್ತಿಯಿಂದ ತಲಾ ೫ ಲಕ್ಷ ರೂ.ನಂತೆ ಹಣ ವಸೂಲಿ ಮಾಡಲಾಗಿದೆ. ಈಗಾಗಲೆ ಅಳವಡಿಸಿದ್ದ ಸೋಲಾರ್ ಪೂರ್ಣ ಹಾಳಾಗಿದೆ. ಗ್ರಾಮ ಪಂಚಾಯ್ತಿಗೆ ಕಸ ವಿಲೇವಾರಿ
ಆಟೋ ಟಿಪ್ಪರ್ ಸಹ ಅವರೇ ಸರಬರಾಜು ಮಾಡಿದ್ದಾರೆ. ಇದರಲ್ಲಿಯೂ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು ಆಟೋ ಟಿಪ್ಪರ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಇದು ಕೆ.ಎಸ್.ಈಶ್ವರಪ್ಪ ಅವರ ಸಚಿವ ಸ್ಥಾನದ ಸಾಕ್ಷಿಗಳಾಗಿವೆ. ನಾನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷನಾಗಿದ್ದರಿಂದ ಇದನ್ನು ವಿರೋಧಿಸಿದ್ದರಿಂದ ನಮ್ಮ ತಾಲ್ಲೂಕಿನ ೨೦ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಯಿಂದ ಹಣ ಕೊಟ್ಟಿಲ್ಲ ಎಂದರು.
ಉದ್ಯೋಗಖಾತ್ರಿ ಯೋಜನೆಯನ್ನು ಆರ್ಟ್ ಆಫ್ ಲೀವಿಂಗ್ ಕೈಗೆ ಕೊಡುವ ಪ್ರಸ್ತಾಪ ಈಶ್ವರಪ್ಪ ಮಾಡಿದ್ದರು. ಪ್ರತಿ ಗ್ರಾಮ ಪಂಚಾಯ್ತಿಗೆ ಒಬ್ಬ ಆರ್ಟ್ ಆಫ್ ಲೀವಿಂಗ್ ಇಂಜಿನಿಯರ್ ನೇಮಕ ಮಾಡಿ ಪಂಚಾಯ್ತಿಯಿಂದ ವೇತನ ಕೊಡುವ ಪ್ರಸ್ತಾಪ ಅಂತಿಮ ಹಂತಕ್ಕೆ ಬಂದಿತ್ತು. ಇದು ದೊಡ್ಡಮಟ್ಟದ ಹಗರಣಕ್ಕೆ ಕಾರಣವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ನಾನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷನಾಗಿ ಪತ್ರ ಬರೆದಾಗ ಈ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು. ಉದ್ಯೋಗಖಾತ್ರಿಯ ಮೆಟಿರಿಯಲ್ ಸಹ ಈಶ್ವರಪ್ಪ ಕಡೆಯವರೆ ಸರಬರಾಜು ಮಾಡಿದ್ದರು.
ಗ್ರಾಮ ಪಂಚಾಯ್ತಿಯಲ್ಲಿ ವಸೂಲಿ ಮಾಡುವ ಮನೆಕಂದಾಯವನ್ನು ೧೦ಪಟ್ಟು ಹೆಚ್ಚಳ ಮಾಡಿ ಜನರಿಗೆ ತೊಂದರೆ ಕೊಟ್ಟ ಹೆಗ್ಗಳಿಕೆ ಈಶ್ವರಪ್ಪ ಅವರಿಗೆ ಸಲ್ಲುತ್ತದೆ. ಇಂತಹವರು ಲೋಕಸಭೆಗೆ ಹೋಗಿ ಇನ್ಯಾವ ಅಭಿವೃದ್ದಿ ಮಾಡುತ್ತಾರೆ. ಯಡಿಯೂರಪ್ಪ ಅವರನ್ನು ಬಿಟ್ಟು, ಬಿಜೆಪಿಯನ್ನು ಬದಿಗಿಟ್ಟು ಕೆ.ಎಸ್.ಈಶ್ವರಪ್ಪ ೨೫ಸಾವಿರ ಮತ ಪಡೆಯಲೂ ಸಾಧ್ಯವಿಲ್ಲ. ಕುಟುಂಬ ರಾಜಕಾರಣದ ವಿರುದ್ದ ಧ್ವನಿ ಎತ್ತಿರುವ ಕೆ.ಎಸ್.ಈಶ್ವರಪ್ಪ ತಮ್ಮ ಮಗನಿಗೆ ಲೋಕಸಭಾ ಟಿಕೇಟ್ ಕೊಟ್ಟಿಲ್ಲ ಎಂದು ಬಂಡಾಯವಾಗಿ ನಿಲ್ಲಲು ಸಿದ್ದರಾಗಿದ್ದಾರೆ. ಇಲ್ಲಿ ಸಿದ್ದಾಂತಕ್ಕಿಂತ ತಮ್ಮ ಕುಟುಂಬಕ್ಕೆ ಟಿಕೇಟ್ ಕೊಟ್ಟಿಲ್ಲ ಎನ್ನುವುದೆ ಅವರಿಗೆ ಮುಖ್ಯವಾಗಿದೆ ಎಂದು ತಿಳಿಸಿದರು.
ಕೇಸ್ ಸುಖಾಂತ್ಯ : ಸುಮಾರ ನಾಲ್ಕು ವರ್ಷದ ಹಿಂದೆ ಉಪವಿಭಾಗೀಯ ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರರ ವಿಷಯಕ್ಕೆ ಸಂಬಂಧಪಟ್ಟಂತೆ ಡಾ. ಪ್ರಕಾಶ್ ಬೋಸ್ಲೆ ತಮ್ಮ ಮೇಲೆ ಹಾಕಿದ್ದ ದಾವೆ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ೧೩ ಗುತ್ತಿಗೆ ಕಾರ್ಮಿಕರನ್ನು ತೆಗೆದು ಹಾಕಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಕೇಸ್ ಹಾಕಲಾಗಿತ್ತು. ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದ್ದು ನನ್ನ ಪರವಾಗಿ ತೀರ್ಪು ನೀಡಿದೆ. ನ್ಯಾಯವಾದಿ ಎಂ.ರಾಘವೇಂದ್ರ ನನ್ನ ಪರವಾಗಿ ವಾದ ಮಂಡಿಸಿದ್ದರು ಎಂದು ಹೇಳಿದರು.
ಗೋಷ್ಟಿಯಲ್ಲಿ ಗಣಪತಿ ಹೆನಗೆರೆ, ಸ್ವಾಮಿಗೌಡ, ನಾಗರಾಜ ಮಜ್ಜಿಗೆರೆ ಹಾಜರಿದ್ದರು