Site icon TUNGATARANGA

ಸಚಿವ ಮಧುಬಂಗಾರಪ್ಪ ಕೆಲ ಕಾಂಗ್ರೇಸ್‌ನ ನಾಯಕರು ನನ್ನ ಬಗ್ಗೆ ಹಗುರವಾಗಿ ಮಾತಾನಾಡಿದ್ದಾರೆ ಅವರಿಗೆ ಮತದಾರ ತಕ್ಕ ಉತ್ತರ ನೀಡಲಿದ್ದಾರೆ: ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ,ಮಾ.೨೧: ನೆನ್ನೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಹಾಗೂ ಕಾಂಗ್ರೆಸ್‌ನ ಕೆಲ ನಾಯಕರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರಿಗೆ ಮತದಾರ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಪ್ರಜ್ಞಾವಂತರ ನಾಡಾಗಿದೆ. ರಾಷ್ಟ್ರಕವಿ ಕುವೆಂಪು, ಶರಣ-ಶರಣೆಯರು ಹಾಗೂ ಅನೇಕ ಮಹನೀಯರು ಜನ್ಮತಾಳಿದ ಜಿಲ್ಲೆಯಾಗಿದ್ದು, ಇಲ್ಲಿಯ ಜನ ಅಭಿವೃದ್ಧಿ ಮತ್ತು ರಾಷ್ಟ್ರೀಯತೆಯನ್ನು ಗಮನಿಸಿ ಮತ ನೀಡುತ್ತಾರೆ ಎಂದರು.


ಸಚಿವರ ಹೇಳಿಕೆ ಗಮನಿಸಿದಾಗ ನನಗೆ ನಗು ಬರುತ್ತದೆ. ಶರಾವತಿ ಸಂತ್ರಸ್ಥರಿಗೆ ಹಕ್ಕುಪತ್ರ, ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳಿಗೆ ಅಭಿವೃದ್ಧಿ ೫ ವರ್ಷದಲ್ಲಿ ಸಂಸದ ರಾಘವೇಂದ್ರ ಏನು ಮಾಡಿದ್ದಾರೆ. ಸದನದಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ ಎಂದು ಸಚಿವರು ಗೇಲಿ ಮಾಡಿದ್ದಾರೆ. ಅವರು ನನ್ನ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಹೋದರೆ ನಾನು ಮೂರು ಬಾರಿ ಸಂಸದನಾದಾಗ ಏನೇನು ಮಾಡಿದ್ದೇ ಎಂಬುವುದರ ಸಂಪೂರ್ಣ ವಿವರ ಅದರಲ್ಲಿದೆ. ಕರ ಪತ್ರದ ಮೂಲಕವು ದಾಖಲು ಸಮೇತ ಕ್ಷೇತ್ರದ ಮತದಾರನಿಗೆ ಈಗಾಗಲೇ ತಲುಪಿಸಲಾಗಿದೆ. ಮೊದಲು ಕಾಂಗ್ರೆಸ್‌ನವರು ಅದನ್ನು ಓದಿಕೊಳ್ಳಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವ ಯಾವ ನೈತಿಕತೆಯು ಅವರಗಿಲ್ಲ. ಯುವ ಶಕ್ತಿಗೆ ನಾನು ಏನು ಮಾಡಿದ್ದೇನೆ ಎಂಬುವುದು ಗೊತ್ತಿದೆ. ಅಂತರಾಷ್ಟ್ರೀಯ ಶಕ್ತಿಗಳು ಮೋದಿ ಅಧಿಕಾರಕ್ಕೆ ಬಾರದ ಆಗೇ ಷಡ್ಯಂತರ ರೂಪಿಸುತ್ತಿದೆ ಎಂದರು.


ಕೆ.ಎಸ್.ಈಶ್ವರಪ್ಪನವರ ಹೇಳಿಕೆಗಳಿಗೆ ಮತದಾರ ಉತ್ತರ ನೀಡುತ್ತಾನೆ. ಅವರು ಕೂಡ ನಾಲ್ಕೈದು ಬಾರಿ ಶಾಸಕರಾಗಿ ಸಹಜವಾಗಿ ಬಿಜೆಪಿ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದಾರೆ. ಹಾಗಾಗಿ ಅವರೊಂದಿಗೆ ಭಾಗವಹಿಸುವುದು ತಪ್ಪೇನು ಅಲ್ಲ, ಹಣೆಬರಹದಲ್ಲಿ ಏನು ಬರೆದಿದೆ. ಅದನ್ನು ಯಾರು ಬದಲಾಯಿಸಲಾಗುವುದಿಲ್ಲ. ನನ್ನ ತಮ್ಮ ವಿಜಯೇಂದ್ರ ರಾಜ್ಯಾಧ್ಯಕ್ಷನಾಗುತ್ತಾನೆ ಎಂದು ನಮ್ಮ ಕುಟುಂಬದವರು ಯಾರು ಭಾವಿಸಿರಲಿಲ್ಲ. ಅವರ ಕ್ರೀಯಾಶೀಲತೆಯನ್ನು ನೋಡಿ ರಾಷ್ಟ್ರದ ಹಿರಿಯ ಬಿಜೆಪಿ ನಾಯಕರು ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಪಕ್ಷವನ್ನು ಸದೃಢವಾಗಿ ಬೆಳೆಸುತ್ತಾರೆ ಎಂಬ ವಿಶ್ವಾಸ ಅವರಿಗೆ ಬಂದಿದೆ ಎಂದರು.


ನೀತಿ ಸಂಹಿತೆ ಜಾರಿ ಇದ್ದರೂ ಕೂಡ ಪ್ರಧಾನಿಯವರ ಕಾರ್ಯಕ್ರಮದಲ್ಲಿ ಜನ ನಭೂತೋ, ನಾಭವಿಷ್ಯತಿ ಎಂಬಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಮತದಾರ ಕ್ಷೇತ್ರದ ಅಭಿವೃದ್ಧಿಯಾಗಬೇಕು ಎಂದು ಬಯಸುತ್ತಾನೆ. ಇನ್ನೊಂದು ವಾರದಲ್ಲಿ ಸರಿಯಾದ ಅಖಾಡ ಸಿದ್ದವಾಗುತ್ತದೆ. ಬಿಜೆಪಿಯ ರಾಷ್ಟ್ರೀಯ ವಿಚಾರಗಳು ಕಣ್ಣ ಮುಂದಿದೆ. ಕ್ಷೇತ್ರದ ಮತದಾರರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

Exit mobile version