Site icon TUNGATARANGA

ತುಂಗ- ಭದ್ರಾ ನದಿ ಸಂಗಮದಲ್ಲಿ ಪರೋಪಕಾರಂನಿಂದ ಸ್ವಚ್ಛತೆ ಸಂಪ್ರದಾಯದ ಹೆಸರಿನಲ್ಲಿ ನದಿ ಪಾವಿತ್ರ್ಯತೆ ಹಾಳು ಮಾಡಬೇಡಿ: ಶ್ರೀಧರ್ ಎನ್.ಎಂ.

ನದಿಯೊಳಗೆ ಇಳಿದು ನಾಲ್ಕಾರು ಹೆಜ್ಜೆ ಹಾಕಿದರೆ ಸಾಕು, ಪಾದಕ್ಕೆ ತೊಡರುಗಾಲಾಗಿ ಸಿಲುಕುವ ಸೀರೆ-ಪಂಚೆ, ಬೌಸ್, ಶರ್ಟ್ ಮತ್ತಿತರೆ ಬಟ್ಟೆಗಳು, ನಿಧನರಾದವರ ಅಸ್ಥಿಯನ್ನು ಕುಡಿಕೆ- ಮಡಿಕೆಯಲ್ಲಿ ತಂದು ನೀರಲ್ಲಿ ವಿಸರ್ಜಿಸಿದ ನಂತರ ಅವುಗಳಲ್ಲಿ ಅಲ್ಲಿಯೇ ಬಿಸಾಕಿ ಹೋಗುವ ಮೃತರ ಸಂಬಂಧಿಕರು, ಪ್ರೇಕ್ಷಣೀಯ ಸ್ಥಳವಾಗಿರುವುದರಿಂದ ಪ್ರವಾಸಕ್ಕೆ

ಬಂದವರು ಎಲ್ಲೆಂದರಲ್ಲಿ ಬಿಸಾಡುವ ನೀರಿನ ಬಾಟಲ್‌ಗಳು, ಕುರುಕಲು ತಿನಿಸಿನ ಕವರ್‌ಗಳು, ಮತ್ತಿತರೆ ಪ್ಲಾಸ್ಟಿಕ್ ವಸ್ತುಗಳು…


ತುಂಗ-ಭದ್ರಾ ನದಿಗಳು ಸಂಗಮವಾಗುವ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಬಳಿ ಇರುವ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ಕೂಡ್ಲಿಯ ವಾಸ್ತವ ಚಿತ್ರಣವಿದು.


ಬೇಸಿಗೆ ಸಮಯದಲ್ಲಿ ನದಿ ಸ್ವಚ್ಛತೆ ಮಾಡುವ ಜೊತೆಗೆ ನದಿಯ ಪಾವಿತ್ರ್ಯತೆ ಬಗ್ಗೆ ಜನ ಜಾಗೃತಿ ಮೂಡಿಸಲು ಪರೋಪಕಾರಂ ಕುಟುಂಬ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದರ ಅಂಗವಾಗಿ ಈ ಕುಟುಂಬದ ಸದಸ್ಯರು ಮಾರ್ಚ್ ೧೭ರ ಭಾನುವಾರ ಸಂಜೆ ತುಂಗ- ಭದ್ರಾ ನದಿ ಸಂಗಮ ಸ್ಥಾನವಾದ ಶ್ರೀ ಕ್ಷೇತ್ರ ಕೂಡ್ಲಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ನೀರಿನ ಹರಿವಿನ ಮಟ್ಟ ಕಡಿಮೆ ಇದ್ದುದರಿಂದ ಮಹಿಳೆಯರು ಮತ್ತು ಮಕ್ಕಳೂ ಸಹ ನದಿಗೆ ಇಳಿದು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಪರೋಪಕಾರಂ ಕುಟುಂಬದ ಕಟ್ಟಾಳು ಶ್ರೀಧರ್ ಎನ್.ಎಂ. ಅವರು ಇಲ್ಲಿಗೆ ಬರುವ ಭಕ್ತರು, ಪ್ರವಾಸಿಗರು ಸಂಗಮದಲ್ಲಿ ಸ್ನಾನ ಮಾಡಿದ ನಂತರ ಧರಿಸಿದ ಬಟ್ಟೆಯನ್ನು ನದಿಯಲ್ಲಿಯೇ ಬಿಟ್ಟು ಹೋಗಬೇಕೆಂಬುವುದು ಸಂಪ್ರದಾಯದಂತೆ ಪರಿಪಾಲಿಸುತ್ತಿದ್ದಾರೆ. ಭಕ್ತಿ, ಸಂಪ್ರದಾಯದ ಹೆಸರಿನಲ್ಲಿ ನದಿ ಪಾವಿತ್ರ್ಯತೆಯನ್ನು ಹಾಳು ಮಾಡಬಾರದು ಎಂದು ಹೇಳಿದರು.


