ಶಿವಮೊಗ್ಗ,ಮಾ.೧೧:ನಾಳೆಯಿಂದ ಆರಂಭವಾಗಲಿರುವ ಶ್ರೀ ಕೋಟೆ ಮಾರಿಕಾಂಬಾ ಜಾತ್ರೆಗೆ ಅಂತಿಮ ಸಿದ್ದತೆಗಳು ಪೂರ್ಣಗೊಳ್ಳುತ್ತಿವೆ. ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆಯನ್ನು ೫ ದಿನಗಳ ಕಾಲ ಆಚರಿಸಲಾಗುವುದು ಎಂದು ಶ್ರೀಕೋಟೆ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಹೇಳಿದರು.
ಅವರು ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಳೆಯಿಂದ ೫ ದಿನಗಳ ಕಾಲ ನಡೆಯುವ ಮಾರಿಕಾಂಬಾ ಜಾತ್ರೆಗೆ ಸಕಲ ಸಿದ್ದತೆಗಳು ನಡೆದಿವೆ. ಮುಖ್ಯವಾಗಿ ದೇವಸ್ಥಾನದ ಮುಂಭಾಗ ನವದುರ್ಗಿ ಅಲಂಕಾರ ಮಾಡಲಾಗಿದೆ. ಚಂದ್ರಘಂಟಿ ದೇವಿ ಎಂದು ಕರೆಯುವ ಈ ಅಲಂಕಾರವನ್ನು ನೆಲಮಟ್ಟದಿಂದ ೪೬ ಅಡಿ ಎತ್ತರದ ಪ್ರತಿಕೃತಿಯನ್ನು ರಚಿಸಲಾಗಿದೆ. ಈಗಾಗಲೇ ಸಾವಿರಾರು ಜನರನ್ನು ಇದು ಆಕರ್ಷಿಸುತ್ತಿದೆ. ಜೀವನ್ ಎಂಬ ಕಲಾವಿದ ಇದನ್ನು ರಚಿಸಿದ್ದಾರೆ. ಅತ್ಯಂತ ಸುಂದರವಾಗಿದೆ. ಇದನ್ನು ನೋಡಲೆಂದೇ ಸಾವಿರಾರು ಜನರು ಬರುತ್ತಿದ್ದಾರೆ ಎಂದರು.
ದೇವಸ್ಥಾನದಿಂದ ಗಾಂಧಿಬಜಾರ್‌ವರೆಗೆ ನೆರಳನ್ನು ಕಲ್ಪಿಸಲಾಗಿದೆ. ಶಾಮಿಯಾನ ಹಾಕಲಾಗಿದೆ. ಈ ಬಾರಿ ಜನರ ಅಭಿಪ್ರಾಯದ ಮೇರೆಗೆ ಬಿ.ಹೆಚ್.ರಸ್ತೆಯಲ್ಲಿಯೂ ಕೂಡ ಶಾಮಿಯಾನ ಹಾಕಲಾಗಿದೆ. ಎಲ್ಲ ಕಡೆ ವಿದ್ಯುತ್ ದೀಪಲಂಕಾರ ಮಾಡಲಾಗಿದೆ. ಜೊತೆಗೆ ಬುದುವಾರ ಒಂದು ದಿನ ಬಿಟ್ಟು ಉಳಿದ ದಿನಗಳಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮತ್ತೊಂದು ಕಡೆ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯೂ ಸಹ ನಡೆಯಲಿದೆ ಎಂದರು.
ದೇವಸ್ಥಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಮಾತನಾಡಿ ಮಂಗಳವಾರ ಶ್ರೀಮಾರಿಕಾಂಬ ದೇವಿಯನ್ನು ಗಾಂಧಿಬಜಾರ್‌ನ ತವರುಮನೆಯಲ್ಲಿ ಉಡಿತುಂಬಿ ಪೂಜಿಸಲಾಗುತ್ತದೆ. ಗಾಂಧಿಬಜಾರಿನಲ್ಲಿರುವ ಶ್ರೀಮಾರಿಕಾಂಬೆಯ ದರ್ಶನ ಮಾಡಲು ಅಂಗವಿಕಲರಿಗೆ ಮತ್ತು ತುಂಬು ಗರ್ಭೀಣಿಯರಿಗೆ ಮಾತ್ರ ಪ್ರತ್ಯೇಕ ವ್ಯವಸ್ಥೆ ಉಚಿತ ಅವಕಾಶ ನೀಡಲಾಗಿದೆ. ಸಾರ್ವಜನಿಕರಿಗೆ ಸಾಮಾನ್ಯ ಸರತಿಯಲ್ಲಿಯೇ ಬರಬೇಕು. ಆದರೆ, ವಿಶೇಷ ಪಾಸನ್ನು ನೀಡಲಾಗುವುದು. ಈ ವಿಶೇಷ ಪಾಸಿನ ಬೆಲೆ ೨೦೦ ರೂ.ಗಳಾಗಿದ್ದ ಇಬ್ಬರಿಗೆ ಮಾತ್ರ ಇದರಲ್ಲಿ ಅವಕಾಶವಿರುತ್ತದೆ ಎಂದರು.
ಬುಧವಾರ ಬೆಳಿಗ್ಗೆ ೪ ಕ್ಕೆ ಶ್ರೀಮಾರಿಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ವಿವಿಧ ಸಮಾಜದವರ ಪೂಜೆಯ ನಂತರ ಪ್ರತಿದಿನವೂ ಪೂಜೆ ನಡೆಯುತ್ತದೆ. ಪ್ರಸಾದದ ವ್ಯವಸ್ಥೆ ಕೂಡ ಇರುತ್ತದೆ. ಸರತಿ ಸಾಲಿನಲ್ಲಿ ಬರುವವರೆಗೆ ಅಲ್ಲಲ್ಲಿ ಪಾನಕ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಒಟ್ಟಾರೆ ಈ ಬಾರಿಯ ಶ್ರೀಮಾರಿಕಾಂಬಾ ಜಾತ್ರೆಯು ಅತ್ಯಂತ ವಿಶಿಷ್ಟವಾಗಿ, ವಿಜೃಂಭಣೆಯಿಂದ ನಡೆಯಲಿದೆ. ಮಾ.೧೬ರ ಶನಿವಾರ ರಾತ್ರಿ ೭ಕ್ಕೆ ಶ್ರೀಮಾರಿಕಾಂಬೆ ಉತ್ಸವ, ವಿವಿಧ ಜನಪದ ತಂಡಗಳ ಮೆರಗಿನೊಂದಿಗೆ ಅಮ್ಮನವರನ್ನು ವನಪ್ರವೇಶಕ್ಕೆ ಕಳಿಸಿಕೊಡುವ ಮೂಲಕ ೨ ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ತೆರೆ ಎಳೆಯಲಾಗುತ್ತದೆ ಎಂದರು.