Site icon TUNGATARANGA

ಕಾಂಗ್ರೆಸ್ ಸರ್ಕಾರ ಕೇವಲ ಅಭಿವೃದ್ಧಿ ವಿರೋಧಿ ಸರ್ಕಾರ ಮಾತ್ರವಲ್ಲ /ರೈತ ದಲಿತ ಹಿಂದು ವಿರೋಧಿ ಸರ್ಕಾರವಾಗಿದೆ:ಶಾಸಕ ಡಿ.ಎಸ್.ಅರುಣ್

ಶಿವಮೊಗ್ಗ,ಮಾ.೨೨: ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಅವರು ಇಂದು ಬಿಜೆಪಿ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೧೧ ತಿಂಗಳಾದರು ಯಾವುದೇ ಅಭಿವೃದ್ಧಿಯಾಗಲಿಲ್ಲ. ನೀರಾವರಿ ಯೋಜನೆಗಳು ನೆನೆಗುದ್ದಿಗೆ ಬಿದ್ದವು. ಒಂದು ಕಿ.ಮೀ.ರಸ್ತೆಯನ್ನು ಮಾಡಲಿಲ್ಲ. ಗ್ಯಾರಂಟಿಗಳ ಅಲೆಗಳಲ್ಲಿ ತೇಲಾಡುತ್ತಿದೆ ಎಂದು ದೂರಿದರು.


ಕಾಂಗ್ರೆಸ್ ಸರ್ಕಾರ ಕೇವಲ ಅಭಿವೃದ್ಧಿ ವಿರೋಧಿ ಸರ್ಕಾರ ಮಾತ್ರವಲ್ಲ, ಅದು ರೈತ, ದಲಿತ, ಹಿಂದು ವಿರೋಧಿ ಸರ್ಕಾರವಾಗಿದೆ. ರಾಮಮಂದಿರ ನಿರ್ಮಾಣ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹೇಳಿದ ಹೇಳಿಕೆಗಳು ವಿಚಿತ್ರವಾಗಿದ್ದವು. ಹಿಂದುಗಳ ಮೇಲೆ ಅನೇಕ ದಾಳಿಗಳಾಗಿವೆ. ಹನುಮಧ್ವಜ ವಿಚಾರ, ದೇವಸ್ಥಾನಗಳ ದತ್ತಿ ಹಣದ ವಿಷಯ, ಕುಕ್ಕರ್ ಬಾಂಬ್ ಸ್ಪೋಟ ವಿಷಯ ಮುಂತಾದವರು ಹಿಂದು ವಿರೋಧದ ನೆಲೆಗಟ್ಟಿನಲ್ಲಿಯೇ ಇವೆ ಎಂದರು.


ದೇವಸ್ಥಾನಗಳ ಸಂಗ್ರಹದ ಹಣವನ್ನು ಸರ್ಕಾರಕ್ಕೆ ಮೊದಲೇ ಶೇ.೧೦ರಷ್ಟು ಕೊಡಬೇಕು ಎಂಬ ನಿಯಮವನ್ನು ಈಗಿನ ಸರ್ಕಾರ ಜಾರಿಗೆ ತಂದಿದೆ. ಇದು ಸರಿಯಲ್ಲ. ನಮ್ಮ ಸರ್ಕಾರ ಇದ್ದಾಗ ದೇವಸ್ಥಾನಗಳು ತನ್ನೆಲ್ಲ ಕೆಲಸಗಳನ್ನು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸಿ ಉಳಿದ ಹಣದಲ್ಲಿ ಶೇ.೧೦ರಷ್ಟು ನೀಡಬೇಕು ಎಂದು ಆದೇಶ ತಂದಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ನಿಯಮವನ್ನು ರೂಪಿಸಿದೆ ಎಂದರು.