ಸ್ನಾನ ಮಾಡಿದ ನಂತರ ಬಟ್ಟೆಯನ್ನು ನದಿಯಲ್ಲಿಯೇ ಬಿಟ್ಟು ಹೋಗುವುದರಿಂದ ಪ್ರತಿ ವರ್ಷ ಟನ್‌ಗಟ್ಟಲೆ ಉಡುಪುಗಳು ನದಿ ಸೇರುತ್ತಿವೆ. ಇದನ್ನು ತಡೆಗಟ್ಟಲು ಜನ ಮತ್ತು ಜಲ ಜಾಗೃತಿ ಅಗತ್ಯ. ನಾವು ಪಾಲಿಸುವ ಸಂಪ್ರದಾಯಗಳು ಪರಿಸರಕ್ಕೆ ಪೂರಕವಾಗಿರಬೇಕೇ ಹೊರತು ಜಲಮೂಲವನ್ನು ಕಲುಷಿತಗೊಳಿಸುವ ಮೂಲಕ ನದಿಗೆ ಮಾರಕವಾಗಿರುವಂತೆ ಇರಬಾರದು ಎಂದು ತಿಳಿಸಿದರು.


ನದಿ ಸ್ವಚ್ಛತೆಯಿಂದ ಸುಲಭದಲ್ಲಿ ಪುಣ್ಯ ಹಾಗೂ ಸರಳವಾಗಿ ಉಲ್ಲಾಸ ಪ್ರಾಪ್ತಿಯಾಗುತ್ತದೆ. ತುಂಗ- ಭದ್ರಾ ನದಿ ಪಾತ್ರದ ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಲ್ಲಿ ಜಲ ಮಾಲಿನ್ಯವನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸಬೇಕು. ಸ್ವಚ್ಛತಾ ಕಾರ್ಯದಲ್ಲಿ ಇವರು ತೊಡಗುವಂತೆ ಪ್ರೇರೇಪಿಸಬೇಕೆಂದು ಆಶಿಸಿದರು.


ಇದೇ ಸಂದರ್ಭದಲ್ಲಿ ನವ್ಯಶ್ರೀ ಈಶ್ವರ ವನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಬ್ಬಲಗೆರೆ ಬಳಿಯ ಈಶ್ವರ ವನದಲ್ಲಿ ಯಶಸ್ವಿಯಾಗಿ ನಡೆದ ಮಹಾ ಶಿವರಾತ್ರಿ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ಸಂಗ್ರಹ ಹಾಗೂ ಧನ್ಯವಾದ ಸಮರ್ಪಣೆ ನಡೆಯಿತು.
ಆಡಿಟರ್ ಕೃಷ್ಣಮೂರ್ತಿ ಮಾತನಾಡಿ ನವ್ಯಶ್ರೀ ನಾಗೇಶ್ ಅವರು ಒಬ್ಬ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ವಿವಿಧ ಶಕ್ತಿಗಳನ್ನು

ಕ್ರೋಢೀಕರಿಸಿಕೊಂಡು ಸಮನ್ವಯತೆಯಿಂದ ಶಿವರಾತ್ರಿ ಕಾರ್ಯಕ್ರಮ ರೂಪಿಸುತ್ತಾ ಬರುತ್ತಿದ್ದಾರೆ. ಪ್ರಕೃತಿ ಪೂಜೆಯೇ ಶಿವನ ಪೂಜೆ ಎಂಬ ಪರಿಕಲ್ಪನೆ ಮೂಡಿಸಿ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಉಳಿಸಲು ಇವರು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯವೆಂದರು.
ನಗರದ ಯಾಂತ್ರಿಕ ಬದುಕು, ಬಿಸಿಲ ಬೇಗೆಯಿಂದ ಬೇಸತ್ತವರು ನದಿಯಲ್ಲಿ ಮಿಂದೆದ್ದು ಮೈ ಮನಸ್ಸುಗಳನ್ನು ಮುದಗೊಳಿಸಿಕೊಂಡರು. ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿ ಸಮರ್ಪಿಸಿದರು.
ಪರೋಪಕಾರಂ ಕುಟುಂಬದ ನವ್ಯಶ್ರೀ ನಾಗೇಶ್, ಲೀಲಾಬಾಯಿ ಎನ್.ಎಂ., ನರಪತ್ ಪಟೇಲ್, ಜಿ.ವಿ. ಪಾಂಡುರಂಗಪ್ಪ, ದುಮ್ಮಳ್ಳಿ ರಾಜಣ್ಣ, ಆರ್. ಕುಮಾರಣ್ಣ ಗಾಡಿಕೊಪ್ಪ, ದೀಪಾ ಶ್ರೀಧರ್, ಶೈಲ ರಾಘವೇಂದ್ರ, ನಾಗರಾಜ್ ಶೆಟ್ಟರ್, ವಾಯುಸುತ, ದಿನೇಶ್ ದಾಸ್ ವೈಷ್ಣವ್, ಕೃಷ್ಣಮೂರ್ತಿ, ಸಾರಥಿ ಶಿವಾನಂದ್, ಗೀತಾ ಶಿವಾನಂದ್, ಶ್ರೀಕಾಂತ್ ಹೊಳ್ಳ, ಶೈಲಜಾ ಹೊಳ್ಳ, ಮಾನ್ಯ, ವಂದನಾ, ಎಂ.ಕೆ. ಬಾಲಚಂದ್ರ, ಈಶ್ವರಿ, ವಿಜಯ್ ಕಾರ್ತಿಕ್, ವೈಷ್ಣವಿ, ವೈಶಾಖ, ಚರಿತಾ, ಕೂಡ್ಲಿ ಪ್ರವೀಣ್, ವಿನೋದ ಸಾಗರ ಮತ್ತಿತರರು ಉಪಸ್ಥಿತರಿದ್ದರು.

Exit mobile version