ಶಿವಮೊಗ್ಗ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸುಮಾರು 400ಕ್ಕೂ ಅಧಿಕ ಸ್ಥಾನ ಪಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಯೋಜನೆಗಳ ಜತೆಗೆ ರಾಷ್ಟ್ರೀಯ ವಿಚಾರಗಳನ್ನಿಟ್ಟುಕೊಂಡು ಚುನಾವಣೆ ಎದುರಿಸಲಿದೆ. ನಮ್ಮ ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲಿ ನಮ್ಮ ಶಕ್ತಿ ತೋರಿಸಲಿದ್ದಾರೆ ಎಂದರು.
ಯುವಕರಿಗೆ, ರೈತರಿಗೆ, ಮಹಿಳೆಯರಿಗೆ, ಮತದಾರರಿಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಮಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಈ ಬಾರಿ ಮತ್ತೊಮ್ಮೆ ಹೆಚ್ಚಿನ ಅಂತರದಿಂದ ಬಿಜೆಪಿ ಗೆಲ್ಲುತ್ತದೆ ಎಂದರು.
ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ನಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಂಸದ ರಾಘವೇಂದ್ರ, ಶಿವಮೊಗ್ಗದಲ್ಲಿ ನಡೆದ ಎಲ್ಲಾ ಚುನಾವಣೆಗಳು ನೇರ ಸ್ಪರ್ಧೆ ಎದುರಿಸಿದೆ. ಬಂಗಾರಪ್ಪನವರು ಸ್ಪರ್ಧಿಸಿದಾಗಲೂ ನೇರ ಸ್ಪರ್ಧೆ ಇತ್ತು. ಯಡಿಯೂರಪ್ಪನವರು ಸ್ಪರ್ಧಿಸಿದಾಗ ಮಾತ್ರ ತ್ರಿಕೋನ ಸ್ಪರ್ಧೆ ಇತ್ತು. ಎಲ್ಲಾ ಸವಾಲುಗಳನ್ನು ಬಿಜೆಪಿ ಎದುರಿಸಿದೆ. ಈ ಬಾರಿಯೂ ಎದುರಿಸುತ್ತೇವೆ. ಒಳ್ಳೆಯ ವಾತಾವರಣ ಇದೆ. ಈ ವಾತಾವರಣವನ್ನು ಮತಗಳನ್ನಾಗಿ ಪರಿವರ್ತಿಸುತ್ತೇವೆ. ಮೋದಿ ಅಭಿವೃದ್ಧಿ ಕೆಲಸ ಇಟ್ಟುಕೊಂಡು ಮತ ಕೇಳುತ್ತೇವೆ. ಮೋದಿ ಅವರ ಬಗ್ಗೆ ಗೌರವ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು ತಾತ್ಕಾಲಿಕವಷ್ಟೇ ಎಂದರು.
ಕುಮಾರ್ ಬಂಗಾರಪ್ಪ ಅವರ ಬಗ್ಗೆ ಪ್ರತಿಕ್ರಿಯೆ ನೀಡಿ ಅವರ ವೈಯಕ್ತಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಈಗ ಚುನಾವಣೆ ಬಂದಿದೆ. ಈ ಸಂದರ್ಭದಲ್ಲಿ ತಮ್ಮನ್ನು ತಾವು ಚುನಾವಣೆಗಾಗಿ ತೊಡಗಿಸಿಕೊಳ್ಳುತ್ತಾರೆ ಎಂದರು.
ನಿನ್ನೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕೊಡುಗೆಯಾಗಿ ಉಜ್ವಲ ಯೋಜನೆ ಸಿಲಿಂಡರ್ ಬೆಲೆ 100 ರೂ ಕಡಿಮೆ ಆಗಿದೆ ಇದನ್ನು ಸ್ವಾಗತಿಸುತ್ತೇನೆ. ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿದ್ದಾರೆ. ಸುಧಾಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.