Site icon TUNGATARANGA

ಮಾ.25 ರಿಂದ ಏಪ್ರಿಲ್ 06 ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ-ಅಗತ್ಯ ಸಿದ್ದತೆಗೆ :ಎಡಿಸಿ ಸಿದ್ದಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚನೆ


ಶಿವಮೊಗ್ಗ, ಮಾರ್ಚ್ 19
         ಜಿಲ್ಲೆಯಲ್ಲಿ ಮಾ.25 ರಿಂದ ಏಪ್ರಿಲ್ 06 ರವರೆಗೆ ಎಸ್‍ಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿದ್ದು, ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ಪರೀಕ್ಷೆಗಳನ್ನು ನಡೆಸಲು ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಇಂದು ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


     ಜಿಲ್ಲೆಯ ಒಟ್ಟು 78 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ನಿಯೋಜನೆಗೊಂಡಿರುವ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಸಿಟ್ಟಿಂಗ್ ಸ್ಕ್ಯಾಡ್, ಮಾರ್ಗಾಧಿಕಾರಿಗಳು ಸೇರಿದಂತೆ ಪ್ರತಿ ಅಧಿಕಾರಿ ತಮ್ಮ ತಮ್ಮ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕೆಂದು ಅವರು ಸೂಚನೆ ನೀಡಿದರು.
         ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಆಸನ, ಕುಡಿಯುವ ನೀರು ಸೇರಿದಂತೆ ಇತರೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್‍ನ್ನು ಪೊಲೀಸ್ ಇಲಾಖೆಯಿಂದ ಒದಗಿಸಲಾಗುವುದು. ವಾಹನ ವ್ಯವಸ್ಥೆಯನ್ನು ತಮ್ಮ ವತಿಯಿಂದ ಮಾಡಲಾಗುವುದು. ಸುಗಮ ಪರೀಕ್ಷೆಗೆ ಅಗತ್ಯವಾದ ಎಲ್ಲ ಸಹಕಾರವನ್ನು ನೀಡಲಾಗುವುದು. ಪ್ರತಿ ಹಂತದಲ್ಲಿ ನಿಯೋಜಿತ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಶಿಸ್ತಿನಿಂದ ನಿರ್ವಹಿಸುವ ಮೂಲಕ ಯಶಸ್ವಿಯಾಗಿ ಪರೀಕ್ಷೆಗಳನ್ನು ನಡೆಸಬೇಕೆಂದು ಸೂಚನೆ ನೀಡಿದರು.


     ಎಎಸ್‍ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾತನಾಡಿ, ಪರೀಕ್ಷೆ ಕೂಡ ಒಂದು ಮಿನಿ ಚುನಾವಣೆ ಇದ್ದ ಹಾಗೆ. ವಿದ್ಯಾರ್ಥಿಗಳು ನಿರ್ಭೀತರಾಗಿ, ಉತ್ತಮವಾಗಿ ಪರೀಕ್ಷೆಗಳನ್ನು ಎದುರಿಸಬೇಕು. ಪರೀಕ್ಷೆಗಳು ಸುಗಮವಾಗಿ ನಡೆಯಲು ಪೊಲೀಸ್ ಇಲಾಖೆ ವತಿಯಿಂದ ಅಗತ್ಯವಾದ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.
      ಜಿ.ಪಂ ಉಪಕಾರ್ಯದರ್ಶಿ ದಾಸೇಗೌಡ ಮಾತನಾಡಿ, ಚುನಾವಣೆ ಮತ್ತು ಪರೀಕ್ಷೆಗಳು ಒಟ್ಟಾಗಿ ಘೋಷಣೆಯಾಗಿವೆ. ಎರಡನ್ನೂ ಸುಗವಾಗಿ ನಡೆಸುವಂತಹ ವ್ಯವಸ್ಥೆ ಮಾಡಿಕೊಂಡು ಯಶಸ್ವಿಗೊಳಿಸಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಪರೀಕ್ಷೆಗಳನ್ನು ಬರೆಯುವ ಮೂಲಕ ಜಿಲ್ಲೆಗೆ ಉನ್ನತ ಸ್ಥಾನ ತಂದು ಕೊಡಬೇಕೆಂದರು.
       ಡಯಟ್ ಪ್ರಾಂಶುಪಾಲರಾದ ಬಸವರಾಜಪ್ಪ ಮಾತನಾಡಿ, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೆ ಶಿಕ್ಷಕರು ಉತ್ತಮವಾಗಿ ಪ್ರೋತ್ಸಾಹ ನೀಡಿದ್ದಾರೆ. ಗುಣಮಟ್ಟದ ಫಲಿತಾಂಶ ಬರುವುದೆಂಬ ಭರವಸೆ ಇದೆ ಎಂದರು.
      ಆರ್‍ಸಿಹೆಚ್ ಅಧಿಕಾರಿ ಡಾ.ನಾಗರಾಜ ನಾಯ್ಕ್ ಮಾತನಾಡಿ, ಮಕ್ಕಳು ಪರೀಕ್ಷೆಗೆ ಮಾನಸಿಕವಾಗಿ ಸಿದ್ದತೆ ಮಾಡಿಕೊಳ್ಳಬೇಕು. ಬೆಳಿಗ್ಗೆ ನಿಯಮಿತವಾಗಿ ತಿಂಡಿ ತಿನ್ನಬೇಕು. ಬೇಸಿಗೆ ಸಮಯವಾದ್ದರಿಂದ ಪದೇ ಪದೇ ಶುದ್ದ ಕುಡಿಯುವ ನೀರನ್ನು ಕುಡಿಯಬೇಕು. ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.