ಇದು ರೈತ ವಿರೋಧಿ ಸರ್ಕಾರವು ಹೌದು, ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಜಾರಿಯಲ್ಲಿತ್ತು. ಕೇಂದ್ರ ಸರ್ಕಾರದ ೬ಸಾವಿರದ ಜೊತೆಗೆ ಬಿಜೆಪಿ ಸರ್ಕಾರ ಇದ್ದಾಗ, ೪ ಸಾವಿರ ಸೇರಿಸಿ ೧೦ ಸಾವಿರ ನೀಡುತ್ತಿದ್ದೆವು. ಈಗ ರಾಜ್ಯ ಸರ್ಕಾರ ತನ್ನ ಪಾಲಿನ ೪ ಸಾವಿರವನ್ನು ನಿಲ್ಲಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ. ಜೊತೆಗೆ ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿದೆ. ಎಪಿಎಂಸಿ ಕಾಯ್ದೆಯನ್ನು ವಾಪಾಸ್ಸು ತೆಗೆದುಕೊಂಡಿದೆ ಎಂದರು.
ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ಸರ್ಕಾರವು ಹೌದು, ದಲಿತರಿಗಾಗಿ ಇಟ್ಟಿದ ೫೩ ಸಾವಿರ ಕೋಟಿ ಹಣವನ್ನು ಬೇರೆ ಕಡೆ ವರ್ಗಾಯಿಸಲಾಗಿದೆ. ಇದರಲ್ಲಿ ಗ್ಯಾರಂಟಿಗಳು ಸೇರಿಕೊಂಡಿವೆ. ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಬೇರೆ ಕಡೆ ವರ್ಗಾಯಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.


ಕಾಂಗ್ರೆಸ್ ಪಕ್ಷ ತನ್ನ ಎರಡನೇಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಎರಡನೆಯ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕುಟುಂಬ ರಾಜಕಾರಣವೇ ಎದ್ದು ಕಾಣುತ್ತಿದೆ. ಇದನ್ನು ನೋಡಿಯೋ ಕಾರ್ಯಕರ್ತರು ಸುಮ್ಮನಿದ್ದಾರೆ. ಇದು ಕಾರ್ಯಕರ್ತರ ಸಂಯಮ ಎಂದರು.
ಬಿಜೆಪಿಯಲ್ಲಿಯೇ ಕುಟುಂಬ ರಾಜಕಾರಣ ಹೆಚ್ಚಾಗಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯಲ್ಲಿ ಕೆಳಹಂತದಿಂದ ಕೆಲಸ ಮಾಡಿದವರಿಗೆ ಟಿಕೇಟ್ ನೀಡಲಾಗಿದೆ. ಉದಾಹರಣೆಗೆ ನನ್ನನ್ನೇ ತೆಗೆದುಕೊಂಡರೆ, ನಾನು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿದಿದ್ದೇನೆ, ಆದರೆ ಯಾವ ಕೆಲಸವನ್ನು ಮಾಡದವರಿಗೆ ಈ ಬಾರಿ ಕಾಂಗ್ರೆಸ್ ಟಿಕೇಟ್ ನೀಡಿದೆ ಎಂದರು.


ನಾವು ಕಾಂಗ್ರೆಸ್ ಸರ್ಕಾರ ವೈಫಲ್ಯತೆ ಮತ್ತು ನಮ್ಮ ಹಿಂದಿನ ರಾಜ್ಯ ಸರ್ಕಾರದ ಸಾಧನೆ, ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು, ನರೇಂದ್ರ ಮೋದಿಯವರ ರಾಷ್ಟ್ರ ಪ್ರೇಮ ಇವೆಲ್ಲ ಮುಂದಿಟ್ಟುಕೊಂಡು ಈ ಬಾರಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತೇವೆ. ಶಿವಮೊಗ್ಗ ಕ್ಷೇತ್ರವು ಸೇರಿದಂತೆ ರಾಜ್ಯದಲ್ಲಿ ಅತಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಡಿ.ಮೇಘರಾಜ್, ಎಸ್.ದತ್ತಾತ್ರಿ, ಚಂದ್ರಶೇಖರ್, ಅಣ್ಣಪ್ಪ ಇದ್ದರು.

Exit mobile version