ಶಿವಮೊಗ್ಗ: ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಬರೋಬ್ಬರಿ 3 ರಿಂದ 4 ವರ್ಷಗಳಾಗಿದ್ದರೂ, ಇದುವರೆಗೂ ಈ ಟ್ಯಾಂಕ್ ಉದ್ಘಾಟನೆಗೊಂಡಿಲ್ಲ. ಜೊತೆಗೆ ಈ ಟ್ಯಾಂಕ್ ಒಂದೇ ಒಂದು ಹನಿ ನೀರಿನ ಭಾಗ್ಯವನ್ನು ಕಂಡಿಲ್ಲ. ಈ ಮೂಲಕ ನಗರದ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿರುವುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ವಾರ್ಡ್ ನಂ.1 ರ ಸೋಮಿನಕೊಪ್ಪದಲ್ಲಿ ಕರ್ನಾಟಕ ಜಲಮಂಡಳಿ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಆಶ್ರಯ ದಲ್ಲಿ ಅಮೃತ್ ಯೋಜನೆ ಯಡಿ 5 ಲಕ್ಷ ಲೀಟರ್ ಸಾಮರ್ಥ್ಯ ಮೇಲ್ಪಟ್ಟ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಸಲಾಗಿದ್ದು, ಉದ್ಘಾಟನಾ ಭಾಗ್ಯ ಕಾಣದೇ ಹಳ್ಳ ಹಿಡಿದಿದೆ.
ಈ ಟ್ಯಾಂಕ್ ಉದ್ಘಾಟನೆಯಾಗದ ಕಾರಣ ಈ ಭಾಗದಲ್ಲಿ ವಾಸಿಸುವ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಟ್ಯಾಂಕ್ ಇದುವರೆಗೂ ಒಂದು ಹನಿ ನೀರನ್ನು ಕಂಡಿಲ್ಲ.
ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಹಾಗೆಯೇ ಇದೆ ಎಂದರೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟಿರಬಹುದು ಎಂಬುದನ್ನು ಊಹಿಸಬಹುದಾಗಿದೆ.
ಸಂಸದ ಬಿ.ವೈ.ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ ನ ದಿಶಾ ಸಭೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದರು. ಆದರೆ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವಿಲ್ಲದಂತೆ ಇರುವುದು ಕಂಡುಬರುತ್ತಿದೆ.
ಬೇಸಿಗೆ ಆರಂಭವಾಗಿರುವುದರಿಂದ ನಗರದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಪರಡಾಡುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಕಛೇರಿಗಳಲ್ಲೇ ಮಗ್ನರಾಗಿರುವುದನ್ನು ಬಿಟ್ಟು ಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಜನಸ್ನೇಹಿಯಾಗಲೂ ಪ್ರಯತ್ನಿಸಬೇಕಿದೆ. ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು ಈ ವಾರ್ಡ್ ಗೆ ಭೇಟಿ ನೀಡಿ ಇಲ್ಲಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.