Site icon TUNGATARANGA

ಕಸಾಪದಿಂದ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮ/ಅಸಾಧಾರಣ ಸಮಾಜವಾದಿ ಶಾಂತವೇರಿ ಗೋಪಾಲಗೌಡರು

ಶಿವಮೊಗ್ಗ : ಸತ್ಯ ಆವೇಶಗೊಂಡಾಗ ವಿಧಾನಸೌಧವನ್ನೆ ಗಡಗಡ ನಡುಗಿಸಿದ ಅಸಾಧಾರಣ ಸಮಾಜವಾದಿ ಶಾಂತವೇರಿ ಗೋಪಾಲಗೌಡರು ಎಂದು ಗೋಪಾಲಗೌಡರ ಶಿಷ್ಯ ಹಾಗೂ ಮಾಜಿ ಶಾಸಕರಾದ ಕೋಣಂದೂರು ಲಿಂಗಪ್ಪ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಗುರುವಾರ ಚಂದನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಾಂತವೇರಿ ಗೋಪಾಲಗೌಡರ ಬದುಕು ಹೋರಾಟ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. 

ನಾಯಕತ್ವಕ್ಕೆ ಗೌಡರೆಂದರೆ ಅವರೇ ಶಾಂತವೇರಿಯ ಗೋಪಾಲಗೌಡರು. ವೀರೇಂದ್ರ ಪಾಟೀಲರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಎಲ್ಲಾ ಶಾಸಕರಿಗೆ ನಿವೇಶನ ಹಂಚಿಕೆ ಮಾಡುವ ಯೋಜನೆ ರೂಪಿಸಲಾಗಿತ್ತು. ಇಪ್ಪತ್ತೆರಡು ಸಾವಿರ ಪಾವತಿಸಿ ಹಕ್ಕು ಪತ್ರ ಪಡೆಯಬಹುದಾಗಿತ್ತು. ಅಂತಹ ಅವಕಾಶ ತಿರಸ್ಕರಿಸಿದ ಅಂದಿನ ಶಾಸಕರಾಗಿದ್ದ ಗೋಪಾಲಗೌಡರು ವಸತಿ ಹೀನರಿಗೆ ನಿವೇಶನಗಳನ್ನು ಕೊಟ್ಟು ಉಳಿದರೆ ನನಗೆ ನೀಡಿ ಎಂದು ಪ್ರತಿಕ್ರಿಯಿಸಿದ್ದನ್ನು ಸ್ಮರಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸಮಾಜವಾದಿ ಚಿಂತನೆಗಳು ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆಯಿದೆ. ಕೂಡು ಕುಟುಂಬದ ದೊಡ್ಡ ವಿಸ್ತರಣೆಯೆ ಸಮಾಜವಾದ. ಒಟ್ಟು ಸಂಪನ್ಮೂಲವನ್ನು ಸಮಾಜದ ಪ್ರತಿಯೊಬ್ಬರಿಗೂ ಹಂಚಿಕೆಯಾಗುವಂತೆ ಮಾಡುವುದೇ ಸಮಾಜವಾದದ ದೊಡ್ಡ ಪರಿಕಲ್ಪನೆ. ಅಂತಹ ಚಿಂತನೆಗಳನ್ನು ಚಳುವಳಿಗಳ ಮೂಲಕ ಜನರ ಮನದಲ್ಲಿ ಬಿತ್ತರಿಸುವ ಕಾರ್ಯ ನಡೆಸಿದ ಅದ್ಭುತ ವ್ಯಕ್ತಿತ್ವ ಗೋಪಾಲಗೌಡರು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಸಾಹಿತಿ ಡಾ.ಎಂ.ಬಿ.ನಟರಾಜ ಮಾತನಾಡಿ, 

ಶಿಕ್ಷಕರು ಸಮಾಜದ ಪ್ರಭಾವಿ ಮಾಧ್ಯಮ. ಒಂದೇ ವೇದಿಕೆಯಲ್ಲಿ ನೂರಾರು ಭಾವಿ ಪ್ರಜೆಗಳನ್ನು ರೂಪಿಸುವ ಶಕ್ತಿ ಶಿಕ್ಷಕರಿಗಿದೆ. ಗೋಪಾಲಗೌಡರು ನಾಡು ಕಂಡ ಮೇರು ನಾಯಕರಾಗಿದ್ದು, ಅಂತಹ ಆದರ್ಶಯುತ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ.

ಹಣ ಮಾಡುವ ದಂಧೆಯಾಗಿ ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯಲ್ಲಿ ಗೋಪಾಲಗೌಡರಂತಹ ರಾಜಕಾರಣಿಯ ಬದುಕು, ಇಂದಿನ ಜನಾಂಗಕ್ಕೆ ಬಹಳ ದೊಡ್ಡ ಅಶ್ಚರ್ಯವೆ ಸರಿ. ಹಣವಿಲ್ಲದೆ ರಾಜಕೀಯ ಮಾಡಿದ ಗೋಪಾಲಗೌಡರು ಅತ್ಯಂತ ಪರಿಶುದ್ಧ ರಾಜಕಾರಣಿಯಾಗಿದ್ದರು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ರೈತ ಮುಖಂಡರಾದ ಕೆ.ಟಿ.ಗಂಗಾಧರ, ಕುವೆಂಪು ಶತಮಾನೋತ್ಸವ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಧು, ಅಲ್ ಮೊಹಮದ್ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೋಮಶೇಖರ್, ಪದಾಧಿಕಾರಿಗಳಾದ ಮಹಾದೇವಿ, ಪ್ರತಿಮಾ ಡಾಕಪ್ಪ, ಬಿ.ಟಿ.ಅಂಬಿಕಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಸ್ವಾಗತಿಸಿದರು. ಲೇಖಕ ಬಿ.ಚಂದ್ರೇಗೌಡ ನಿರೂಪಿಸಿದರು.

Exit mobile version