Site icon TUNGATARANGA

ನೈರುತ್ಯ ಪದವೀಧರ ಕ್ಷೇತ್ರದಿಂದ “ಆಯನೂರು ಮಂಜುನಾಥ್ ” ಅವರಿಗೆ ಟಿಕೆಟ್/ಎಸ್.ಪಿ. ದಿನೇಶ್ ಹಾಗೂ ರಮೇಶ್ ಶಂಕರಘಟ್ಟರಿಗೆ ನಿರಾಸೆ

ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಸ್ಪರ್ಧಾಕಾಂಕ್ಷಿಯಾಗಿದ್ದ ಎಸ್.ಪಿ. ದಿನೇಶ್ ಮತ್ತು ಶಿಕ್ಷಕರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ರಮೇಶ್ ಶಂಕರಘಟ್ಟ ಅವರಿಗೆ ನಿರಾಸೆಯಾಗಿದೆ ಎಂದು ಹೇಳಲಾಗುತ್ತಿದೆ.


ಜೂನ್ ನಲ್ಲಿ ನಡೆಯಲಿರುವ ಪದವೀಧರ ಕ್ಷೇತ್ರಕ್ಕೆ ೪ ಸದನಗಳನ್ನು ಪ್ರತಿನಿಧಿಸಿ ವಿಶಿಷ್ಟ ಸಾಧನೆ ಮಾಡಿರುವ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಳೆದ ಬಾರಿ ಇವರು ಇದೇ ಕ್ಷೇತ್ರದಿಂದ ಪ್ರತಿನಿಧಿಸಿ ಗೆಲುವು ಸಾಧಿಸಿದ್ದರು. ಇನ್ನೂ ೧೨ ತಿಂಗಳು ಬಾಕಿ ಇರುವಂತೆಯೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ನೈರುತ್ಯ ಪದವೀಧರ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದ ಎಸ್.ಪಿ. ದಿನೇಶ್ ಈ ಬಾರಿ ಪ್ರಬಲ

ಆಕಾಂಕ್ಷಿಯಾಗಿದ್ದರು. ಈ ಹಿಂದೆ ಅವರು ಕೇವಲ ೮೦೦ ಮತಗಳಿಂದ ಸೋತಿದ್ದರು. ಈ ಬಾರಿ ಟಿಕೆಟ್ ತಮಗೆ ಸಿಗುತ್ತದೆ. ತಾವು ಗೆಲ್ಲುತ್ತೇವೆ ಎಂದುಕೊಂಡಿದ್ದರು. ಈಗ ಪಕ್ಷ ಟಿಕೆಟ್ ನೀಡದೇ ಇರುವುದರಿಂದ ಅವರ ನಡೆ ನಿಗೂಢವಾಗಿದೆ. ಆದರೆ, ಟಿಕೆಟ್ ಪಡೆದುಕೊಂಡಿರುವ ಆಯನೂರು ಮಂಜುನಾಥ್ ಎಸ್.ಪಿ. ದಿನೇಶ್ ಅವರು ತಮ್ಮ ಜೊತೆಗೆ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ

.
ಪದವೀಧರ ಕ್ಷೇತ್ರದ ಕತೆ ಇದಾದರೆ, ಶಿಕ್ಷಕರ ಕ್ಷೇತ್ರದಲ್ಲೂ ಸಹ ಕಳೆದ ಬಾರಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ರಮೇಶ್ ಶೆಟ್ಟಿ ಶಂಕರಘಟ್ಟ ಅವರು ಗೆಲುವಿನ ಸಮೀಪಕ್ಕೆ ಬಂದಿದ್ದರು. ಈ ಬಾರಿ ತಮಗೆ ಟಿಕೆಟ್ ಸಿಗುತ್ತದೆ ಎಂದುಕೊಂಡಿದ್ದರು. ಆದರೆ ಈ ಬಾರಿಯೂ ಟಿಕೆಟ್ ಕೈತಪ್ಪುವ ನಿರೀಕ್ಷೆ ಇದೆ. ಕೊಡಗಿನ ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಅಂತಿಮವಾಗಿ ಇನ್ನೂ ನಿರ್ಧಾರವಾಗಿಲ್ಲ.


ಈ ಬಗ್ಗೆ ರಮೇಶ್ ಶೆಟ್ಟಿ ಅವರು ಪ್ರತಿಕ್ರಿಯಿಸಿ, ರಾಜ್ಯ ಹಾಗೂ ಜಿಲ್ಲಾ ಮುಖಂಡರು ನೈರುತ್ಯ ಶಿಕ್ಷಕರ ಕ್ಷೇತ್ರದ ಕಾರ‍್ಯ ಚಟುವಟಿಕೆ ಗಮನಿಸಿದ್ದಾರೆ. ನನಗೆ ಟಿಕೆಟ್ ಸಿಗುವ ಭರವಸೆ ಇನ್ನೂ ಇದೆ. ಆದರೆ ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ

Exit mobile version