      ಡಿಡಿಪಿಐ ಪರಮೇಶ್ವರಪ್ಪ ಸಿ ಆರ್ ಮಾತನಾಡಿ, ಮಾ.25 ರಂದು ಪ್ರಥಮ ಭಾಷೆ, ಮಾ27 ರಂದು ಸಮಾಜ ವಿಜ್ಞಾನ, ಮಾ.30 ರಂದು ವಿಜ್ಞಾನ, ಏ.02 ರಂದು ಗಣಿತ, ಏ.04 ರಂದು ತೃತೀಯ ಭಾಷೆ ಮತ್ತು ಏ.06 ರಂದು ದ್ವಿತೀಯ ಭಾಷೆ ಪರೀಕ್ಷೆಗಳು ನಡೆಯಲಿವೆ.
      2023-24 ನೇ ಸಾಲಿಗೆ ಜಿಲ್ಲೆಯಲ್ಲಿ ರೆಗ್ಯುಲರ್ ವಿದ್ಯಾರ್ಥಿಗಳು 22044, ಪುನರಾವರ್ತಿತ 1430, ಖಾಸಗಿ 384 ಮತ್ತು ಖಾಸಗಿ ಪುನರಾವರ್ತಿತ 144 ಸೇರಿದಂತೆ ಒಟ್ಟು 24002 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 78 ಪರೀಕ್ಷಾ ಕೇಂದ್ರಗಳು ಇದ್ದು, 78 ಮುಖ್ಯ ಅಧೀಕ್ಷಕರು, 24 ಉಪ ಮುಖ್ಯ ಅಧೀಕ್ಷಕರನ್ನು ನೇಮಿಸಲಾಗಿದೆ.


    102 ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, 31 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಯಾವುದೇ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸದಂತೆ ಹಾಗೂ ಯಾವುದೇ ವಿದ್ಯುನ್ಮಾನ ಉಪಕರಣವನ್ನು ಪರೀಕ್ಷಾ ಕೇಂದ್ರದೊಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದ ಅವರು ಪರೀಕ್ಷೆಗೆ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳ ಕುರಿತು ವಿವರವಾಗಿ ತಿಳಿಸಿದ ಅವರು ಪರೀಕ್ಷೆಗಳು ಮತ್ತು ಚುನಾವಣೆಯನ್ನು ಸುಗಮವಾಗಿ ನಡೆಸಬೇಕಿದ್ದು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
      ಸಭೆಯಲ್ಲಿ ಎಲ್ಲ ತಾಲ್ಲೂಕುಗಳ ಬಿಇಓ ಗಳು, ಶಿಕ್ಷಣಾಧಿಕಾರಿಗಳು, ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಹಾಜರಿದ್ದರು.

Exit mobile version