ಶಿವಮೊಗ್ಗ,ಮಾ.20: ನಾನು ಸಿಗಂಧೂರು ಶ್ರೀ ಕ್ಷೇತ್ರಕ್ಕೆ ಹೋಗಿದ್ದೆ. ಆಶ್ಚರ್ಯವೆಂಬಂತೆ ಅಲ್ಲಿನ ಟ್ರಸ್ಟ್ ರಾಮಪ್ಪನವರು ವಿಶೇಷ ಆಸಕ್ತಿ ತೋರಿಸಿ ಬರಮಾಡಿಕೊಂಡರು. ಗರ್ಭಗುಡಿಗೂ ಹೋಗಿ ದೇವಿಯ ದರ್ಶನ ಮಾಡಿದೆ. ಹಿಂದೂ ಭಕ್ತನೊಬ್ಬನನ್ನು ಗೆಲ್ಲಿಸಬೇಕು ಎಂದು ನನ್ನ ಪರವಾಗಿ ರಾಮಪ್ಪನವರೇ ದೇವಿಯನ್ನು ಪ್ರಾರ್ಥಿಸಿದ್ದಾರೆ ಎಂದು ಬಂಡಾಯವೆದ್ದಿರುವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ತಮ್ಮ ನಿವಾಸದ ಆವರಣದಲ್ಲಿ ಕರೆದಿದ್ದ ಅಭಿಮಾನಿಗಳ ಸಭೆ ಯಲ್ಲಿ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಖಚಿತ. ನಿವೇಲ್ಲರು ಅತ್ಯಂತ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.
ಅಭಿಮಾನಿಗಳಲ್ಲಿ ಅನೇಕರು ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗೆ ಮತ್ತು ತಾ.ಪಂ.ಜಿ.ಪಂ. ಚುನಾವಣೆಗೆ ಸ್ಪರ್ಧಿಸಲಿದ್ದೀರಿ. ನೀವು ಈಗಿನಿಂದಲೇ ನಿಮ್ಮ ನಿಮ್ಮ ವಾರ್ಡ್‍ಗಳಲ್ಲಿ, ಬೂತ್‍ಗಳಲ್ಲಿ ಓಡಾಡಿ ಮತ್ತ ಯಾಚಿಸಿ ಈ ಈಶ್ವರಪ್ಪನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಲೋಕಸಭಾ ಚುನಾವಣೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಖಂಡಿತ ಆಗಲಿದೆ. ಯಾರೆ ಬಂದು ನನ್ನ ಮನವೊಲಿಸಿದರು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಬಾರಿಯ ಸ್ಪರ್ಧೆ ಖಚಿತವಾಗಿದೆ. ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿಯಲ್ಲಿಯೇ ಇರುತ್ತೇನೆ. ಪಕ್ಷ ಈಗ ಒಂದು ಕುಟುಂಬದ ಕೈಯಲ್ಲಿ ಸಿಲುಕಿದೆ. ಸರ್ವಾಧಿಕಾರಿ ಧೋರಣೆ ಇದೆ. ಆ ಕುಟುಂಬದ ವಿರುದ್ಧ ನನ್ನ ಸ್ಪರ್ಧೆ ಎಂದರು.
ಈಶ್ವರಪ್ಪ ಪುತ್ರ ಮಾಜಿ ಜಿ.ಪಂ. ಸದಸ್ಯ ಕೆ.ಇ.ಕಾಂತೇಶ್ ಮಾತನಾಡಿ ಯಾವುದೇ ಕಾರಣಕ್ಕೂ ನಮ್ಮ ತಂದೆಯವರು ತಮ್ಮ ನಿರ್ಧಾರವನ್ನು ವಾಪಾಸ್ಸು ತೆಗೆದುಕೊಳ್ಳುವುದಿಲ್ಲ. ನಮ್ಮ ತಂದೆ 40 ವರ್ಷ ರಾಜಕಾರಣ ಮಾಡಿದ್ದಾರೆ ಯಾರಿಗಾದರೂ ಅನ್ಯಾಯ ಮಾಡಿದ್ದಾರೆಯೇ ? ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ನಾನು ಕೂಡ ಅಳಿಲು ಸೇವೆ ಮಾಡುತ್ತ ಬಂದಿದ್ದೇನೆ. ನಮ್ಮ ಕುಟುಂಬ ನಿಮ್ಮ ಜೊತೆ ಇರುತ್ತದೆ. ನಿಮ್ಮ ಋಣ ನಾವು ತೀರಿಸುತ್ತೇವೆ. ನಮ್ಮೊಂದಿಗೆ ಇರಿ ಎಂದರು.
ಹಿಂಧುತ್ವದ ಕಾರಣಕ್ಕಾಗಿಯೇ ತಂದೆಯವರು ಸ್ಪರ್ಧೆ ಮಾಡುತ್ತಾರೆ. ಈಗಾಗಲೇ ನಿರ್ಧಾರವು ಆಗಿದೆ. ಪಕ್ಷ ಉಳಿಯಬೇಕು ಎಂಬುವುದು ಎಲ್ಲರ ಆಶಯವಾಗಿದೆ. ಅವರ ಆಶಯಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತೇವೆ. ಕಾರ್ಯಕರ್ತರ ಅಪಾರ ಬೆಂಬಲ ನಮ್ಮೊಟ್ಟಿಗಿದೆ ಎಂದರು.
ಸಭೆಯಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವಾಸ್, ರೇಣುಕಾ ನಾಗರಾಜ್, ಸುವರ್ಣ ಶಂಕರ್, ಪ್ರಮುಖರಾದ ಉಮಾ, ಭೂಪಾಲ್, ಕೇಬಲ್ ಬಾಬು ಇನ್ನಿತರರಿದ್ದರು.