Site icon TUNGATARANGA

ಮಗ ಕಾಂತೇಶರಿಗೆ ಹಾವೇರಿ ಟಿಕೆಟ್ ಪಕ್ಕಾ: ನಂಬಿಕೆ/ ಸಿಗದಿದ್ದರೆ ನಮ್ ರೂಟ್ ಬೇರೆ ಎಂದ ಕೆಎಸ್ ಈಶ್ವರಪ್ಪ


ಶಿವಮೊಗ್ಗ, ಮಾ.೧೩:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭರವಸೆ ಮೇರೆಗೆ ಹಾವೇರಿ ಯಲ್ಲಿ ನಾನು ಮತ್ತು ಪುತ್ರ ಕೆ.ಇ. ಕಾಂತೇಶ್ ಪಕ್ಷ ಸಂಘಟನೆ ನಡೆಸಿ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ ಎಂದು ಮಾಜಿ ಉಪ ಮುಖ್ಯ ಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.


ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಮ್ಮ ಪಕ್ಷದಲ್ಲಿ ಕೇಂದ್ರೀಯ ಚುನಾವಣಾ ಸಮಿತಿಯೇ ಅಭ್ಯರ್ಥಿಗಳ ಆಯ್ಕೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ಫೈನಲ್ ಮಾಡಿಲ್ಲ. ಪುತ್ರನಿಗೆ ಹಾವೇರಿ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.


ಯಡಿಯೂರಪ್ಪ ಅವರ ಭೇಟಿಯ ಸಂದರ್ಭದಲ್ಲಿ ಹಾವೇರಿ ಸಂಸದ ಶಿವಕು ಮಾರ ಉದಾಸಿ ಚುನಾವಣೆಗೆ ಸ್ಪರ್ಧಿ ಸುವುದಿಲ್ಲ ಎಂದು ಹೇಳಿದ್ದಾರೆ. ಕಾಂತೇಶ್ ಗೆ ಟಿಕೆಟ್ ಕೊಡಿಸುತ್ತೇನೆ. ಕ್ಷೇತ್ರದಲ್ಲಿ ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದ ರಿಂದಲೇ ಹಾವೇರಿಯಲ್ಲಿ ಈಗಾಗಲೇ ಪ್ರಚಾರ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಸಂಜೆ ಬಂಜಾರ ಸಮು ದಾಯ ಭವನದಲ್ಲಿ ಸಭೆ ಕರೆಯಲಾಗಿದೆ. ಬೆಂಬಲಿಗರು ಬಿಜೆಪಿ ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ. ಶುಕ್ರವಾರದ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಹಿರಿಯರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ನಮ್ಮ ಪಕ್ಷದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಸಂಸ್ಕಾರ ಕಲಿಸಲಾಗಿದೆ. ಹಾಗಾಗಿ ನಾವು ಸಭೆ ಸೇರಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.


ಪ್ರಹ್ಲಾದ್ ಜೋಶಿ ನನ್ನ ಆತ್ಮೀಯ ಸ್ನೇಹಿತರಾಗಿದ್ದು, ಶಿವಮೊಗ್ಗಕ್ಕೆ ಬಂದಾಗಲೆಲ್ಲ ನಮ್ಮ ಮನೆಗೆ ಬರುತ್ತಾರೆ. ಅವರೊಂದಿಗೆ ಟಿಕೆಟ್ ವಿಚಾರವಾಗಿ ಚರ್ಚೆ ಆಗಿದೆ. ಬಿಜೆಪಿಯ ಹಿರಿಯ ನಾನಲ್ಲ ಎಂದರೆ ತಪ್ಪಾಗುತ್ತದೆ. ಬಿಜೆಪಿ ನನಗೆ ಶಾಸಕ, ಉಪ ಮುಖ್ಯಮಂತ್ರಿ ಸ್ಥಾನದವರೆಗೂ ಅವಕಾಶ ನೀಡಿದೆ. ನಾನು ಬಲಿಪಶು ಆಗಿಲ್ಲ. ಇದು ನನ್ನ ರಾಜಕೀಯ ಭವಿಷ್ಯದ ಪ್ರಶ್ನೆಯಾಗಿದೆ. ರಾಜ್ಯದ ಹಿಂದುಳಿದ ವರ್ಗಗಳ ರಾಜಕೀಯ ಭವಿಷ್ಯ ಇದರಲ್ಲಿ ಅಡಗಿದೆ. ಪಕ್ಷ ಉಳಿಯಬೇಕು ಎಂಬ ಉದ್ದೇಶ ನನ್ನದು. ನಾನು ಸಂಸದನಾಗುವ ಆಸೆ ಹೊಂದಿಲ್ಲ. ಪಕ್ಷದಲ್ಲಿನ ದೋಷ ಸರಿಯಾಗಬೇಕಾದರೆ ಚರ್ಚೆ ಅಗತ್ಯವಿದೆ ಎಂದು ಈಶ್ವರಪ್ಪ ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಈಶ್ವರಪ್ಪ ನವರ ಪರ ಅಭಿಮಾನಿಗಳು ಬ್ಯಾಟಿಂಗ್ ಮಾಡು ತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಮಾಡುತ್ತಿದ್ದು, ಯಡಿಯೂರಪ್ಪ ಪುತ್ರರಿಗೆ ಸ್ಥಾನ ಮಾನ ಸಿಕ್ಕಿದೆ. ಈಶ್ವರಪ್ಪನವರ ಪುತ್ರನಿಗೆ ಏನೂ ಕೊಡದೇ ಅನ್ಯಾಯ ಮಾಡಿದ್ದಾರೆ ಎಂದು ವೈರಲ್ ಆಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಹೌದು ನನಗೂ ಕೂಡ ಬಂದಿದೆ. ನೇರವಾಗಿ ಕೆಲ ಹಿತೈಷಿಗಳು ಈ ಮಾತನ್ನು ಹೇಳಿದ್ದಾರೆ. ಅದು ನನ್ನ ಅಭಿಪ್ರಾಯ ವಲ್ಲ, ಅವರಿಗೆ ತಿಳಿ ಹೇಳಿದ್ದೇನೆ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ ಬಗ್ಗೆ ಆಕ್ಷೇಪಿಸಿದ ಈಶ್ವರಪ್ಪ, ೧೯೪೭ರಲ್ಲಿ ದೇಶ ವಿಭಜನೆಯಾದಾಗ ಪಾಕಿಸ್ತಾನದಲ್ಲಿ ಶೇಕಡ ೨೦ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇಕಡ ೧.೯ರಷ್ಟು ಇದೆ. ಅದೇ ರೀತಿ ಆಫ್ಘಾನಿಸ್ತಾನ ಬಾಂಗ್ಲಾದೇಶದಲ್ಲಿಯೂ ಹಿಂದೂಗಳ ಸಂಖ್ಯೆ ಭಾರಿ ಕಡಿಮೆಯಾಗಿದೆ. ಇದಕ್ಕೆ ಅತ್ಯಾಚಾರ, ಮತಾಂತರ, ಕೊಲೆ ಕಾರಣವಿರಬಹುದು. ಈ ಬೆಳವಣಿಗೆಗೆ ಕಾಂಗ್ರೆಸ್ ಹೇಳುವುದೇನು ಎಂದು ಪ್ರಶ್ನಿಸಿದರು.


