Site icon TUNGATARANGA

ಜೆ.ಎನ್.ಎನ್.ಸಿ.ಇ: ನೂತನ ಸಿವಿಲ್ ಎಕ್ಸಲೆನ್ಸ್ ಸೆಂಟರ್ ಉದ್ಘಾಟನೆ | ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಜೊತೆಗೆ ಒಡಂಬಡಿಕೆ ಇಂಡಸ್ಟ್ರಿ ಅಕಾಡೆಮಿಯ ಸಂಬಂಧ ಅತ್ಯಗತ್ಯ: ಪ್ರಾದೇಶಿಕ ಮುಖ್ಯಸ್ಥ ಪುನ್ನೊಸ್ ಪಿ ಜಾನ್ ಅಭಿಪ್ರಾಯ

ಶಿವಮೊಗ್ಗ : ಉದ್ಯೋಗ ನೀಡುವ ಸಂಸ್ಥೆ ಹಾಗೂ ಶೈಕ್ಷಣಿಕ ವಿದ್ಯಾಸಂಸ್ಥೆಗಳ ನಡುವೆ ಉತ್ತಮ

ಸಂಬಂಧ ಅತ್ಯಗತ್ಯ ಎಂದು ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಪ್ರಾದೇಶಿಕ ಮುಖ್ಯಸ್ಥರಾದ ಪುನ್ನೊಸ್ ಪಿ ಜಾನ್ ಅಭಿಪ್ರಾಯಪಟ್ಟರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಶುಕ್ರವಾರ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಜೊತೆಗೂಡಿ ನೂತನವಾಗಿ ನಿರ್ಮಾಣಗೊಂಡಿರುವ ಸಿವಿಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಉದ್ಘಾಟಿಸಿ ಮಾತನಾಡಿದರು.

ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಸುಸ್ಥಿರ ನಿರ್ಮಾಣ ಕಾರ್ಯದಲ್ಲಿ ನಾವೀನ್ಯತೆಯ ಪ್ರಯೋಗಗಳನ್ನು ನಡೆಸಲು ಸೆಂಟರ್ ಆಫ್ ಎಕ್ಸಲೆನ್ಸ್ ಸಹಕಾರಿಯಾಗಿದ್ದು, ಕಂಪನಿಗಳ ಅವಶ್ಯಕತೆ ಮತ್ತು ಶೈಕ್ಷಣಿಕ ಕಲಿಕೆಯ ನಡುವಿನ ಅಂತರ ಕಡಿತಗೊಳಿಸಲು ಪೂರಕವಾಗಿದೆ.  ವಿದ್ಯಾರ್ಥಿಗಳ‌ ಪರಿಣಾಮಕಾರಿ ಒಳಗೊಳ್ಳುವಿಕೆ ಇದ್ದಾಗ ಮಾತ್ರ ಇಂತಹ ಸೆಂಟರ್ ಗಳ ನಿಜವಾದ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಸಿವಿಲ್ ಎಂಬುದು ನಾಗರಿಕತೆಯ ಒಂದು ಲಕ್ಷಣ. ರಸ್ತೆ ಅಣೆಕಟ್ಟುಗಳಂತಹ ಸಾವಿರಾರು ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗಿದ್ದು ಸಿವಿಲ್ ಎಂಜಿನಿಯರಿಂಗ್ ನಿಂದ . 

ಅಂದಿನ ದಿನಮಾನದಲ್ಲಿ ಯಾವುದೇ ಕಾಮಗಾರಿ ನಡೆಸಲು ಸಿಮೆಂಟ್ ಮೂಟೆಗಳನ್ನು ಜಿಲ್ಲಾಧಿಕಾರಿಗಳು ಹಂಚಿಕೆ ಮಾಡಬೇಕಿತ್ತು. ಮನೆಗಳನ್ನು ನಿರ್ಮಾಣ ಮಾಡುವಾಗ ಅನುಭವಗಳೆ ಎಂಜಿನಿಯರ್ ಜ್ಞಾನ ನೀಡುತ್ತಿತ್ತು. ಕಾಲ ಬದಲಾಗಿದ್ದರು ಸಹ, ಭವಿಷ್ಯ ಕಟ್ಟಿಕೊಳ್ಳುವಾಗ ಇತಿಹಾಸದ ಅರಿವು ಪಡೆಯುವುದನ್ನು ಮರೆಯಬಾರದು ಎಂದು ಹೇಳಿದರು.

ಇದೇ ವೇಳೆ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಹಾಗೂ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ನಡುವೆ ಒಡಂಬಡಿಕೆಗೆ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಪ್ರಾದೇಶಿಕ ಮುಖ್ಯಸ್ಥರಾದ ಪುನ್ನೊಸ್ ಪಿ ಜಾನ್ ಸಹಿ ಮಾಡಿದರು.

ಜೆ.ಎನ್.ಎನ್.ಸಿ.ಇ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಲ್ಟ್ರಾಟೆಕ್ ಕಂಪನಿಯ ರಾಘವೇಂದ್ರ ದೇಸಾಯಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ನಿರ್ದೇಶಕರಾದ ಎನ್.ಟಿ.ನಾರಾಯಣರಾವ್, ಹೆಚ್.ಸಿ.ಶಿವಕುಮಾರ್, ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಕಾರ್ತಿಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

**********

ನಾವೀನ್ಯ ಉಪಕರಣಗಳ ಪ್ರಯೋಗಾಲಯ

ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಜೊತೆಗೂಡಿ ನೂತನವಾಗಿ ನಿರ್ಮಾಣಗೊಂಡಿರುವ ಸೆಂಟರ್ ಆಫ್ ಎಕ್ಸಲೆನ್ಸ್, ಸಿವಿಲ್ ಕ್ಷೇತ್ರದ ಅನೇಕ ನಾವೀನ್ಯ ಉಪಕರಣಗಳನ್ನು ಹೊಂದಿದೆ. ಮಳೆ ನೀರು ಕೊಯ್ಲಿನ ಫಿಲ್ಟರ್ ಗಳ ನಿರ್ಮಾಣ ಮತ್ತು ಸಂಶೋಧನೆ, ಅಕ್ವಾಸೀಲ್ ಗಳು, ಲೈಟ್ ಕಾನ್, ಡೆಕೊರ್ ಟೈಲ್ಸ್ ಗಳು, ಪರ್ವಿಯಸ್ ಕಾಂಕ್ರೀಟ್, ವಿವಿಧ ಬಗೆಯ ಸಿಮೆಂಟ್ ಟೈಲ್ಸ್ ಗಳ ಬಗ್ಗೆ ನಾವೀನ್ಯ ಪ್ರಯೋಗಗಳು ಹಾಗೂ ತರಬೇತಿಗಳನ್ನು ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ‌ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಜೊತೆಗೂಡಿ ನಡೆಸಲಿದ್ದಾರೆ.

Exit mobile version