ಮುಸ್ಲಿಂ ಮುಖಂಡರು ಮತ್ತು ರಾಷ್ಟ್ರಭಕ್ತ ಮುಸಲ್ಮಾನರು ಸಿಎಎ ಬಗ್ಗೆ ಸ್ವಾಗತ ಮಾಡಿದ್ದಾರೆ, ಆದರೆಮ ನುಸುಳುಕೋರರ ಪರವಾಗಿರುವ ಕಾಂಗ್ರೆಸ್ ಮುಸಲ್ಮಾನರ ಬಗ್ಗೆ ಆಸಕ್ತಿ ಜಾಸ್ತಿ ಹೊಂದಿದೆ, ಇದನ್ನು ರಾಷ್ಟ್ರಭಕ್ತರು ಗಮನಿಸುತ್ತಿ ದ್ದಾರೆ. ರಾಷ್ಟ್ರ ದ್ರೋಹಿಗಳಿಗೆ ಬೆಂಬಲ ನೀಡುತ್ತಿ ರುವ ಕಾಂಗ್ರೆಸ್ ಗೆ ಚುನಾವಣೆಯಲ್ಲಿ ದೇಶದ ಜನ ಉತ್ತರ ಕೊಡುತ್ತಾರೆ, ಸಿಎಎ ಜಾರಿಯಿಂದ ಸಂವಿಧಾನ ಉಲ್ಲಂಘನೆಯಾಗಿಲ್ಲವೆಂದು ಕಾನೂನು ತಜ್ಞರೇ ಹೇಳುತ್ತಿದ್ದಾರೆ. ರಾಷ್ಟ್ರ ದ್ರೋಹಿಗಳಿಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ರಾಷ್ಟ್ರದ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಸಂದರ್ಭದಲ್ಲಿ ಸಿಎಎ ಜಾರಿ ಬೇಕಿತ್ತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅವರಿಗೆ ಚುನಾವಣೆ ಸಂದರ್ಭದಲ್ಲಿ ಜಾತಿ ಗಣತಿ ವರದಿ ಬೇಕಿತ್ತೆ ಎಂದು ಪ್ರಶ್ನಿಸುತ್ತೇನೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ೨೫ ಸ್ಥಾನಗಳನ್ನು ಗೆದ್ದಿತ್ತು. ಈಗ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಎಲ್ಲಾ ೨೮ ಸ್ಥಾನಗಳಲ್ಲಿಯೂ ಜಯಗಳಿಸುತ್ತೇವೆ. ನಮಗೂ ರಾಜಕಾರಣ ಗೊತ್ತಿದೆ. ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗಿದೆ. ದೇವೇಗೌಡರ ಬಗ್ಗೆ ಸಿದ್ದು ಟೀಕೆ ಮಾಡುವುದು ಸರಿಯಲ್ಲ. ಆಗ ಜೆಡಿಎಸ್ ಪಕ್ಷದಲ್ಲಿದ್ದ ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಇಂದಿರಾ ಗಾಂಧಿ, ಸೋನಿಯಾ ಗಾಂಧಿಯವರೇ ಬಗ್ಗೆ ಎಂತಹ ಹೇಳಿಕೆ ನೀಡಿದ್ದರು ಎಂಬುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.


ಮೋದಿಯವರಿಗೆ ವೀಸಾ ಕೊಡಲು ನಿರಾಕರಿಸಿದ್ದ ದೇಶಗಳು ಇಂದು ರತ್ನಗಂಬಳಿ ಸ್ವಾಗತ ನೀಡುತ್ತಿವೆ. ದೇವೇಗೌಡರು ಬದಲಾಗಿದ್ದರಲ್ಲಿ ತಪ್ಪೇನಿದೆ? ಪ್ರಧಾನಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಶಾಸಕ ಎಸ್.ಎನ್. ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಅಣ್ಣಪ್ಪ, ಚಂದ್ರಶೇಖರ್, ಶ್ರೀನಾಗ್ ಇದ್ದರು.

Exit mobile version